Advertisement

ಕೋಮುವಾದದ ಮೂಲಕ ಬಿಜೆಪಿಯಿಂದ ದೇಶ ವಿಭಜನೆ: ರಣದೀಪ್ ಸುರ್ಜೇವಾಲಾ ಟೀಕೆ

12:52 PM Oct 09, 2022 | Team Udayavani |

ದಾವಣಗೆರೆ: ಬಿಜೆಪಿ ಹೊಸ ಈಸ್ಟ್ ಇಂಡಿಯಾ ಕಂಪನಿ ಎಂದು ಎಐಸಿಸಿ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ದೂರಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಈಸ್ಟ್ ಇಂಡಿಯಾ ಕಂಪನಿ ಮಾದರಿಯಲ್ಲೇ ಭಾರತವನ್ನು ಕೋಮುವಾದದ ಮೂಲಕ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ದೇಶವನ್ನು ವಿಭಜಿಸುವ ಕೆಲಸ ಮಾಡಿಲ್ಲ ಎಂದು ತಿಳಿಸಿದರು.

ಸ್ವಾತಂತ್ರ್ಯ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷ, ಮುಖಂಡರಾಗಲಿ 3,750 ಕಿಲೋಮೀಟರ್ ನಷ್ಟು ಪಾದಯಾತ್ರೆ ನಡೆಸಿದ ಉದಾಹರಣೆ ಇಲ್ಲ. ರಾಹುಲ್ ಗಾಂಧಿಯವರು ಆ ಕೆಲಸ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಜನಸಾಮಾನ್ಯರ, ರೈತರ, ವಿದ್ಯಾವಂತರ, ನಿರುದ್ಯೋಗಿಗಳು, ಮಹಿಳೆಯರ ಸಮಸ್ಯೆ ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬೆಲೆ ಏರಿಕೆ, ಭ್ರಷ್ಟಾಚಾರ, ಕೋಮುವಾದ ಮತ್ತು ನಿರುದ್ಯೋಗ ಸಮಸ್ಯೆ ವಿರುದ್ದ ಮತ್ತು ಭಾರತವನ್ನು ಪುನರ್ ಜೋಡಿಸುವ, ಒಗ್ಗೂಡಿಸುವ ಮಹತ್ತರ ಉದ್ದೇಶದಿಂದ ಭಾರತ್ ಜೋಡೋ ಅಭಿಯಾನ ನಡೆಸಲಾಗುತ್ತಿದೆ. ಕಾಂಗ್ರೆಸ್ ಎಂದೆಂದಿಗೂ ಭಾರತ ಮತ್ತು ಸಮುದಾಯವನ್ನು ವಿಭಜಿಸುವ ಕೆಲಸ ಮಾಡಿಲ್ಲ. ಬಿಜೆಪಿ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಅಧಿನಾಯಕ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಅ. 10 ರಂದು ಚಿತ್ರದುರ್ಗ ಪ್ರವೇಶಿಸಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

Advertisement

ಭಾರತವನ್ನು ಮತ್ತೆ ಒಗ್ಗೂಡಿಸುವ ಮಹತ್ವದ ಉದ್ದೇಶದಿಂದ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3, 750 ಕಿಲೋಮೀಟರ್ ಉದ್ದದ ಯಾತ್ರೆ ಹಮ್ಮಿಕೊಂಡಿದ್ದಾರೆ. ಕರ್ನಾಟಕದ ಎಂಟು ಜಿಲ್ಲೆಯಲ್ಲಿ 510 ಕಿಲೋಮೀಟರ್ ಯಾತ್ರೆ ನಡೆಯಲಿದೆ. ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆಯುತ್ತಿದೆ. ಬಳ್ಳಾರಿಯಲ್ಲಿ ಅ. 15 ರಂದು ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಕ್ರಿಕೆಟ್‌ ಬುಕ್ಕಿಯಿಂದ ಹಣ ಪಡೆದ ಆರೋಪ; ಐವರು ಪೊಲೀಸರ ಅಮಾನತು

ಬೆಲೆ ಏರಿಕೆಯಿಂದ ಜನಸಾಮಾನ್ಯರ ಸ್ಥಿತಿ ಗಂಭೀರವಾಗಿದೆ. ಪೆಟ್ರೋಲಿಯಂ ಉತ್ಪನ್ನ, ದಿನಸಿ ಇತರೆ ಬೆಲೆಗಳು ಊಹೆಗೂ ನಿಲುಕದಂತೆ ಹೆಚ್ಚಾಗುತ್ತಿವೆ. ದೇಶದ ಶೇ. 54 ರಷ್ಟು ಸಂಪತ್ತು ಕೇವಲ 9 ಜನರಲ್ಲಿದೆ. ಬಡವರು ಮತ್ತು ಶ್ರೀಮಂತ ರ ನಡುವಿನ ವ್ಯತ್ಯಾಸ ಅಗಾಧವಾಗಿ ಬೆಳೆಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಭಾರತದಲ್ಲೂ ಶ್ರೀಲಂಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಲೆ ಏರಿಕೆ ಆಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಕುಂಭಕರ್ಣ ರೀತಿ ನಿದ್ರೆ ಮಾಡುತ್ತಿವೆ. ಎರಡೂ ಸರ್ಕಾರಗಳನ್ನು ಎಚ್ಚರಿಸುವ, ಜಾಗೃತಗೊಳಿಸುವ ಉದ್ದೇಶದಿಂದ ಭಾರತ್ ಜೋಡೋ ಅಭಿಯಾನ ನಡೆಸುತ್ತಿದೆ ಎಂದು ತಿಳಿಸಿದರು.

ಈಗ ನಡೆಸಲಾಗುತ್ತಿರುವ ಪಾದಯಾತ್ರೆ ರಾಹುಲ್ ಗಾಂಧಿಯವರಾಗಲಿ, ಡಿ.ಕೆ. ಶಿವಕುಮಾರ್ ಅವರ ಯಾತ್ರೆ ಅಲ್ಲ. ಅದು ಜನರ ಪಾದಯಾತ್ರೆ ಎಂದು ತಿಳಿಸಿದರು.

ಪಾದಯಾತ್ರೆ ನಡೆಯುವ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅವರಿಗೆ ಇಡಿ ಮೂಲಕ ಸಮನ್ಸ್ ಕೊಡಿಸುವ ಮೂಲಕ ಪಾದಯಾತ್ರೆಯನ್ನ ವಿಚಲಿತಗೊಳಿಸುವ ಕೆಲಸ ಮಾಡುವ ನಡೆಸಿದ ಪ್ರಯತ್ನ ವಿಫಲವಾಗಿದೆ. ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಯಾವುದೇ ತಪ್ಪು ಮಾಡಿಲ್ಲ ಎಂದು ಸರ್ಮರ್ಥಿಸಿಕೊಂಡರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದಕ್ಷಿಣ, ಉತ್ತರ ಕನ್ನಡ, ಉಡುಪಿ ಜಿಲ್ಲೆ ಒಳಗೊಂಡಂತೆ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಪಾದಯಾತ್ರೆ, ಕಾರ್ಯಕ್ರಮ ನಡೆಸಲಿದೆ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಧ್ರುವನಾರಾಯಣ, ಶಾಸಕ ಎಸ್. ರಾಮಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಇತರರು ಸುದ್ದಿಗೋಷ್ಠಿ ಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next