ಹೈದೆರಾಬಾದ್: ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರಿಗೆ ಕೇಂದ್ರ ಸರಕಾರವು ಸಿಆರ್‌ಪಿಎಫ್‌ನ ‘ವೈ+’ ವರ್ಗದ ಭದ್ರತೆಯನ್ನು ಒದಗಿಸಿದೆ. ಮೂಲಗಳ ಪ್ರಕಾರ ತೆಲಂಗಾಣಕ್ಕೆ ಸೀಮಿತವಾಗಿ ಈ ಭದ್ರತೆ ಒದಗಿಸಲಾಗಿದೆ.
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಚುನಾವಣ ಪ್ರಚಾರ ನಡೆಸುತ್ತಿರುವ ಮಾಧವಿ ಅವರಿಗೆ ಬೆದರಿಕೆಗಳು ಇರುವ ಹಿನ್ನಲೆಯಲ್ಲಿ ಭದ್ರತೆ ಒದಗಿಸಲಾಗಿದೆ ಎಂದು ಹೇಳಲಾಗಿದೆ.
ಮಾಧವಿ ಲತಾ ಅವರು ಮಾತನಾಡಿ “ಅಸಾದುದ್ದೀನ್ ಓವೈಸಿ ಅವರಿಗೆ ಹೇಗೆ ಕೊಲೆ ಬೆದರಿಕೆ ಬರುತ್ತಿದೆ? ಅವರ ಮೇಲೆ ಯಾರಾದರೂ ಕಲ್ಲು ತೂರಾಟ ನಡೆಸುತ್ತಿದ್ದಾರೋ ಅಥವಾ ಹಲ್ಲೆ ಮಾಡುತ್ತಿದ್ದಾರಾ? ಇದೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ.ಅಸಾದುದ್ದೀನ್ ಓವೈಸಿಯವರೇ ಅವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ.ಇವರು ಇತರರ ಮೇಲೆ ದಾಳಿ ಮಾಡುವವರು, ಸಾರ್ವಜನಿಕರು ಇವರಿಂದ ಭದ್ರತೆ ಪಡೆಯಬೇಕು. ಅಸಾದುದ್ದೀನ್ ಓವೈಸಿ ಅವರಿಗೆ ಭದ್ರತೆ ಏಕೆ ಬೇಕು? ಅವರಿಗೆ ಮುಕ್ತಾರ್ ಅನ್ಸಾರಿ ಮತ್ತು ಕಿಂಗ್ಸ್ ಗುಂಪಿನೊಂದಿಗೆ ಸ್ನೇಹವಿದೆ” ಎಂದು ಆರೋಪಿಸಿದ್ದಾರೆ.
ಹೈದರಾಬಾದ್ ಸಂಸತ್ ಕ್ಷೇತ್ರದಲ್ಲಿ ನಕಲಿ ಮತಗಳ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಮಾಧವಿ “ನಾನು ಎಲ್ಲಾ ಡೇಟಾವನ್ನು ಕೇಂದ್ರ ಚುನಾವಣ ಆಯೋಗಕ್ಕೆ ನೀಡಿದ್ದೇನೆ ಮತ್ತು ಅವರು ಅದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಚುನಾವಣ ಆಯೋಗಕ್ಕೆ ನೀಡಿದ್ದಾರೆ. ಆದರೆ ಅವರಿಗೆ ಸಾಕಷ್ಟು ಜನರಿಲ್ಲದ ಕಾರಣ ಅವರು ಏನನ್ನೂ ಮಾಡಲು ಸಾಧ್ಯವಿಲ್ಲ. ರಾಜ್ಯ ಚುನಾವಣ ಆಯೋಗವು GHMC (ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್) ತನಿಖೆ ನಡೆಸಿ ಡೇಟಾವನ್ನು ಪ್ರಸ್ತುತಪಡಿಸಲು ಕೇಳಿದೆ ಆದರೆ GHMC ನಮಗೆ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಕೇಳುತ್ತಿದೆ. ನಾನು ಎಲ್ಲವನ್ನು ಸಲ್ಲಿಸಿದೆ. ಈಗ ತನಿಖೆ ನಡೆಸುವುದು ಅವರ ಕೆಲಸವಾಗಿದೆ. ಅವರ ಕೆಲಸವನ್ನು ಮಾಡಲು ನಾನು ನನ್ನ ಚುನಾವಣ ಪ್ರಚಾರವನ್ನು ಬಿಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.