Advertisement

ಮತಾಂತರ ನಿಷೇಧ ಕಾಯಿದೆ ಮಂಡನೆ: ಬಿಜೆಪಿ ಸಮರ್ಥನೆ

04:13 PM Dec 21, 2021 | Team Udayavani |

ಸುವರ್ಣ ಸೌಧ: ಪ್ರತಿಪಕ್ಷ ಕಾಂಗ್ರೆಸ್ ವಿರೋಧದ ಮಧ್ಯೆಯೇ ಮತಾಂತರ ನಿಷೇಧ ವಿಧೇಯಕವನ್ನು ಸರಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಸರಕಾರದ ಈ ಕ್ರಮವನ್ನು ರಾಜ್ಯ ಬಿಜೆಪಿ ಸಮರ್ಥಿಸಿಕೊಂಡಿದೆ.
ಭೋಜನ ವಿರಾಮದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡಿಸಿದರು. ಆದರೆ ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ವಿರೋಧಿಸಿ ಸಭಾತ್ಯಾಗ ಮಾಡಿದೆ.

Advertisement

ವಿಧೇಯಕದ ಪ್ರತಿ‌  ನೀಡದೇ ತರಾತುರಿಯಲ್ಲಿ ಮಂಡನೆ ಮಾಡಿದೆ. ಈ ರೀತಿ ಕದ್ದುಮುಚ್ಚಿ ವಿಧೇಯಕ‌ಮಂಡಿಸುವ ಅಗತ್ಯವಿದೆಯೇ ? ಎಂದು ಪ್ರಶ್ನಿಸಿದರು. ಇದಕ್ಕೆ ಸಚಿವರಾದ ಮಾಧುಸ್ವಾಮಿ, ಆರ್.ಅಶೋಕ್ ತಿರುಗೇಟು ನೀಡಿದರು. ಕಲಾಪ ಸಲಹಾ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿಲ್ಲ. ಪ್ರತಿಪಕ್ಷಗಳನ್ನು ಕತ್ತಕೆಯಲ್ಲಿಟ್ಟು ಮಂಡಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದ್ದು, ಬುಧವಾರ ಚರ್ಚೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಆದರೆ ರಾಜ್ಯ ಸರಕಾರದ ಈ ಕ್ರಮವನ್ನು ಸರಣಿ ಟ್ವೀಟ್ ಮೂಲಕ ಬಿಜೆಪಿ ಸಮರ್ಥಿಸಿಕೊಂಡಿದೆ. “ಮತಾಂತರ ನಿಷೇಧ ಕಾಯ್ದೆಯ ಮೂಲಕ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬಲವಂತದ ಮತಾಂತರಗಳಿಗೆ ತಡೆ ಬೀಳಲಿದೆ.”

“ಸಂವಿಧಾನ ಕಲ್ಪಿಸಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕೆಲವರು ದುರುಪಯೋಗ ಪಡಿಸಿಕೊಂಡು ಬಲವಂತದ ಮತಾಂತರದ ಮೂಲಕ ಸಂವಿಧಾನಕ್ಕೆ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡುತ್ತಿದ್ದಾರೆ.” “ಬಲವಂತದ ಮತಾಂತರವನ್ನು ತಡೆಯುವುದೇ ಮತಾಂತರ ನಿಷೇಧ ಕಾಯ್ದೆಯ ಆದ್ಯ ಉದ್ದೇಶ.
ಆದರೆ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್‌ ನಾಯಕರು ಕ್ರೈಸ್ತ ಸಮುದಾಯವನ್ನು ಈ ಕಾಯ್ದೆಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ನೆನಪಿಡಿ, ಇದೇ ಕಾಂಗ್ರೆಸ್‌ ಸಿಎಎ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿತ್ತು ” ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next