Advertisement

BJP; ಯತ್ನಾಳ್ ರಿಂದ ಕೀಳು ರಾಜಕೀಯ ಸಂಸ್ಕೃತಿ ಸೃಷ್ಟಿ: ಎಚ್.ವಿಶ್ವನಾಥ್ ಕಿಡಿ

05:40 PM Dec 17, 2023 | Team Udayavani |

ವಿಜಯಪುರ : ಬಿಜೆಪಿ ಹಿರಿಯ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ್ ರಾಜಕೀಯ ವಿರೋಧಿಗಳ ವಿರುದ್ಧ ಟೀಕೆಯ ಬರದಲ್ಲಿ ಬಳಸುತ್ತಿರುವ ಪದ ಬಳಕೆ ಅತ್ಯಂತ ಕೀಳುಮಟ್ಟದಿಂದ ಕೂಡಿದೆ. ಕರ್ನಾಟಕ ಕೀಳು ರಾಜಕೀಯ ಸಂಸ್ಕೃತಿ ಸೃಷ್ಟಿಗೆ ಯತ್ನಾಳ ವರ್ತನೆ ಕಾರತಣವಾಗುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ಮೇಲ್ಮನೆ ಶಾಸಕ ಎಚ್.ವಿಶ್ವನಾಥ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ವೇಳೇ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮದೇ ಸಮುದಾಯದ ಹಿರಿಯರಾದ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಬಗ್ಗೆ ಯತ್ನಾಳ್ ಬಳಸಿರುವ ಪದಗಳು ನಾರೋಗ್ಯಕರ ರಾಜಕೀಯ ಹಾಗೂ ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ರವಾನಿಸಲಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯದ ಮಟ್ಟಿಗೆ ಯತ್ನಾಳ್ ಅಪವಾದ ಎನಿಸುವಂತೆ ವರ್ತಿಸುತ್ತಿದ್ದು, ರಾಜಕೀಯ ವೈರುಧ್ಯ ಇದ್ದ ಮಾತ್ರಕ್ಕೆ ಕೀಳು ಮಟ್ಟದ ಪದ ಬಳಕೆ ಯಾರಿಂದಲೂ ಸರಿಯಲ್ಲ. ಹುಚ್ಚರಂತೆ ಮಾತನಾಡುವ ಯತ್ನಾಳ ಹೇಳಿಕೆಗೆ ಯಾರೂ ಬೆಲೆ ಕೊಡಬೇಡಿ ಎಂದು ಸಲಹೆ ನೀಡಿದರು.

ತಮ್ಮದೇ ಸಮುದಾಯಕ್ಕೆ ಸೇರಿದ ನಾಯಕನ ಬಗ್ಗೆ ಅತ್ಯಂತ ಕೀಳು ಪದಗಳನ್ನು ಬಳಸಲು ಯತ್ನಾಳಗೆ ನಾಚಿಕೆ ಆಗುವುದಿಲ್ಲವೇ, ಇಂಥವರು ನಾಯಕನಾಗಲು ಸಾಧ್ಯವೇ. ಅಯೋಗ್ಯತನಕ್ಕೂ ಒಂದು ಮಿತಿ ಇರಬೇಕು. ರಾಜಕೀಯದ ಮುಂದಿನ ಯುವ ಪೀಳಿಗೆಗೆ ನೀನು ಕೊಡುವ ಸಂದೇಶವಾದರೂ ಏನು ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೂ ವಾಗ್ದಾಳಿ ನಡೆಸಿದ ಎಚ್.ವಿಶ್ವನಾಥ್, ತಮ್ಮ ಮಗ ಆರ್ಟಿಜಿಎಸ್ ಮೂಲಕ 20 ಕೋಟಿ ರೂ. ಲಂಚ ಪಡೆದ ಹಗರಣದಿಂದಾಗಿಯೇ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಂಡು, ಜೈಲಿಗೆ ಹೋಗಬೇಕಾಯಿತು ಎಂದು ಕಿಡಿ ಕಾರಿದರು.

Advertisement

ಮುಖ್ಯಮಂತ್ರಿಯಾಗಿದ್ದ ಅಪ್ಪನ ಸಹಿ ಮಾಡಿ ತಂದೆಯನ್ನೇ ಜೈಲಿಗೆ ಕಳಿಸಿದ ವಿಜಯೇಂದ್ರ ಎಂಬ ಪೆದ್ದ, ಲಂಚಕೋರ ಭ್ರಷ್ಟಾಚಾರಿ ರಾಜ್ಯದ ಬಿಜೆಪಿ ಅಧ್ಯಕ್ಷನಾಗಿದ್ದಾನೆ. ನಾನು ಬಿಜೆಪಿ ಶಾಸಕನಾಗಿದ್ದರೂ ನನ್ನ ಮನಸ್ಸು ಬೇರೆ ಇದೆ ಎಂದರು.

ಮೈಸೂರು ಸಂಸ್ಥಾನ ಅಭಿವೃದ್ಧಿ ಮಾಡಿದ ಟಿಪ್ಪು ಸುಲ್ತಾನ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ ಹೆಸರು ಇರಿಸಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದ ವಿಶ್ವನಾಥ, ನಿಜಕ್ಕೂ ಟಿಪ್ಪು ಹೆಸರು ಇರಿಸಿದರೆ ನನಗಂತೂ ಸಂತೋವಾಗಲಿದೆ ಎಂದರು.

ಟಿಪ್ಪು ಸುಲ್ತಾನ ಮುಸ್ಲೀಮ್ ಎನ್ನುವದು ಸರಿಯಲ್ಲ, ಬಿಜೆಪಿ ಇಂತ ಅಯೋಗ್ಯತೆ ತಪ್ಪಬೇಕು. ಮುಸ್ಲಿಂ, ಹಿಂದೂ ಕ್ರಿಶ್ಚಿಯನ್ ಅಂತೆಲ್ಲ ಜಾತಿ-ಧರ್ಮದ ಕೋಲಾಹಲ ಮೊದಲು ಬಿಡಬೇಕು. ಜನರ ಹೊಟ್ಟೆಗೆ ಏನು ಬೇಕು, ಆರೋಗ್ಯ, ಶಿಕ್ಷಣದ ಬಗ್ಗೆ ವಿಚಾರಿಸಬೇಕು ಎಂದರು.

ಉತ್ತರ ಕರ್ನಾಟಕದ 14 ಜಿಲ್ಲೆಗಳು ಅಭಿವೃದ್ಧಿಯಿಂದ ಹಿಂದೆ ಉಳಿದಿವೆ. ಈ ಭಾಗದ ಸಮಸ್ಯೆ, ಕುಂದು ಕೊರತೆಗಳ ಕುರಿತು ಚರ್ಚಿಸಲೆಂದೇ ಬೆಳಗಾವಿಯ ಸುವರ್ಣ ಸೌಧ ಕಟ್ಟಲಾಗಿದೆ. ಆದರೆ ಹೊಂದಾಣಿಕೆ ರಾಜಕೀಯ ಇರುವ ಈ ಭಾಗದಲ್ಲಿ ಅಕ್ಷರ ಹಾಗೂ ಆರೋಗ್ಯದ ಮೇಲೆ ಖಾಸಗೀಯವರು ನಡೆಸುತ್ತಿರುವ ಪಾರುಪತ್ಯ ನಿಲ್ಲಬೇಕು ಎಂದು ಆಗ್ರಹಿಸಿದರು.

ಅಭಿವೃದ್ಧಿ ವಿಷಯದಲ್ಲಿ ಈ ಭಾಗದ ಎಲ್ಲ ಜಿಲ್ಲೆಗಳ ಜನರು ಒಗ್ಗೂಡಿ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದ ವಿಶ್ವನಾಥ, ಭರುವ ದಿನಗಳಲ್ಲಿ ಈ ಭಾಗದಲ್ಲಿ ಪ್ರವಾಸ ಮಾಡುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next