Advertisement

ಬಿಜೆಪಿ ಅಭ್ಯರ್ಥಿ ಇಂದು ಘೋಷಣೆ; ಕಾಂಗ್ರೆಸ್‌ ಕಗ್ಗಂಟು

02:04 AM Nov 16, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸ್ಥಳೀಯಾಡಳಿತ ಸಂಸ್ಥೆ ಚುನಾವಣ ಕ್ಷೇತ್ರದಿಂದ ವಿಧಾನ ಪರಿಷತ್‌ನ ಎರಡು ಸ್ಥಾನಗಳಿಗೆ ಡಿ.10ರಂದು ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮಂಗಳವಾರ ಘೋಷಣೆಯಾಗುವ ಸಾಧ್ಯತೆಗಳಿವೆ. ಆದರೆ, ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆ ಮಾತ್ರ ಕಗ್ಗಂಟಾಗಿ ಪರಿಣ ಮಿಸಿದೆ.

Advertisement

ಬಿಜೆಪಿ ಪಕ್ಷದ ಮೂಲಗಳ ಪ್ರಕಾರ, ಬಿಜೆಪಿ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅಭ್ಯರ್ಥಿಯಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್‌ನಿಂದ ಉಡುಪಿಯಲ್ಲಿ 3 ಹಾಗೂ ದ.ಕ. ಜಿಲ್ಲೆ 8 ಸೇರಿದಂತೆ ಒಟ್ಟು 11 ಮಂದಿ ಪಕ್ಷದ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ದ.ಕ. ಜಿಲ್ಲೆಯಿಂದ ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ಎಐಸಿಸಿ ಕಾರ್ಯದರ್ಶಿಗಳಾದ ಪಿ.ವಿ. ಮೋಹನ್‌, ಐವನ್‌ ಡಿ’ಸೋಜಾ, ಕಾವು ಹೇಮನಾಥ ಶೆಟ್ಟಿ, ಪ್ರಸಾದ್‌ ರಾಜ್‌ ಕಾಂಚನ್‌, ಕೃಪಾ ಆಳ್ವ, ವಿವೇಕರಾಜ್‌ ಪೂಜಾರಿ ಸೇರಿದಂತೆ ಒಟ್ಟು 8 ಮಂದಿ ಹಾಗೂ ಉಡುಪಿಯಿಂದ ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಮಹಿಳಾ ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷೆ, ನ್ಯಾಯವಾದಿ ಶ್ಯಾಮಲಾ ಭಂಡಾರಿ ಹಾಗೂ ಯೋಗೀಶ್‌ ಶೆಟ್ಟಿ ಅವರು ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಕೆಲವು ಅನಿರೀಕ್ಷಿತ ರಾಜಕೀಯ ವಿದ್ಯಮಾನಗಳು ಎದುರಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಇದನ್ನೂ ಓದಿ:ಆದಿವಾಸಿಗಳ ನಿರ್ಲಕ್ಷಿಸಿದ್ದ ಕಾಂಗ್ರೆಸ್‌: ಪ್ರಧಾನಿ ಮೋದಿ ಆರೋಪ

ಪಕ್ಷೇತರರಾಗಿ ಡಾ| ರಾಜೇಂದ್ರ ಕುಮಾರ್‌ ಕಣಕ್ಕೆ
ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ಚುನಾವಣ ಕಣಕ್ಕೆ ಹೊಸ ತಿರುವು ನೀಡಿದೆ. ರಾಜೇಂದ್ರ ಕುಮಾರ್‌ ಅವರು ನ. 22ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

Advertisement

ಮತಗಳ ಲೆಕ್ಕಚಾರ
ಪ್ರಾಶಸ್ತ್ಯ ಮತಗಳ ಆಧಾರದಲ್ಲಿ ಜಯ ನಿರ್ಧಾರವಾಗಲಿದೆ. ಪ್ರಸ್ತುತ ಲೆಕ್ಕಚಾರದಂತೆ ಗೆಲುವು ಸಾಧಿಸುವ ಅಭ್ಯರ್ಥಿ ಒಟ್ಟು 2020 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯಬೇಕಾಗಿದೆ. ಬಿಜೆಪಿಯ ಲೆಕ್ಕಾಚಾರದಂತೆ ಪಕ್ಷ ದ.ಕ. ಹಾಗೂ ಉಡುಪಿ ಜಿಲ್ಲೆ ಸೇರಿ ಒಟ್ಟು 3,287 ಮತಗಳನ್ನು ಹೊಂದಿದೆ. ಕಾಂಗ್ರೆಸ್‌ ದ.ಕ. ಹಾಗೂ ಉಡುಪಿ ಜಿಲ್ಲೆ ಸೇರಿ ಒಟ್ಟು 1,880 ಮತಗಳನ್ನು ಹೊಂದಿದೆ. ಉಳಿದಂತೆ ಇತರ ಪಕ್ಷಗಳು, ಪಕ್ಷೇತರರು ಸೇರಿ ಒಟ್ಟು ಸುಮಾರು 400 ಮತದಾರರಿದ್ದಾರೆ.

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ
ವಿಧಾನ ಪರಿಷತ್‌ ಚುನಾವಣೆಗೆ ನ. 16ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ನ. 23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ನ. 24ರಂದು ನಾಮಪತ್ರ ಪರಿಶೀಲನೆ, ನ. 26 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. ಡಿ.10ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಡಿ.14ರಂದು ಮತಗಳ ಎಣಿಕೆ ನಡೆಯಲಿದೆ. ಡಿ.16 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next