Advertisement

ಸಾರ್ವತ್ರಿಕ ಆರೋಗ್ಯ ಯೋಜನೆ ಪರಿಷ್ಕರಣೆಗೆ ಬಿಜೆಪಿ ಆಗ್ರಹ

09:22 AM Oct 25, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಸಾರ್ವತ್ರಿಕ ಆರೋಗ್ಯ ಯೋಜನೆ ಹಾಗೂ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೆ ಕಡಿವಾಣ ಹಾಕುವ ಕಾಯ್ದೆ ಜಾರಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ಇವೆರಡನ್ನೂ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕೋಷ್ಠದ ಸಹ ಸಂಚಾಲಕ ಡಾ.ಪ್ರಶಾಂತ್‌ಕುಮಾರ್‌, ರಾಜ್ಯದಲ್ಲಿ ಈ ಮೊದಲು ಜಾರಿಯಲ್ಲಿದ್ದ ಎಲ್ಲಾ ಆರೋಗ್ಯ ಯೋಜನೆಗಳನ್ನು ಸೇರಿಸಿ ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಈ ಎಲ್ಲಾ ಯೋಜನೆಗಳು 600 ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ವೈದ್ಯಕೀಯ ಚಿಕಿತ್ಸೆಗೆ ಅನ್ವಯವಾಗುವುದಿಲ್ಲ. ಆರೋಗ್ಯ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾಗುವ 100 ಮಂದಿ ಪೈಕಿ 3 ಮಂದಿಗೆ ಮಾತ್ರ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಉಳಿದ 97 ಮಂದಿ ತಮ್ಮ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ. ಆದ್ದರಿಂದ ಅದು ಸಾರ್ವತ್ರಿಕ ಆರೋಗ್ಯ ಯೋಜನೆ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಅಲ್ಲದೆ, ಸರ್ಕಾರ ಎಲ್ಲರಿಗೂ ಈ ಯೋಜನೆಯ ಲಾಭ ಸಿಗುವಂತೆ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು. ಖಾಸಗಿ ಆಸ್ಪತ್ರೆಗಳ ಜತೆ ಸರ್ಕಾರಿ ಆಸ್ಪತ್ರೆಗಳನ್ನೂ ಸೇರಿಸಿ ಕಾಯ್ದೆ ರೂಪಿಸಬೇಕು. ಚುನಾವಣೆ ಕಾರಣಕ್ಕಾಗಿ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.

ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರು ವೈದ್ಯರ ಬಗ್ಗೆ ಕೀಳು ಮಾತುಗಳನ್ನು ಹೇಳುವುದನ್ನು ಬಿಟ್ಟು ತಾವು ಸಚಿವರಾದ ಮೇಲೆ ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳೇನು ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಖಾಸಗಿ ಮತ್ತು ಸರ್ಕಾರಿ ತಜ್ಞ ವೈದ್ಯರ ತಂಡ ರಚಿಸಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಿ.
 ●ಡಾ.ವಾಮನಾಚಾರ್ಯ, ರಾಜ್ಯ ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next