Advertisement

BJP; ಈಗ ನನ್ನ ಅಭಿಪ್ರಾಯ ಬಹಿರಂಗ ಪಡಿಸಲಾರೆ: ಶ್ರೀನಿವಾಸ ಪ್ರಸಾದ್

06:15 PM Feb 26, 2024 | Team Udayavani |

ಚಾಮರಾಜನಗರ: ನನ್ನ ಉತ್ತರಾಧಿಕಾರಿಯಾಗಿ ನಾನು ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ನನ್ನ ಅಳಿಯಂದಿರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ಬಿಜೆಪಿಯಿಂದ ಈ ಬಗ್ಗೆ ಸಮೀಕ್ಷೆ ನಡೆಸಿ ತೀರ್ಮಾನಿಸುತ್ತಾರೆ. ನಾನು ಹೇಳಿದರೆ ಆಗಿಬಿಡುತ್ತಾ? ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಮಾರ್ಚ್ 17ಕ್ಕೆ ನಾನು ರಾಜಕಾರಣದಿಂದ ನಿವೃತ್ತನಾಗುತ್ತಿದ್ದೇನೆ. ನನ್ನ ಉತ್ತರಾಧಿಕಾರಿಯಾಗಿ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ, ಪಕ್ಷದ ವರಿಷ್ಠರು ನನ್ನ ಅಭಿಪ್ರಾಯ ಕೇಳಿದರೆ ಆಗ ತಿಳಿಸುವೆ. ಆದರೆ ಅದನ್ನು ಈಗ ಬಹಿರಂಗ ಪಡಿಸೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಿಮ್ಮನ್ನು ಭೇಟಿಯಾದ ಬಳಿಕ ನನ್ನ ಇಬ್ಬರು ಅಳಿಯರಲ್ಲಿ ಹೊಂದಾಣಿಕೆಯಿದೆ, ಇಬ್ಬರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ ಎಂದು ಹೇಳಿದ್ದೀರಲ್ಲ? ಎಂದು ಪ್ರಶ್ನಿಸಿದಾಗ, ಬೇರೆ ಆಕಾಂಕ್ಷಿಗಳಂತೆಯೇ ನನ್ನ ಅಳಿಯಂದಿರಿಬ್ಬರೂ ಆಕಾಂಕ್ಷಿಗಳು. ಪಕ್ಷದ ಟಿಕೆಟ್ ಬಯಸುವುದಕ್ಕೆ ಅವರು ಸ್ವತಂತ್ರರು. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಅವರು ತಮ್ಮದೇ ಆದ ಸಮೀಕ್ಷೆ ನಡೆಸುತ್ತಾರೆ. ರಾಜ್ಯಾಧ್ಯಕ್ಷರಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡುತ್ತಾರೆ. ಯಾರಿಗೆ ಗೆಲ್ಲುವ ಸಾಮರ್ಥ್ಯ ಇದೆ ಅಂಥವರನ್ನು ಆಯ್ಕೆ ಮಾಡುತ್ತಾರೆ. ಇಲ್ಲಿ ನಾವು ನೀವು ಕೂತು ಚರ್ಚೆ ಮಾಡಿ ಬಾಯಿ ಚಪಲಕ್ಕೆ ಹೇಳಿದರೆ ಆಗಿಬಿಡುತ್ತಾ? ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಕೆಲವರು ಒತ್ತಾಯಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಅರ್ಹತೆ ಇರುವ ಯಾರು ಬೇಕಾದರೂ ಭಾರತದ ಎಲ್ಲಾದರೂ ಸ್ಪರ್ಧಿಸಬಹುದು. ರಾಹುಲ್‌ಗಾಂಧಿ ಅಮೇಠಿಯಿಂದ ಬಂದು ಕೇರಳದ ವೈನಾಡಿನಲ್ಲಿ ಸ್ಪರ್ಧೆ ಮಾಡಬಹುದು. ರಾಜ್ಯ ಸಭೆಗೆ ಕಾಂಗ್ರೆಸ್‌ನಿಂದ ಯಾರನ್ನು ನಿಲ್ಲಿಸಿದ್ದಾರೆ? ಗೋವಿಂದರಾಜನಗರ ಕ್ಷೇತ್ರದ ವಿ. ಸೋಮಣ್ಣ, ಚಾಮರಾಜನಗರದಲ್ಲಿ ಸ್ಪರ್ಧಿಸಬಹುದು. ಆಗ ಅವರನ್ನು ಬೆಂಬಲಿಸಿದವರು ಈಗ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಮಾತಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಶ್ರೀನಿವಾಸಪ್ರಸಾದ್ ಅವರೊಂದಿಗೆ ಅಳಿಯ ಡಾ. ಮೋಹನ್ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದು ಗಮನ ಸೆಳೆದರು.ಜಿ.ಪಂ. ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಜಿಲ್ಲಾ ಹಾಪ್‌ಕಾಮ್ಸ್‌ ಅಧ್ಯಕ್ಷ ಕೆ.ಆರ್. ಲೋಕೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸರೋಜಾ, ಬಸವರಾಜಪ್ಪ, ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next