ಹೊಳಲ್ಕೆರೆ: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ತಾಲೂಕಿನ ಕೊಡಗವಳ್ಳಿ ಹಟ್ಟಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಶನಿವಾರ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.
ಕೆ.ಟಿ. ಸ್ವಾಮಿ ಗಾಯಗೊಂಡ ಕಾಂಗ್ರೆಸ್ ಕಾರ್ಯಕರ್ತ. ಇವರು ಶನಿವಾರ ಜಿಪಂ ಮಾಜಿ ಸದಸ್ಯ ಲೋಹಿತ್ ಕುಮಾರ್ ಅವರ ಮನೆಗೆ ತೆರಳಿ ಹಿಂತಿರುಗುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಎನ್ನಲಾದ ಕೆಲವರು ಅಡ್ಡಗಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕೊಡಗವಳ್ಳಿ ಹಟ್ಟಿಯ ಗೋವಿಂದ ಗೌಡ, ಹಂದಿ ತಿಪ್ಪೇಸ್ವಾಮಿ, ಎಂ.ಬಿ.ರಾಘವೇಂದ್ರ, ಉದಯಕುಮಾರ್, ಇಂಡಿ ಚಂದ್ರಪ್ಪ ಎಂಬುವವರು ತಮ್ಮ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆಂದು ಕೆ.ಟಿ. ಸ್ವಾಮಿ ಚಿಕ್ಕಜಾಜೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೊಂದೆಡೆ, ಇದನ್ನು ಅಲ್ಲಗಳೆದಿರುವ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಯಡಿಯೂರಪ್ಪನವರು ಬಹುಮತ ಸಾಬೀತುಪಡಿಸದೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್
ಕಾರ್ಯಕರ್ತರು ಪಟಾಕಿ ಸಿಡಿಸುವ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆಯೇ ದೌರ್ಜನ್ಯ ನಡೆಸಿದ್ದಾರೆ.
ಸಂಭ್ರಮಾಚರಣೆ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಚುಡಾಯಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರಾದ ಮಲ್ಲಿಕಾರ್ಜುನ, ಶಿವು ಮತ್ತಿತರರ ವಿರುದ್ಧ ಬಿಜೆಪಿ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.