ಜಮ್ಮು-ಕಾಶ್ಮೀರ:ಬಿಜೆಪಿ ಮುಖಂಡ, ಪುರಸಭೆ ಸದಸ್ಯನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ(ಜೂನ್ 02) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 1.34 ಲಕ್ಷ ಕೋವಿಡ್ 19 ಪ್ರಕರಣ ಪತ್ತೆ,ಸಾವಿನ ಪ್ರಮಾಣ ಇಳಿಕೆ
ರಾಕೇಶ್ ಪಂಡಿತ್ ಪುಲ್ವಾಮಾದ ಟ್ರಾಲ್ ಪ್ರದೇಶದಲ್ಲಿನ ಸ್ನೇಹಿತನ ಮನೆಯಲ್ಲಿದ್ದಾಗ ಮೂವರು ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಗುಂಡು ತಗುಲಿದ್ದ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ದಾಳಿಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡ ಮಹಿಳೆಯನ್ನು ಅಸೀಫಾ ಮುಸ್ತಖ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ.
ಬಿಜೆಪಿ ಮುಖಂಡ ರಾಕೇಶ್ ಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು(ಪಿಎಸ್ ಒ) ಒದಗಿಸಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿ ಇಲ್ಲದೇ ಟ್ರಾಲ್ ಗೆ ರಾಕೇಶ್ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಪುರಸಭೆ ಸದಸ್ಯ ರಾಕೇಶ್ ಪಂಡಿತ್ ನಿಧನರಾದ ಸುದ್ದಿ ಕೇಳಿ ಆಘಾತವಾಗಿದ್ದು, ಈ ಘಟನೆಯನ್ನು ಖಂಡಿಸುವುದಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ನಾ ತಿಳಿಸಿದ್ದಾರೆ.