Advertisement

ಹಣ ಹಂಚಿಕೆ ಆರೋಪ: ಬಿಜೆಪಿ-ಕಾಂಗ್ರೆಸ್‌ ವಾಗ್ವಾದ

11:35 PM May 19, 2019 | Team Udayavani |

ಕಲಬುರಗಿ: ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಡಾ.ಉಮೇಶ ಜಾಧವ್‌ ಅವರು ಪೊಲೀಸ್‌ ವಾಹನದ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಖಾನಾಪುರ ಗ್ರಾಮದಲ್ಲಿ ಜರುಗಿತು.

Advertisement

ಚಿತ್ತಾಪೂರ ತಾಲೂಕಿನ ಪೇಠ ಶಿರೂರ ತಾಪಂ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ನಾಮದೇವ ರಾಠೊಡ್‌ ಅವರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಜಾಧವ್‌ ಬೆಂಬಲಿಗರು ಕಾನುನಾಯಕ ತಾಂಡಾ-ಶಿವರಾಮ ನಾಯಕ ತಾಂಡಾ ನಡುವೆ ನಾಮದೇವ ಅವರ ವಾಹನ ತಡೆದು ಶೋಧಿಸಿದರು.

ವಾಹನದ ಮೇಲೆ ಕಲ್ಲು ತೂರಿ, ಗಾಲಿಯ ಗಾಳಿ ಬಿಟ್ಟರು. ವಾಹನದಲ್ಲಿ ಹಣ ಇದೆ ಈ ಕೂಡಲೇ ಸ್ಥಳಕ್ಕೆ ಬರಬೇಕೆಂದು ಎಂಸಿಸಿ ತಂಡಕ್ಕೆ ದೂರು ನೀಡಿದರು. ಘಟನೆ ನಡೆಯುತ್ತಿದ್ದಂತೆ ಸಮೀಪದ ಖಾನಾಪುರದಲ್ಲಿ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ನಡುವೆ ವಾಗ್ಧಾದ ನಡೆಯಿತು.

ಹಣ ಹಂಚಿಕೆ ತಡೆಯಲು ಚುನಾವಣಾಧಿಕಾರಿಗಳು ಮುಂದಾಗಿಲ್ಲ, ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಉಮೇಶ ಜಾಧವ್‌ ನಡುರಸ್ತೆಯಲ್ಲೇ ಪೊಲೀಸ್‌ ವಾಹನದ ಎದುರು ಕುಳಿತು ಪ್ರತಿಭಟಿಸಿದರು. ನಾಮದೇವ ರಾಠೊಡ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತರಾಗಿದ್ದಾರೆ.

ಸಚಿವರ ಕುಮ್ಮಕ್ಕಿನಿಂದಲೇ ಮತದಾರರಿಗೆ ಹಣ ಹಂಚುತ್ತಿದ್ದಾರೆ. ಮತದಾರರಿಗೆ ಬಿಜೆಪಿಗೆ ಮತ ಹಾಕದಂತೆ ಬೆದರಿಕೆ ಹಾಕಲಾಗುತ್ತಿದೆ. ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಸಹಕರಿಸಿದ್ದಾರೆ ಎಂದು ಜಾಧವ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ, ಸ್ಥಳದಲ್ಲಿ ಜಮಾಯಿಸಿದ್ದ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್‌ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಉಮೇಶ ಜಾಧವ್‌ ತಮ್ಮ ವಾಹನ ತಡೆದು ಜಖಂಗೊಳಿಸಿದ್ದಾರೆ. ವಿನಾಕಾರಣ ಆರೋಪ ಹೊರಿಸಲಾಗುತ್ತಿದೆ ಎಂದು ನಾಮದೇವ ರಾಠೊಡ ಘಟನೆ ನಂತರ ತಿಳಿಸಿದರು.

ಜೇಬಿನಲ್ಲಿದ್ದ ಹಣ ಜಪ್ತಿ: ಮತದಾರರಿಗೆ ಹಂಚಲು ಬಂದಿದ್ದರು ಎನ್ನಲಾದ ನಾಮದೇವ ರಾಠೊಡ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಾಮದೇವ ರಾಠೊಡ್‌ ಜೇಬಿನಲ್ಲಿ ಐನೂರರ ನೋಟಿನ ಕಂತುಗಳು ಪತ್ತೆಯಾಗಿದ್ದು, ಹಣವನ್ನು ಪೊಲೀಸರು ಜಪ್ತಿ ಮಾಡಿದರು. ನಂತರ, ನಾಮದೇವ ರಾಠೊಡ್‌ರನ್ನು ಬಿಡಲಾಯಿತು.

ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಹೊರಗಿನ ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಇರಬಾರದೆಂದು ಗೊತ್ತಿದ್ದರೂ ಸಚಿವ ಪ್ರಿಯಾಂಕ್‌ ಖರ್ಗೆ, ಶರಣಪ್ರಕಾಶ ಪಾಟೀಲ್‌, ಕೆ.ಬಿ.ಶಾಣಪ್ಪ ಇತರರು ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿರುವುದನ್ನು ನೋಡಿದರೆ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಕಾಣುತ್ತಿದೆ. ಪೊಲೀಸರು ಹಾಗೂ ಅಧಿಕಾರಿಗಳು ಕಾಂಗ್ರೆಸ್‌ ಪರ ನಡೆದುಕೊಂಡಿರುವುದನ್ನು ಇದು ನಿರೂಪಿಸುತ್ತದೆ.
-ಡಾ. ಉಮೇಶ ಜಾಧವ್‌, ಮಾಜಿ ಶಾಸಕ.

ಸೋಲಿನ ಭೀತಿಯಿಂದ ಡಾ.ಉಮೇಶ ಜಾಧವ್‌ ಏನೇನೋ ಆರೋಪ ಹೊರಿಸಿದ್ದಾರೆ. ತಾಂಡಾದ ಮತದಾರರು ತಮಗೆ ಬೆಂಬಲಿಸುತ್ತಿರುವುದನ್ನು ಕಂಡು ಸಂಬಂಧವಿರದ ಘಟನೆಗಳನ್ನು ಸೃಷ್ಟಿ ಮಾಡಿದ್ದಾರೆ.
-ಸುಭಾಷ ರಾಠೊಡ, ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next