ಮಡಿಕೇರಿ: ರಾಜ್ಯದಲ್ಲಿ ಬಂದ್ “ರಾಜಕಾರಣ’ ತೀವ್ರವಾಗುವ ಎಲ್ಲಾ ಸಾಧ್ಯತೆಗಳು ಇವೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಮೈಸೂರಿಗೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿಯೇ ರಾಜ್ಯ ಸರ್ಕಾರ ಕುಮ್ಮಕ್ಕು ನೀಡಿ ಬಂದ್ ಆಚರಿಸುವಂತೆ ಮಾಡಿದೆ ಎಂಬುದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆರೋಪ. ಹೀಗಾಗಿ ಇನ್ನು ಮುಂದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡುವ ಜಿಲ್ಲೆಗಳಲ್ಲಿ ಬಂದ ಆಚರಿಸಲು ಬಿಜೆಪಿ ನಿರ್ಧರಿಸಿದೆ.
ನಗರದ ಗಾಂಧಿ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ. 25ರ ಕರ್ನಾಟಕ ಬಂದನ್ನು ರಾಜ್ಯ ಸರಕಾರ ಪರೋಕ್ಷವಾಗಿ ವಿವಿಧ ಸಂಘಟನೆಗಳ ಮೂಲಕ ನಡೆಸಲು ಮುಂದಾಗಿದೆ ಎಂದರು.
ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಫೆ. 4ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಂತದಲ್ಲೂ ಬಂದ್ ನಡೆಸುವ ಕುತಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ. ಹಾಗೇನಾದರೂ ಕಾಂಗ್ರೆಸ್ ನಡೆದುಕೊಂಡಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಯಾವುದೇ ಜಿಲ್ಲೆಗೆ ಭೇಟಿ ನೀಡಿದರೂ ಅಲ್ಲಿ ಬಿಜೆಪಿ ಬಂದ್ ಮತ್ತು ಪ್ರತಿಭಟನೆ ನಡೆಸಲಿದೆ ಎಂದರು.
ಮೈಸೂರಿನ ಯಾತ್ರೆಗೆ ಲಕ್ಷ ಜನ: ಮೈಸೂರಿನಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಕಿರುಕುಳ ನೀಡುವ ಉದ್ದೇಶದಿಂದ ಪರೋಕ್ಷವಾಗಿ ಬಂದ್ ಕರೆಯನ್ನು ನೀಡುವ ಕಾರ್ಯವನ್ನು ಕಾಂಗ್ರೆಸ್ ವಿವಿಧ ಸಂಘ-ಸಂಸ್ಥೆಗಳ ಮೂಲಕ ಮಾಡಿದೆ. ಆದರೆ, ಮೈಸೂರಿನ ಪರಿವರ್ತನಾ ಯಾತ್ರೆ ಲಕ್ಷಾಂತರ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಯಡಿಯೂರಪ್ಪ ಹೇಳಿದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯವ್ಯಯ ಮಂಡನೆಗೆ ಯಾವುದೇ ಅವಕಾಶವಿಲ್ಲ. ಬೇಕಾಬಿಟ್ಟಿಯಾಗಿ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಮುಂದಾದಲ್ಲಿ ಅದಕ್ಕೆ ಕಾನೂನಿನಲ್ಲಿಯೂ ಅವಕಾಶವಿಲ್ಲ. ತರಾತುರಿಯ ಕಾಮಗಾರಿಗಳ ಮೂಲಕ ಹಳೆಕಲ್ಲಿಗೆ ಹೊಸಬಿಲ್ಲು ತೋರಿಸಲು ಸರಕಾರ ಮುಂದಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದರು.