Advertisement

ಭ್ರಷ್ಟ ಸಚಿವರ ರಾಜೀನಾಮೆಗೆ ಬಿಜೆಪಿ ಆಗ್ರಹ

12:09 PM Aug 19, 2017 | Team Udayavani |

ಹುಬ್ಬಳ್ಳಿ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವರಾದ ಡಿ.ಕೆ. ಶಿವಕುಮಾರ, ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯ ಹು-ಧಾ ಮಹಾನಗರ ಜಿಲ್ಲಾ ವತಿಯಿಂದ ಶುಕ್ರವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆತಡೆ ನಡೆಸಿ, ಮೂವರ ಭಾವಚಿತ್ರ ದಹಿಸಿ ಪ್ರತಿಭಟಿಸಲಾಯಿತು. 

Advertisement

ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ನಂತರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೆಲ ನಿಮಿಷ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಉಪಾಧ್ಯಕ್ಷ ಮಾ. ನಾಗರಾಜ, ರಾಜ್ಯ ಕಾಂಗ್ರೆಸ್‌ ಸರಕಾರವು ಪ್ರತಿದಿನ ಹಗರಣ, ಭ್ರಷ್ಟಾಚಾರದಿಂದ ಆಡಳಿತ ನಡೆಸುತ್ತಿದೆ.

ಸಿದ್ದರಾಮಯ್ಯ ಆಡಳಿತವು ಭ್ರಷ್ಟ, ಮದ ತುಂಬಿದ ಹಾಗೂ ಸಂವೇದನಾ ರಹಿತ ತುಘಲಕ ಸರಕಾರವಾಗಿದೆ. ಸರಕಾರದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ ಅವರ ನಿವಾಸ, ಕಚೇರಿ ಸೇರಿದಂತೆ ಇನ್ನಿತರೆಡೆ ಆದಾಯ ತೆರಿಗೆ ದಾಳಿ ನಡೆದಿದೆ.

ನೋಟು ಅಪನಗದೀಕರಣ ವೇಳೆ ಸಚಿವ ರಮೇಶ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜ್‌ ಮನೆ ಮೇಲೆ ಆದಾಯ ತೆರಿಗೆ ದಾಳಿಯಾದಾಗ ಕೋಟ್ಯಂತರ ರೂ. ನಗದು, ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಸರಕಾರ ಇವರೆಲ್ಲರನ್ನು ಸಂಪುಟದಿಂದ ಕೈಬಿಡಲಿಲ್ಲ.

ಅದರ ಬದಲು ಭ್ರಷ್ಟರನ್ನೇ ಬೆಂಬಲಿಸುತ್ತಿದೆ. ಅವರು ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲವೆಂದರು. ಜಿಲ್ಲಾ ಪ್ರಭಾರಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಆದಾಯ ತೆರಿಗೆ ದಾಳಿಯನ್ನು ರಾಜ್ಯ ಸರಕಾರ ರಾಜಕಾರಣ ಮಾಡುತ್ತಿದೆ.

Advertisement

ತನ್ನ ಆಡಳಿತದಲ್ಲಿರುವ ಭ್ರಷ್ಟ ಶಾಸಕರು, ಸಚಿವರ ಮೇಲಿನ ಪ್ರಕರಣಗಳನ್ನು ಮುಚ್ಚಿಹಾಕುತ್ತಿದೆ. ಸಂಪುಟದಲ್ಲಿನ ಭ್ರಷ್ಟರ ಉಳಿವಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇಲೆ ಪ್ರಕರಣ ದಾಖಲಿಸಿದೆ. ಇದಕ್ಕೆ ಪಕ್ಷವು ಬಗ್ಗಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಸರಕಾರವನ್ನು ಕಿತ್ತೂಗೆಯುವ ಕೆಲಸ ಮಾಡಲಾಗುವುದು ಎಂದರು. 

ಪಾಲಿಕೆ ಸದಸ್ಯರಾದ ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ, ಮಾಜಿ ಮಹಾಪೌರ ವೆಂಕಟೇಶ ಮೆಸ್ತ್ರಿ, ಲಕ್ಷ್ಮಣ ಬೀಳಗಿ, ರಂಗಾ ಬದ್ದಿ, ಶಂಕ್ರಪ್ಪ ಬಿಜವಾಡ, ಸತೀಶ ಶೇಜವಾಡಕರ, ದತ್ತಮೂರ್ತಿ ಕುಲಕರ್ಣಿ, ಲಿಂಗರಾಜ ಪಾಟೀಲ, ತಿಪ್ಪಣ್ಣ ಮಜ್ಜಗಿ, ಹನುಮಂತಪ್ಪ ದೊಡ್ಡಮನಿ, ಪ್ರಭು ನವಲಗುಂದಮಠ, ಸಂತೋಷ ಅರಕೇರಿ, ರಾಜು ಕಾಳೆ, ವಸಂತ ನಾಡಜೋಶಿ, ಸಿದ್ದು ಮೊಗಲಿಶೆಟ್ಟರ, ಬೀರಪ್ಪ ಖಂಡೆಕಾರ, ಸಂತೋಷ ಚವ್ಹಾಣ, ಶಶಿಶೇಖರ ಡಂಗನವರ, ವೀರೇಶ ಸಂಗಳದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next