Advertisement

ಸಿದ್ದಾಪುರ ಜಿ.ಪಂ. ಉಪ ಚುನಾವಣೆ: ಬಿಜೆಪಿ ಜಯಭೇರಿ

02:10 AM Jun 18, 2018 | Karthik A |

ಕುಂದಾಪುರ/ಸಿದ್ದಾಪುರ: ಸಿದ್ದಾಪುರ ಜಿಲ್ಲಾ ಪಂಚಾಯತ್‌ ಕ್ಷೇತ್ರದ ತೆರವಾದ ಸದಸ್ಯ ಸ್ಥಾನಕ್ಕೆ ಜೂ. 14 ರಂದು ನಡೆದಿದ್ದ ಉಪ ಚುನಾವಣೆಯ ಫಲಿತಾಂಶ ರವಿವಾರ ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ರೋಹಿತ್‌ ಕುಮಾರ್‌ ಶೆಟ್ಟಿಯವರು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಕುಮಾರ್‌ ಶೆಟ್ಟಿ ವಿರುದ್ಧ 3,360 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಾಲಾಡಿ ತಾರಾನಾಥ ಶೆಟ್ಟಿಯವರ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಈ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ರೋಹಿತ್‌ ಕುಮಾರ್‌ ಶೆಟ್ಟಿ 11,926 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಪ್ರಸನ್ನ ಕುಮಾರ್‌ 8,566 ಮತಗಳು ಸಿಕ್ಕರೆ, ಜೆಡಿಎಸ್‌ ಅಭ್ಯರ್ಥಿ ಅರುಣ ಶೆಟ್ಟಿ 276 ಮತಗಳನ್ನು ಪಡೆದಿದ್ದಾರೆ.

Advertisement

ನೋಟಾಕ್ಕೆ 280 ಮತಗಳು
ವಿಶೇಷವೆಂದರೆ ಈ ಬಾರಿ 280 ಮತಗಳು ನೋಟಾಕ್ಕೆ ಬಿದ್ದಿದೆ. ಜೆಡಿಎಸ್‌ ಅಭ್ಯರ್ಥಿ ಪಡೆದ ಮತಗಳಿಗಿಂತ 4 ಹೆಚ್ಚಿನ ಮತಗಳು ನೋಟಾಕ್ಕೆ ಸಿಕ್ಕಂತಾಗಿದೆ. ಕ್ಷೇತ್ರದ ಒಟ್ಟು 33,188 ಮತದಾರರ ಪೈಕಿ 21,048 ಮತಗಳು ಚಲಾವಣೆಯಾಗಿದೆ. ಕುಂದಾಪುರದ ಮಿನಿವಿಧಾನಸೌಧದಲ್ಲಿ ರವಿವಾರ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಿಜಯಿ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿದರು.

ಸಿದ್ದಾಪುರದಲ್ಲಿ ಬಿಜೆಪಿ ವಿಜಯೋತ್ಸವ 
ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ರೋಹಿತ್‌ ಕುಮಾರ್‌ ಶೆಟ್ಟಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಸಿದ್ದಾಪುರ ಪೇಟೆ, ಉಳ್ಳೂರು, ಹೊಸಂಗಡಿ, ಆಜ್ರಿ, ಯಡಮೊಗೆ, ಕೆರಾಡಿ ಸೇರಿದಂತೆ ವಿವಿಧೆಡೆ ವಿಜಯೋತ್ಸವ ಆಚರಿಸಿದರು. ಹಲವೆಡೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಕ್ಷದ ಮುಖಂಡರಾದ ದೀಪಕ್‌ ಕುಮಾರ್‌ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಬಾಲಚಂದ್ರ ಭಟ್‌, ಮೂರ್ತಿ ಶೆಟ್ಟಿ, ರವಿ ಗಾಣಿಗ ಮಲ್ಲಾರಿ, ಗೋಪಾಲ್‌ ಕಾಂಚನ್‌, ತಾಲೂಕು ಪಂಚಾಯತ್‌ ಸದಸ್ಯ ಉಮೇಶ್‌ ಶೆಟ್ಟಿ ಕಲ್ಗದ್ದೆ ಸೇರಿದಂತೆ ಅನೇಕ ಮಂದಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಾನ ಉಳಿಸಿಕೊಂಡ ಬಿಜೆಪಿ
ಕಳೆದ ಜಿ..ಪಂ. ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಹಾಲಾಡಿ ತಾರನಾಥ ಶೆಟ್ಟಿ ಗೆದ್ದಿದ್ದು, ಈ ಬಾರಿ ರೋಹಿತ್‌ ಕುಮಾರ್‌ ಅವರ ಗೆಲುವಿನೊಂದಿಗೆ ಮತ್ತೆ ಈ ಸದಸ್ಯ ಸ್ಥಾನವನ್ನು ಬಿಜೆಪಿ ತನ್ನಲ್ಲಿಯೇ ಉಳಿಸಿಕೊಂಡಂತಾಗಿದೆ. ಅದಕ್ಕೂ ಹಿಂದೆ ಕೂಡ ಬಿಜೆಪಿ ಬೆಂಬಲಿತ ಮಮತಾ ಆರ್‌. ಶೆಟ್ಟಿ ಗೆದ್ದಿದ್ದರು. ಅವರಿಗಿಂತ ಮುನ್ನ ಕಾಂಗ್ರೆಸ್‌ನ ಸುಧಾಕರ ಕುಲಾಲ್‌ ಗೆಲುವು ಸಾಧಿಸಿದ್ದರು.

ಸಾಣೂರು ಗ್ರಾ.ಪಂ. ಉಪ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿ ರವೀಂದ್ರ ಶಾಂತಿ ಗೆಲುವು


ಕಾರ್ಕಳ:
ತಾಲೂಕಿನ ಸಾಣೂರು ಗ್ರಾ.ಪಂ.ನ ಮೂರನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಕೆ. ರವೀಂದ್ರ ಶಾಂತಿ 32 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಾಣೂರು ಗ್ರಾ.ಪಂ. ಮೂರನೇ ವಾರ್ಡ್‌ ವ್ಯಾಪ್ತಿಯಲ್ಲಿ 1005 ಮತದಾರರಿದ್ದು, 738 ಮತ ಚಲಾವಣೆಯಾಗಿದೆ. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಕೆ. ರವೀಂದ್ರ 385 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ನಾಗೇಂದ್ರ 353 ಮತಗಳನ್ನು ಪಡೆದುಕೊಂಡಿದ್ದಾರೆ.

Advertisement

ಕೆ. ರವೀಂದ್ರ ಶಾಂತಿ ಮೂರನೇ ವಾರ್ಡ್‌ನ ಕಾಂಗ್ರೆಸ್‌ ಅಧ್ಯಕ್ಷರೂ ಆಗಿದ್ದಾರೆ. ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಕಳ ನಗರದಲ್ಲಿ ರೋಡ್‌ ಶೋ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಾಣೂರು ಗ್ರಾ.ಪಂ.ನ ಮೂರನೇ ವಾರ್ಡ್‌ ಇಂದಿರಾನಗರದ  ಸದಸ್ಯರಾಗಿದ್ದ ಖುರ್ಷಿದ್‌ ಅವರು ಕಳೆದ 7 ತಿಂಗಳ ಹಿಂದೆ ಅನಾರೋಗ್ಯದಿಂದ ಸಾವೀಗೀಡಾದ ಹಿನ್ನೆಲೆಯಲ್ಲಿ ಆ ವಾರ್ಡ್‌ಗೆ ಜೂ. 14ರಂದು ಚುನಾವಣೆ ನಡೆದಿತ್ತು.

ಕಾರ್ಯಕರ್ತರ ಶ್ರಮ, ನಾಯಕರ ಬೆಂಬಲ ಪಕ್ಷದ ನಾಯಕರ ಬೆಂಬಲ ಹಾಗೂ ಬಿಜೆಪಿಯ ಕಾರ್ಯಕರ್ತರ ಅಪಾರವಾದ ಪರಿಶ್ರಮ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರ ಸಹಕಾರದಿಂದ ಗೆಲುವು ಸಿಕ್ಕಿದೆ. ಇಲ್ಲಿ ಬೇಸಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅದಕ್ಕೆ ಆದ್ಯತೆ ಕೊಟ್ಟು ಕಾರ್ಯನಿರ್ವಹಿಸುತ್ತೇನೆ. ಸಾಮಾನ್ಯ ಹಾಗೂ ಬಡ ವರ್ಗದ ಜನರ ಸೇವೆಗೆ ಸದಾ ಶ್ರಮಿಸುತ್ತೇನೆ. 
– ರೋಹಿತ್‌ ಕುಮಾರ್‌ ಶೆಟ್ಟಿ, ವಿಜಯಿ ಅಭ್ಯರ್ಥಿ

ನನ್ನ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ವಾರ್ಡ್‌ನ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನಿಂದಾಗುವಷ್ಟು ಜನಸೇವೆ ಮಾಡುತ್ತೇನೆ.
– ಕೆ. ರವೀಂದ್ರ ಶಾಂತಿ, ಗೆಲುವು ಸಾಧಿಸಿದ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next