ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿಗೆ ಎಟಿಎಂ ಇದ್ದಂತೆ. ಕರ್ನಾಟಕದಲ್ಲಿ ಲೂಟಿ ಬಿಟ್ಟರೆ ಬೇರಾವ ಕೆಲಸ ಆಗುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗದೇ ಇಲ್ಲಿನ ಕೆಲ ಕಾಂಗ್ರೆಸ್ ನಾಯಕರ ಜೇಬು ಸೇರುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗಂಭೀರ ಆರೋಪ ಮಾಡಿದರು.
ಭಾಲ್ಕಿಯಲ್ಲಿ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಭಾಷಣದುದ್ದಕ್ಕೂ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು. ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ಬಡವರಿಗೆ ಆಸರೆಯಾಗಬೇಕಾದ ಮನೆಗಳನ್ನೂ ಸಹ ಕಾಂಗ್ರೆಸ್ ನಾಯಕರು ಬಿಡುತ್ತಿಲ್ಲ. ಬಿಜೆಪಿ ಸರಕಾರ ಅ ಧಿಕಾರಕ್ಕೆ ಬಂದರೆ ಲೂಟಿ ಮಾಡಿರುವ ಸಂಪತ್ತನ್ನು ಜಪ್ತಿ ಮಾಡಿ ಜನರ ಕಲ್ಯಾಣಕ್ಕೆ ಬಳಸಿಕೊಳ್ಳಲಾಗುವುದು ಎಂದರು.
ಸಿದ್ದರಾಮಯ್ಯ ಅವರ ದುರಾಡಳಿತ ದಿಂದಾಗಿ ಕರ್ನಾಟಕದ ಜನ ಕಷ್ಟದಲ್ಲಿ ಸಿಲುಕಿದ್ದಾರೆ. ದೇಶದಲ್ಲಿ ಎಲ್ಲಕ್ಕೂ ಹೆಚ್ಚು ರೈತರ ಆತ್ಮಹತ್ಯೆ ನಡೆದಿರುವುದು ಕರ್ನಾಟಕದಲ್ಲಿ. ಆದರೆ “ನೋಟು’ ಮೇಲೆ ಗಮನ ಇಟ್ಟಿರುವ ಸಿದ್ದರಾಮಯ್ಯ ಅವರಿಗೆ ಇದಾವುದೂ ಕಾಣುತ್ತಿಲ್ಲ. ಇಂಥವರು ಯಾವುದೇ ಕಾರಣಕ್ಕೂ ಅಧಿ ಕಾರದಲ್ಲಿ ಇರಬಾರದು. ಅಭಿವೃದ್ಧಿಯ ಹಣದ ಲೂಟಿ ನಿಲ್ಲಬೇಕಾದರೆ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಬೇಕು. ಭ್ರಷ್ಟಾಚಾರ, ಅವ್ಯವಸ್ಥೆ, ಅಶಾಂತಿ ಹೆಚ್ಚಿರುವ ಕರ್ನಾಟಕವನ್ನು ರಾಮರಾಜ್ಯವನ್ನಾಗಿ ಮಾಡಲು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದರು.
ನಾನು ಉತ್ತರ ಪ್ರದೇಶದಿಂದ ಕರ್ನಾಟಕಕ್ಕೆ ಬಂದಿದ್ದೇನೆ. ಉತ್ತರ ಪ್ರದೇಶ ಶ್ರೀರಾಮನ ಜನ್ಮಸ್ಥಳ. ಕರ್ನಾಟಕ ಹನುಮನ ಹುಟ್ಟೂರು. ರಾಮರಾಜ್ಯ ನಿರ್ಮಾಣದಲ್ಲಿ ಶ್ರೀರಾಮಚಂದ್ರನಿಗೆ ಬೆಂಬಲವಾಗಿ ನಿಂತವರು ರಾಮಭಕ್ತ ಹನುಮಾನ್. ಈ ಚುನಾವಣೆಯಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಮೂಲಕ ಬಿಜೆಪಿಯನ್ನು ಬೆಂಬಲಿಸಿ ರಾಮರಾಜ್ಯದ ಕನಸು ಸಾಕಾರಗೊಳಿಸಬೇಕಿದೆ ಎಂದರು.
ಛತ್ರಪತಿ ಶಿವಾಜಿ ರಾಷ್ಟ್ರಭಕ್ತಿಯ ಪ್ರತೀಕರಾಗಿದ್ದು, ಪ್ರತಿಯೊಬ್ಬ ಭಾರತೀಯನಿಗೆ ಅವರ ಬಗ್ಗೆ ಗೌರವ ಭಾವನೆ ಇದೆ. ಆದರೆ, ಇಲ್ಲಿನ ಕಾಂಗ್ರೆಸ್ ಸರಕಾರ ಶಿವಾಜಿ ಜಯಂತಿಗೆ ವಿರೋ ಧಿಸುತ್ತದೆ. ಆದರೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತದೆ. ಆ ಮೂಲಕ ರಾಷ್ಟ್ರಕ್ಕೆ ಅವಮಾನ ಮಾಡಿದೆ. ಎಸ್‌ಸಿ, ಎಸ್‌ಟಿ ಸಮುದಾಯುದವರಿಗೆ ಬಿಜೆಪಿ ಸರಕಾರ ಸಮ್ಮಾನ ನೀಡಿದೆ ಹೊರತು ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಯಾರಾದರೂ ಸಮ್ಮಾನ ನೀಡಿದ್ದರೆ ಅದು ಬಿಜೆಪಿ ಹೊರತು, ಸಂಸದರಾಗಿ ಆಯ್ಕೆ ಮಾಡದ ಮತ್ತು ಭಾರತ ರತ್ನ ಕೊಡಲು ಹಿಂದೇಟು ಹಾಕಿದ ಕಾಂಗ್ರೆಸ್ ಅಲ್ಲ ಎಂದರು.
ಕರ್ನಾಟಕಕ್ಕೆ ಯೋಗಿ ಯಾಕಾದರೂ ಬರುತ್ತಾರೆ ಎಂದು ಸಿಎಂ ಸಿದ್ಧರಾಮಯ್ಯಗೆ ನಿದ್ದೆ ಬರುವುದಿಲ್ಲ. ಆದರೆ ನಾನು ನನ್ನ ರಾಜ್ಯದಲ್ಲಿ ಮಾಡಿರುವ ಕೆಲಸಗಳನ್ನು ಹೇಳಲು ಬರುತ್ತೇನೆ. ಆಡಳಿತಕ್ಕೆ ಬಂದ ಒಂದೇ ವರ್ಷದಲ್ಲಿ 86 ಲಕ್ಷ ರೈತರ ತಲಾ ಒಂದು ಲಕ್ಷ ರೂ. ಸಾಲ ಮನ್ನಾ ಮಾಡಿದ್ದೇನೆ. ಇದು ಇಲ್ಲಿನ ಸಿಎಂಗೆ ಏಕೆ ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರ ತಡೆದು, ಆ ಹಣವನ್ನು ರೈತರಿಗೆ ಹಂಚುತ್ತಿದ್ದೇನೆ. ಪ್ರವಾಹದಿಂದ ಪೀಡಿತ ಕುಟುಂಬಗಳಿಗೆ ಕೇವಲ 24 ಗಂಟೆಗಳಲ್ಲಿ ಸವಲತ್ತುಗಳನ್ನು ಒದಗಿಸಿದ್ದೇನೆ. ಆದರೆ ಕರ್ನಾಟಕದಲ್ಲಿ ಜನರ ಅಭಿವೃದ್ಧಿಗಾಗಿ ಬಂದ ಹಣ ಲೂಟಿ ಆಗುತ್ತಿದೆ. ರೈತರ ಕಣ್ಣೀರು ಒರೆಸುವ ಬದಲು ಅವರ ಕಲ್ಯಾಣಕ್ಕೆ ಬಿಡುಗಡೆಯಾದ ಹಣವನ್ನೂ ಕೊಳ್ಳೆ ಹೊಡೆಯಲಾಗಿದೆ.
– ಯೋಗಿ ಆದಿತ್ಯನಾಥ,