Advertisement
ಪಕ್ಷದ ಮುಖಂಡರು ಸಿಎಂ ಆಯ್ಕೆ ವಿಚಾರದ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಇತ್ತ ಮೂರೂ ರಾಜ್ಯ ಗಳಲ್ಲೂ ಸಿಎಂ ರೇಸಿಗೆ ಪೈಪೋಟಿ ಕಡಿಮೆ ಇಲ್ಲ.
ಈಗಾಗಲೇ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದಲ್ಲಿ ವಸುಂಧರಾ ರಾಜೇ ಹಾಗೂ ಛತ್ತೀಸ್‌ಗಢದಲ್ಲಿ ರೇಣುಕಾ ಸಿಂಗ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡುವುದು ಖಚಿತವೆಂದು ಮೂಲಗಳು ತಿಳಿಸಿವೆ. ಆದರೆ ಪಕ್ಷದಲ್ಲಿ ಈ ಆಯ್ಕೆಗಳ ಬಗ್ಗೆ ಭಿನ್ನಮತವೂ ಇರುವುದರಿಂದ ಹಳೆ ಮುಖಗಳಿಗೆ ಮಣೆಹಾಕಬೇಕೋ? ಬದಲಾವಣೆಗೆ ನೆಲೆ ನೀಡಬೇಕೋ ಎನ್ನುವಂಥ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ 3 ರಾಜ್ಯಗಳಲ್ಲೂ ಸಿಎಂ ಗದ್ದುಗೆ ಏರಲು ಪೈಪೋಟಿ ನಡೆಸುತ್ತಿರುವ ಪ್ರಬಲರಿಗೆ ಡಿಸಿಎಂ ಸ್ಥಾನಗಳನ್ನು ನೀಡಿ ಬಿಕ್ಕಟ್ಟು ತಣ್ಣಗಾಗಿಸಲು ಬಿಜೆಪಿ ತಂತ್ರ ರೂಪಿಸಿದೆ ಎನ್ನಲಾಗಿದೆ. ಶಾಸಕರಾದ ಸಂಸದರ ರಾಜೀನಾಮೆ?: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಂಸದರಾದ ದಿಯಾ ಕುಮಾರಿ, ರಾಜ್ಯವರ್ಧನ್ ಸಿಂಗ್ ರಾಥೋಡ್, ಬಾಬಾ ಬಾಲಕ ನಾಥ್ ಹಾಗೂ ಕಿರೋಡಿ ಲಾಲ್ ಮೀನಾ ಅವರಿಗೆ ರಾಜ್ಯದಲ್ಲಿ ಪ್ರಮುಖ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಅವರನ್ನು ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಬಹುದಾಗಿದೆ. ಈ ಮೂಲಕವೂ ಸಿಎಂ ರೇಸಿಗೆ ಇರುವ ಸ್ಪರ್ಧೆಯನ್ನು ಕಡಿಮೆ ಮಾಡಲು ಬಿಜೆಪಿ ಯೋಜಿಸಿದೆ ಎನ್ನಲಾಗಿದೆ.