ಸುವರ್ಣ ವಿಧಾನಸೌಧ: ಕಲಾಪದಲ್ಲಿ ಪದೇಪದೆ ಸೃಷ್ಟಿಯಾಗುತ್ತಿರುವ ಗೊಂದಲ ಹಾಗೂ ಹೊಂದಾಣಿಕೆ ಕೊರತೆಗೆ ಕೊನೆಗೂ ಪರಿಹಾರ ಕಂಡುಕೊಳ್ಳಲು ಬಿಜೆಪಿ ಮುಂದಾಗಿದ್ದು, ಹಿರಿಯ ಸದಸ್ಯರ ನೇತೃತ್ವದಲ್ಲಿ ಕೋರ್ ಕಮಿಟಿ ರಚಿಸಲಾಗಿದೆ.
ವಿಪಕ್ಷ ನಾಯಕ ಆರ್.ಅಶೋಕ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ನಡೆದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಹಿರಿಯ ಶಾಸಕರಾದ ಆರಗ ಜ್ಞಾನೇಂದ್ರ, ಸುರೇಶ್ ಕುಮಾರ್, ಸಿ.ಸಿ.ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನಿಲ್ ಕುಮಾರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್ ಅವರನ್ನು ಒಳಗೊಂಡ ಕೋರ್ ಕಮಿಟಿ ರಚಿಸಲಾಗಿದೆ.
ಈ ಸಮಿತಿ ಸದನ ಆರಂಭಗೊಳ್ಳುವುದಕ್ಕೆ ಮುನ್ನ ಪ್ರತಿದಿನ ಅಶೋಕ ಹಾಗೂ ವಿಜಯೇಂದ್ರ ಜತೆ ಚರ್ಚಿಸಿ ಯಾವ ವಿಷಯವನ್ನು ಪ್ರಸ್ತಾಪಿಸಬೇಕು, ಸಭಾತ್ಯಾಗ, ಧರಣಿ ಇತ್ಯಾದಿ ವಿಚಾರವನ್ನು ನಿರ್ಧರಿಸಲಿದೆ.
ವಿಷಯ ನಿರ್ಧಾರ : ಈ ಸಭೆಯಲ್ಲಿ ಸೋಮವಾರದಿಂದ ತೆಗೆದುಕೊಳ್ಳುವ ವಿಚಾರವನ್ನು ನಿಗದಿಪಡಿಸಲಾಗಿದೆ. ಸಚಿವ ಜಮೀರ್ ಅಹಮದ್ ವಿಚಾರದಲ್ಲಿ ಸೋಮವಾರ ಬಿಜೆಪಿ ಹೋರಾಟ ನಡೆಸಿದ್ದು, ಮಂಗಳವಾರ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ ಕೈ ಬಿಟ್ಟ ವಿಚಾರದ ಚರ್ಚೆಗೆ ಅವಕಾಶ ಕೋರಲಾಗಿದೆ. ಹೆಣ್ಣು ಭ್ರೂಣ ಹತ್ಯೆ, ಹಿಂದುಳಿದ ವರ್ಗಗಳ ಫಲಾನುಭವಿಗಳ ಆಯ್ಕೆ ಕೈ ಬಿಟ್ಟ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.