Advertisement
ಭಟ್ಕಳ ಹೊನ್ನಾವರ ಕಡೆಗಳ ಹಳ್ಳಿ ಹಳ್ಳಿಗಳಿಂದ ಸಾವಿರಾರು ಜನರು ಬಂದು ಇಲ್ಲಿನ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿ ಸೇರಿದ್ದು ನಂತರ ಮುಖ್ಯ ರಸ್ತೆ ಮೂಲಕ ಮೆರವಣಿಗೆಯಲ್ಲಿ ಬಂದು ಸಹಾಯಕ ಆಯುಕ್ತರ ಕಚೇರಿಯ ಆವರಣದ ಹೊರಗೆ ಸೇರಿದರು. ಇದಕ್ಕೂ ಮೊದಲು ಮೆರವಣಿಗೆಕಾರರನ್ನದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರು ಕಳೆದ ಐದು ವರ್ಷಗಳಲ್ಲಿ ಅನೇಕ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಭಟ್ಕಳ ಕ್ಷೇತ್ರದ ಜನತೆ ಈ ಬಾರಿಯೂ ಕೂಡಾ ಸುನಿಲ್ ನಾಯ್ಕ ಅವರನ್ನೇ ಆರಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದರು.
ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಭಟ್ಕಳ ಹೊನ್ನಾವರದ ಜನತೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಮೇಲೆ ವಿಶ್ವಾಸವಿರಿಸಿ ನಾಮ ಪತ್ರ ಸಲ್ಲಿಕೆಯ ಈ ಸಂದರ್ಭದಲ್ಲ ಸೇರಿದ್ದೀರಿ. ನಿಮ್ಮೆಲ್ಲರ ಸಹಕಾರದಿಂದ ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ಭಟ್ಕಳ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲಿದೆ ಎಂದರು. ಶಾಸಕ ಸುನಿಲ್ ನಾಯ್ಕ ಸಾವಿರ ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ನೋಡಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿ ಅಭಿಮಾನ ಇದೇ ರೀತಿ ಮುಂದುವರಿಯಲಿ ಎಂದು ಕೋರಿದರು.
ನಂತರ ಶಾಸಕ ಸುನಿಲ್ ನಾಯ್ಕ ಅವರು ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ, ಚುನಾವಣಾ ಉಸ್ತುವಾರಿ ಪ್ರಮೋದ ಮಧ್ವರಾಜ್, ರಾಜೇಶ ನಾಯ್ಕ, ಹಲ್ಯಾಣಿ ಸುಬ್ರಾಯ ಕಾಮತ್ ಅವರೊಂದಿಗೆ ನಾಮ ಪತ್ರವನ್ನು ಸಹಾಯಕ ಆಯುಕ್ತೆ ಹಾಗೂ ಚುನಾವಣಾಧಿಕಾರಿ ಮಮತಾದೇವಿ ಜಿ.ಎಸ್. ಅವರಿಗೆ ಸಲ್ಲಿಸಿದರು.
ನಂತರ ಮತ್ತೊಮ್ಮೆ ಬಂದ ಸುನಿಲ್ ನಾಯ್ಕ ಅವರು ಪತ್ನಿ ಕ್ಷಮಾ ಸುನಿಲ್ ನಾಯ್ಕ, ಸುಬ್ರಾಯ ದೇವಡಿಗ, ಭಾಸ್ಕರ ದೈಮನೆ, ಮೋಹನ ನಾಯ್ಕ ಅವರೊಂದಿಗೆ ತೆರಳಿ ಮತ್ತೊಂದು ಸೆಟ್ ನಾಮ ಪತ್ರವನ್ನು ಸಲ್ಲಿಸಿದರು.