ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಸಲು ಹಾಗೂ ಚುನಾವಣ ಪ್ರಚಾರ ಕಾರ್ಯಕ್ಕೆ ಅಧಿ ಕಾರಿಗಳಿಂದ ಉಂಟಾಗಿರುವ ಅಡ್ಡಿ, ತೊಂದರೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳ ಬೇಕು ಎಂದು ಕೇಂದ್ರ ಸಚಿವರ ನೇತೃತ್ವದ ಬಿಜೆಪಿ ನಿಯೋಗ ಚುನಾವಣ ಆಯೋಗಕ್ಕೆ ದೂರು ನೀಡಿದೆ.
ಕೇಂದ್ರ ಸಚಿವರಾದ ಅನಂತ ಕುಮಾರ್, ಪ್ರಕಾಶ್ ಜಾಬ್ಡೇಕರ್, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರನ್ನೊಳಗೊಂಡ ನಿಯೋಗ ಮನವಿ ಸಲ್ಲಿಸಿತು.
ಬಳಿಕ ಪತ್ರಕರ್ತರ ಜತೆ ಮಾತನಾಡಿದ ಆರ್. ಅಶೋಕ್, ಹಿಂದೂ ದೇವಾಲಯ ಗಳಲ್ಲಿ ಧ್ವಜಗಳ ತೆರವು, ಬೆಂಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಗಡೀಪಾರು, ಕಾರ್ಯಕರ್ತರ ಮನೆ, ಕಟ್ಟಡಗಳ ಮೇಲಿನ ಧ್ವಜ ತೆರವುಗೊಳಿಸುತ್ತಿರುವ ವಿಷಯವನ್ನು ಆಯೋಗದ ಗಮನಕ್ಕೆ ತರಲಾಯಿತು. ಮುಷ್ಟಿಧಾನ್ಯ ಅಭಿಯಾನದಲ್ಲಿ ರೈತರಿಂದ ಸಂಗ್ರಹಿಸಿದ ಧಾನ್ಯಗಳ ಅಡುಗೆಯ ಸಾಮೂಹಿಕ ಸೇವನೆ ಕಾರ್ಯಕ್ರಮಕ್ಕೂ ಅಡ್ಡಿಪಡಿಸದಂತೆ ಕ್ರಮ ಕೈಗೊಳ್ಳ ಬೇಕು ಎಂದು ಕೋರಲಾಗಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯ ಚುನಾವಣಾಧಿಕಾರಿ ಭರವಸೆ ನೀಡಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಹೊಸಪೇಟೆಯಲ್ಲಿ ಇಳಿಯುವುದಕ್ಕೆ ಅಡ್ಡಿಪಡಿಸಲಾಗಿದೆ. ಮೊದಲೇ ಅನುಮತಿ ಪಡೆದಿದ್ದರೂ ಅನಗತ್ಯ ತೊಂದರೆ ನೀಡಲಾಗಿದೆ ಎಂದು ಬಿಜೆಪಿ ದೂರು ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
ಸಂಜೀವ್ ಕುಮಾರ್, ಮುಖ್ಯ ಚುನಾವಣಾಧಿಕಾರಿ