Advertisement

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

08:52 PM Mar 29, 2024 | Vishnudas Patil |

ವಿಜಯಪುರ : ಅಪ್ಪ-ಮಕ್ಕಳ ವರ್ತನೆಯಿಂದ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲ ಸೃಷ್ಟಿಯಾಗಿದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆ ಕೂಗು ಏಳಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಪಾಳೆಯದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಗೊಂದಲವಾಗಿದೆ. ಸಾಕಷ್ಟು ಕಡೆಗಳಲ್ಲಿ ಸಮಸ್ಯೆ ಆಗಿದೆ. ಇವರು ನಡೆದುಕೊಂಡ ರೀತಿ ಸರಿಯಾಗಿಲ್ಲ ಎಂದು ಹರಿಹಾಯ್ದರು.

ಯಡಿಯೂರಪ್ಪ ಹಾಗೂ ಅವರ ಮಕ್ಕಳನ್ನು ಬಿಟ್ಟರೆ ರಾಜ್ಯದಲ್ಲಿ ಬಿಜೆಪಿ ಮುಳುಗುತ್ತದೆ ಎಂದು ವರಿಷ್ಠರು ತಿಳಿದಿದ್ದಾರೆ. ಆದರೆ ಇವರ ಹಿಂದೆ ಯಾವುದೇ ಸಮುದಾಯ ಇಲ್ಲ. ಲಿಂಗಾಯತ ಮೇಜರ್ ಜನರೂ ಅವರ ಹಿಂದಿಲ್ಲ. ನಾವಂತೂ ಅವರ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ‌ ಇವರ ಕೈಯಲ್ಲಿ ಬಿಜೆಪಿ ಸುರಕ್ಷಿತ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು‌.

ಮೀಸಲಾತಿ ವಿಷಯದಲ್ಲಿ ಯಡಿಯೂರಪ್ಪ ಎಷ್ಟೊಂದು ಅಡ್ಡಹಾಕಿದರು. ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್ ನಲ್ಲಿ ಯಾರು ವಿರೋಧಿಸಿದರು ಎಂಬುದೆಲ್ಲ ಗೊತ್ತಿದೆ. ಚುನಾವಣೆ ಮುಗಿದ ಬಳಿಕ ಇವರೆಲ್ಲರ ಹೆಸರು ಬಹಿರಂಗ ಪಡಿಸುತ್ತೇವೆ ಎಂದು ಎಚ್ಚರಿಸಿದರು‌

ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಉದ್ದೇಶದಿಂದ ಕೆಲವರು ನಾಲ್ಕಾರು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಿರುತ್ತಾರೆ. ಆದರೆ ಪಕ್ಷದ ಸಂಘಟನೆಯಲ್ಲಿ ನಿಷ್ಕ್ರಿಯರಿಗೆ ಟಿಕೆಟ್ ನೀಡಿದಾಗ ಪಕ್ಷದ ಕಾರ್ಯಕರ್ತರಿಗೆ ನೋವಾಗುವುದು ಸಹಜ ಎಂದರು.

Advertisement

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಹೇಳಿದ್ದೇ ತಡ‌ ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ ಮಾಡದೇ ಗೌರವಯುತವಾಗಿ ಸುಮ್ಮನಾದರು. ಆದರೆ ಕೆಲವರು ಪಕ್ಷ ಬಿಟ್ಟು ಹೊರಗೆ ಹೋಗಿ ಬಂದು, ಲೋಕಸಭೆ ಟಿಕೆಟ್ ಪಡೆದಿದ್ದಾರೆ. ನಿಷ್ಠಾವಂತ ಹಿಂದುತ್ವವಾದಿ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಬರತೊಡಗಿದೆ ಎಂದು ಪರೋಕ್ಷವಾಗಿ ಜಗದೀಶ ಶೆಟ್ಟರ್ ಅವರನ್ನು ಕುಟುಕುತ್ತಲೇ ಈಶ್ವರಪ್ಪ ಪರವಾಗಿ ಮಾತನಾಡಿದರು.

ಇದೀಗ ಈಶ್ವರಪ್ಪ ಅವರು ಮಾತನಾಡುತ್ತಿರುವುದೆಲ್ಲ ಸತ್ಯ ಇದೆ. ಯಾವುದನ್ನೂ ಸುಳ್ಳು ಮಾತನಾಡುತ್ತಿಲ್ಲ. ಇದನ್ನು ಸರಿಪಡಿಸಬೇಕಾಗಿತ್ತು. ಆದರೆ ಅಪ್ಪ-ಮಕ್ಕಳಿಂದ ಅಂಥ ವಾತಾವರಣವನ್ನು ರಾಜ್ಯದಲ್ಲಿ ನೋಡಲಾಗುತ್ತಿಲ್ಲ ಎಂದು ಬಿಜೆಪಿ ವರಿಷ್ಠರಾದ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.

ಅಷ್ಟು ಪಕ್ಷದ ಬಗ್ಗೆ ಕಾಳಜಿ ಇದ್ದರೆ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ತ್ಯಾಗ ಮಾಡಬಹುದಿತ್ತು.ಅಪ್ಪ ಬಿಜೆಪಿ ಪಾರ್ಲಿಮೆಂಟರಿ ಸದಸ್ಯ, ಒಬ್ಬ ಮಗ ಶಾಸಕ,ಬಿಜೆಪಿ ರಾಜ್ಯಾಧ್ಯಕ್ಷ ಮತ್ತೊಬ್ಬ ಮಗ ಎಂಪಿ., ಮತ್ತೊಬ್ಬರಿಗೆ ತ್ಯಾಗ ಮಾಡುವಂತೆ ಹೇಳುವ ಅಪ್ಪ-ಮಕ್ಕಳು ಈಶ್ವರಪ್ಪ ಅವರಿಗೆ ತ್ಯಾಗ ಮಾಡಬಹುದಿತ್ತಲ್ಲ. ರಾಘವೇಂದ್ರ ಅವರನ್ನು ಸರಿಸಿ ಹಿಂದುಳಿದ ವರ್ಗದ ಕುರುಬ ಸಮಾಜದ ಈಶ್ವರಪ್ಪ ಅವರಿಗೆ ಅವಕಾಶ ಕೊಡಬಹುದಿತ್ತಲ್ಲ ಎಂದರು‌.

ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆ ಬಳಿಕ 28 ಕ್ಷೇತ್ರಗಳನ್ನು ನೂರಕ್ಕೆ ನೂರರಷ್ಟು ಗೆಲ್ಲುವುದು ಖಚಿತವಾದ ವಾತಾವರಣ ರಾಜ್ಯದಲ್ಲಿ ಸೃಷ್ಟಿ ಯಾಗಿತ್ತು. ಅದರೆ ಅಪ್ಪ-ಮಕ್ಕಳು ಸೃಷ್ಟಿಸಿದ ಗೊಂದಲ, ಅವರೇ ಹಚ್ಚುತ್ತಿರುವ ಜಗಳದಿಂದ ಬಿಜೆಪಿ ಪಕ್ಷದಲ್ಲಿನ ಬೆಳವಣಿಗೆಯಿಂದ ಕಾರ್ಯಕರ್ತರು ವಿಚಲಿತರಾಗಿದ್ದಾರೆ ಎಂದರು‌.

ತುಮಕೂರು, ಚಿತ್ರದುರ್ಗ, ದಾವಣಗೆರೆ ಹೀಗೆ ಹಲವು ಕಡೆಗಳಲ್ಲಿ ಅಪ್ಪ ಮಕ್ಕಳೇ ಜಗಳ ಹಚ್ಚಿದ್ದಾರೆ. ಯಡಿಯೂರಪ್ಪ ಕೆಜೆಪಿ ಮಾಡಿದಾಗ ಚಿತ್ರದುರ್ಗ ಚಂದ್ರಪ್ಪ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರ ಹಿಂದೆ ಹೋಗಿದ್ದರು. ಆದರೆ ಕಾರಜೋಳ ಅವರಿಗೆ ಟಿಕೆಟ್ ನೀಡದಿದ್ದರೆ ನಾನು ಪ್ರಚಾರ ಮಾಡುವುದಿಲ್ಲ ಎಂದು ಅಂಜಿಸಿ ಟಿಕೆಟ್ ಬದಲಾವಣೆ ಮಾಡಿದ್ದಾರೆ ಎಂದು ಶಾಸಕ ಚಂದ್ರಣ್ಣ ಅವರೇ ಹೇಳಿದ್ದಾರೆ ಎಂದು  ಹರಿಹಾಯ್ದರು.

ಬೆಳಗಾವಿಯಲ್ಲಿ ಸ್ಥಳೀಯ ನಾಯಕತ್ವದ ಹೊರತಾದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ನನಗೂ ಬಾಗಲಕೋಟ, ಬೆಳಗಾವಿ ಚೂಸ್ ಮಾಡಿಕೋ ಎಂದು ನನಗೂ ಹೇಳಿದರು. ಆದರೆ ಸ್ಥಳೀಯ ನಾಯಕತ್ವ ಗಟ್ಟಿ ಇದ್ದಾಗ, ಬೇರೆ ಜಿಲ್ಲೆಯವರು ಹೋಗಿ ತೊಂದರೆ ಕೊಡುವುದು ಬೇಡ ಎಂದು ನಾನೇ ಹೇಳಿದ್ದೆ ಎನ್ನುವ ಮೂಲಕ ಜಗದೀಶ ಶಟ್ಟರ್ ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿದರು.

ಬೆಳಗಾವಿಯಲ್ಲಿ ಜಗದೀಶ ಶಟ್ಟರಗೆ ಟಿಕೆಟ್ ನೀಡಿರುವಲ್ಲಿ ಕೆಡವಬೇಕು ಅಂತಾನೂ ಗೊತ್ತಿಲ್ಲ, ಅವರನ್ನು ಬಲಿಕೊಡುವ ಉದ್ದೇಶವೋ ಗೊತ್ತಿಲ್ಲ. ಹೆಬ್ಬಾಳ್ಕರ್ ಜೊತೆ ಒಪ್ಪಂದವೋ ಗೊತ್ತಿಲ್ಲ. ಹೆಬ್ಬಾಳ್ಕರಗೆ ಅನುಕೂಲ ಆಗಲೆಂಬ ಕುತಂತ್ರ ಇರಬಹುದು, ಅದೂ ಹೊರ ಬರಲಿದೆ ಎಂದರು‌

ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು,  ಭಾರತದಲ್ಲಿರುವ ಜನರು ಸುರಕ್ಷಿತವಾಗಿಲ್ಲ ಎಂಬ ಭಾವನೆಯಿಂದಲೇ ಮತದಾರರು ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಸಿದ್ಧರಾಗಿದ್ದಾರೆ ಎಂದರು.

ದಿಂಗಾಲೇಶ್ವರ ಸ್ವಾಮಿ ಯಡಿಯೂರಪ್ಪ ಚೇಲಾ ಎಂದು ಹಿಂದೆಯೇ ಹೇಳಿದ್ದೇನೆ. ಬೆಳಗಾವಿಯಲ್ಲಿ ಅವನ ಶಿಷ್ಯನಿಗೆ ಟಿಕೆಟ್ ಕೊಟ್ಟಿಲ್ಲ. ಅದಕ್ಕೆ ಮಾತನಾಡುತ್ತಿದ್ದಾನೆ ಎಂದು ಹರಿಹಾಯ್ದ ಯತ್ನಾಳ್ , ಇಂಥ ಸ್ವಾಮಿಗಳನ್ನು ಬೆನ್ನುಹತ್ತಿ ನಿಮ್ಮ ಗೌರವ ಕಡಿಮೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು‌.

Advertisement

Udayavani is now on Telegram. Click here to join our channel and stay updated with the latest news.

Next