Advertisement

‌Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್‌!

03:47 PM Jan 08, 2025 | Team Udayavani |

ಬೈಂದೂರು: ಬೈಂದೂರು ಭಾಗದಲ್ಲಿ ಕಳೆದ ಆರೇಳು ತಿಂಗಳಲ್ಲಿ 10 ಕಡೆ ಮೊಬೈಲ್‌ ಟವರ್‌ಗಳು ನಿರ್ಮಾಣಗೊಂಡಿವೆ. ಆದರೆ, ಒಂದೆರಡು ಟವರ್‌ ಹೊರತುಪಡಿಸಿದರೆ ಹೆಚ್ಚಿನವುಗಳಲ್ಲಿ ನೆಟ್ವರ್ಕ್‌ ಸಿಗುತ್ತಿಲ್ಲ. ಬೈಂದೂರಿನ ಕುಗ್ರಾಮವಾದ ಗಂಗನಾಡುವಿನ ಎರಡು ಕಡೆ ಟವರ್‌ ನಿರ್ಮಾಣವಾಗಿದೆ. ಆದರೆ, ಹೆಚ್ಚಿನವರಿಗೆ ಕಾಲ್‌ ಕನೆಕ್ಟ್ ಆಗುತ್ತಿಲ್ಲ. ಹೀಗಾಗಿ ಇಲ್ಲಿನ ಜನ ನೆಟ್‌ವರ್ಕ್‌ಗಾಗಿ ಅಲ್ಲಿ ಇಲ್ಲಿ ಅಲೆದಾಡುವುದು, ನೆಟ್ವರ್ಕ್‌ ಸಿಗುವ ಜಾಗದಲ್ಲಿ ನಿಂತು ಮಾತನಾಡುವುದು ಮಾಮೂಲಿಯಾಗಿದೆ. ಹೆಚ್ಚಿನವರು ಹಲೋ.. ಹಲೋ.. ಎನ್ನುತ್ತಾ ಅಲ್ಲಲ್ಲಿ ಟೆಸ್ಟಿಂಗ್‌ ನಡೆಸುತ್ತಿದ್ದಾರೆ.

Advertisement

ಆಮೆಗತಿಯಲ್ಲಿ ಸಂಪರ್ಕ
ಆಧುನಿಕ ವೇಗದ ಜೀವನಕ್ಕಾಗಿ ವೇಗದ ಸಂಪರ್ಕ, ಇಂಟರ್‌ನೆಟ್‌ ತೀರಾ ಅಗತ್ಯ ಎಂಬ ಕಾರಣಕ್ಕಾಗಿ ಎಲ್ಲರೂ ನೆಟ್ವರ್ಕ್‌ ಹಿಂದೆ ಬಿದ್ದಿದ್ದಾರೆ. ಆದರೆ, ಟೆಲಿಕಾಂ ಇಲಾಖೆ ಮಾತ್ರ ಇನ್ನೂ ಅತ್ಯಂತ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೈಂದೂರು ಭಾಗದ ಗ್ರಾಮೀಣ ಭಾಗಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸಲು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ವಿಶೇಷ ಮುತುವರ್ಜಿ ವಹಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬೈಂದೂರು ತಾಲೂಕಿಗೆ ಅತ್ಯಧಿಕ ಮೊಬೈಲ್‌ ಟವರ್‌ ಮಂಜೂರಾತಿ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದರು.

ಕಳೆದ ಎರಡು ವರ್ಷದಿಂದ ಹತ್ತಾರು ಸಭೆಗಳನ್ನು ನಡೆಸಿ ನಿರಂತರ ಪ್ರಗತಿ ಪರಿಶೀಲಿಸಿದ್ದರು. ಆದರೆ ಬಿ.ಎಸ್‌.ಎನ್‌.ಎಲ್‌ ಅಧಿಕಾರಿಗಳು ಮಾತ್ರ ಆಮೆ ನಡಿಗೆ ವೇಗದಲ್ಲಿ ಸಹಕರಿಸುತ್ತಿರುವುದು ಟವರ್‌ ಆರಂಭದ ವಿಳಂಬಕ್ಕೆ ಕಾರಣವಾಗಿದೆ.

ಪ್ರಾರಂಭದಲ್ಲಿ ಸ್ಥಳದ ತಾಂತ್ರಿಕ ಸಮಸ್ಯೆಗಳ ಕಾರಣ ಹಲವು ತಿಂಗಳು ವಿಳಂಬವಾಗಿತ್ತು. ಬಳಿಕ ಸಂಸದರು ಮತ್ತು ಶಾಸಕರ ಕಚೇರಿ ಅಧಿಕಾರಿಗಳು ವಿವಿಧ ಕಚೇರಿಗಳ ಕಡತ ಪರಿಶೀಲಿಸಿ ಸಮಸ್ಯೆ ಬಗೆಹರಿಸಿದ್ದರು. ಇತ್ತೀಚೆಗೆ ಟವರ್‌ಗಳು ನಿರ್ಮಾಣ ವಾದರೂ ನೆಟ್ವರ್ಕ್‌ ಬರಲೇ ಇಲ್ಲ.

Advertisement

ಡಿಜಿಟಲ್‌ ಸೌಲಭ್ಯ ಅಲಭ್ಯ!
ಗಂಗನಾಡು ಭಾಗದಲ್ಲಿ ಕೃಷಿ ಮುಖ್ಯ ಜೀವನಾಧಾರವಾಗಿದೆ. ಪಡಿತರ ವ್ಯವಸ್ಥೆಯ ಅನುಕೂಲ ಪಡೆದಿರುವ ನಾಲ್ಕೈದು ಕಿ.ಮೀ ದೂರದ ತಗ್ಗರ್ಸೆಗೆ ಬರಬೇಕು. ಬಹುದೊಡ್ಡ ವ್ಯಾಪ್ತಿ ಇದ್ದರು ಕೂಡ ನೆಟ್‌ವರ್ಕ್‌ ಇಲ್ಲದೆ ಡಿಜಿಟಲ್‌ ಸೌಲಭ್ಯ ಪಡೆಯಲು ಸಾದ್ಯವಾಗಿಲ್ಲ. ಹೀಗಾಗಿ ಕಳೆದ ಹತ್ತು ವರ್ಷಗಳಿಂದ ಈ ಭಾಗದ ಜನರು ನೆಟ್‌ವರ್ಕ್‌ಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಇಲ್ಲಿನ ಮಕ್ಕಳಿಗೆ ಶೈಕ್ಷಣಿಕ ಪಾಠ ಕಲಿಯಲು ಸಮಸ್ಯೆಯಾಗಿದೆ. ರೈತರಿಗೆ ತಮ್ಮ ಜಮೀನಿನ ಬೆಳೆ ಸಮೀಕ್ಷೆ ನಡೆಯಲು ಸಮಸ್ಯೆಯಾಗುತ್ತಿದೆ.

ಭರವಸೆ ಮಾತ್ರ
ಟವರ್‌ ಆರಂಭಗೊಂಡರು ನೆಟ್‌ವರ್ಕ್‌ ಬಾರದಿರುವ ಕುರಿತು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಸಂಸದರು ಬೈಂದೂರಿನಲ್ಲಿ ಬಿ.ಎಸ್‌.ಎನ್‌.ಎಲ್‌. ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿದ್ದರು. ಒಂದು ತಿಂಗಳ ಒಳಗೆ ಬೈಂದೂರು ತಾಲೂಕಿನ ಎಲ್ಲ ಟವರ್‌ಗಳು ಕಾರ್ಯಾರಂಭ ಮಾಡಲಿವೆ ಎಂದು ಭರವಸೆ ನೀಡಿದ್ದರು. ಆದರೆ ಸಭೆ ನಡೆದು ನಾಲ್ಕು ತಿಂಗಳು ಕಳೆದರೂ ಟವರ್‌ ಮಾತ್ರ ಆರಂಭವಾಗಿಲ್ಲ.

ಶೀಘ್ರ ನೆಟ್‌ವರ್ಕ್‌ ಕೊಡಿಸಿ
ಗಂಗನಾಡು ಭಾಗದಲ್ಲಿ ಟವರ್‌ ನಿರ್ಮಾಣವಾಗಿದ್ದರೂ ಒಂದಿಲ್ಲೊಂದು ಕಾರಣಗಳಿಂದ ನೆಟ್ವರ್ಕ್‌ ನೀಡುವುದು ವಿಳಂಬವಾಗುತ್ತಿದೆ. ಕಳೆದ ವಾರ ಇಲಾಖೆ ಒಂದು ಟೆಸ್ಟಿಂಗ್‌ ನಡೆಸಿದೆ. ಕೆಲವು ಮೊಬೈಲ್‌ಗ‌ಳಿಗೆ ನೆಟ್‌ವರ್ಕ್‌ ಬಂದಿದೆ ಎನ್ನಲಾಗುತ್ತಿದೆ. ಆದರೆ, ಎಲ್ಲ ಕಡೆಯೂ ಸಿಗುತ್ತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಹಲವು ತಿಂಗಳುಗಳಿಂದ ವಿಳಂಬವಾಗಿರುವ ಮೊಬೈಲ್‌ ಟವರ್‌ ಕನೆಕ್ಷನನ್ನು ಒದಗಿಸಬೇಕು ಎಂದು ಗ್ರಾಮೀಣ ಜನರು ಮನವಿ ಮಾಡಿದ್ದಾರೆ.

-ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next