Advertisement

ಪಾಲಿಕೆಯಲ್ಲಿ ಕೈ ಸುಟ್ಟುಕೊಂಡ ಬಿಜೆಪಿ

12:27 PM Sep 29, 2018 | Team Udayavani |

ಬೆಂಗಳೂರು: ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜೆಡಿಎಸ್‌ನ ಅತೃಪ್ತ ಸದಸ್ಯರಿಗೆ ಗಾಳ ಹಾಕಿದ್ದ ಬಿಜೆಪಿ, ಕೊನೇ ಹಂತದಲ್ಲಿ ಕೈ ಸುಟ್ಟುಕೊಳ್ಳುವಂತಾಗಿದೆ. ರಾಮಲಿಂಗಾರೆಡ್ಡಿ ಕಾರ್ಯತಂತ್ರದ ಮುಂದೆ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ತಂತ್ರ “ಠುಸ್‌’ ಆಗಿದೆ.

Advertisement

ಮೊದಲು ಪಕ್ಷೇತರ ಸದಸ್ಯ ಆನಂದ್‌, ರಮೇಶ್‌ರನ್ನು “ಬುಕ್‌’ ಮಾಡಿಕೊಂಡಿದ್ದ ಬಿಜೆಪಿ ನಂತರ ಉಪ ಮೇಯರ್‌ ಆಕಾಂಕ್ಷಿಯಾಗಿದ್ದ ಇಮ್ರಾನ್‌ ಪಾಷಾ, ಮಂಜುಳಾ ನಾರಾಯಣಸ್ವಾಮಿ, ದೇವದಾಸ್‌, ನಾಜೀಂಖಾನ್‌ಗೆ ಗಾಳ ಹಾಕಿ ಪಕ್ಷದ ವಿಪ್‌ ವಿರೋಧಿಸಿ ಇಬ್ಬರು ಕೈ ಎತ್ತುವುದು. ಉಳಿದ ಇಬ್ಬರು ಚುನಾವಣಾ ಪ್ರಕ್ರಿಯೆಯಿಂದ ಗೈರು ಹಾಜರಾಗುವ ಕಾರ್ಯತಂತ್ರ ರೂಪಿಸಿದ್ದರು. ಇದಕ್ಕಾಗಿ ಹಣದ ವಿನಿಯಮವೂ ನಡೆದಿತ್ತು.

ಇದರ ಮಾಹಿತಿ ಪಡೆದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಮಧ್ಯರಾತ್ರಿ ಸಚಿವ ಜಮೀರ್‌ ಅಹಮದ್‌ ಜತೆಗೂಡಿ ಬಿಜೆಪಿಗೆ ತಿರುಗೇಟು ನೀಡಲು ಪ್ರತಿತಂತ್ರ ರೂಪಿಸಿದ್ದರು. ಅದರಂತೆ ಬೆಳಗ್ಗೆ ಕಾರ್ಯಾಚರಣೆಗಿಳಿದ ಜಮೀರ್‌ ಆಹಮದ್‌ ಹಾಗೂ ಇತರೆ ಕಾಂಗ್ರೆಸ್‌ ಶಾಸಕರು ಪಕ್ಷೇತರ ಸದಸ್ಯ ಆನಂದ್‌, ಜೆಡಿಎಸ್‌ನ ಇಮ್ರಾನ್‌ ಪಾಶಾ, ದೇವದಾಸ್‌, ಮಂಜುಳಾ ನಾರಾಯಣಸ್ವಾಮಿ ಅವರನ್ನು ಮನವೊಲಿಸಿ ಪೌರ ಸಭಾಂಗಣದಲ್ಲೇ ಕಾಂಗ್ರೆಸ್‌ ಪರ ಮತ ಹಾಕಲು ಒಪ್ಪಿಸಿದರು ಎಂದು ಹೇಳಲಾಗಿದೆ.

ಆನಂದ್‌ ಕೊನೇ ಕ್ಷಣದವರೆಗೂ ಅಲ್ಲೇ ಇದ್ದು ಪೌರ ಸಭಾಂಗಣಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್‌ ಕಡೆ ಬರುವುದು ಎಂಬುದು ಮುಂಜಾನೆಯೇ ತೀರ್ಮಾನವಾಗಿತ್ತು ಎಂದು ಹೇಳಲಾಗಿದೆ. ಆದರೆ, ಮಂಜುಳಾ ನಾರಾಯಣಸ್ವಾಮಿ ಮೇಯರ್‌ ಆಯ್ಕೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿ  ಉಪ ಮೇಯರ್‌ ಆಯ್ಕೆ ವೇಳೆ ಜೆಡಿಎಸ್‌ ಅಭ್ಯರ್ಥಿಗೆ ಮತಹಾಕಲಿಲ್ಲ. ಕೆ.ಆರ್‌.ಮಾರುಕಟ್ಟೆ ವಾರ್ಡ್‌ನ ನಾಜೀಂಖಾನ್‌ ಮತದಾನ ಪ್ರಕ್ರಿಯೆಯಿಂದಲೇ ದೂರ ಉಳಿದರು.

ಇದರ ನಡುವೆಯೂ ನಂಬರ್‌ ಗೇಮ್‌ ಹೆಚ್ಚು ಕಡಿಮೆ ಆಗದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್‌ ತಂಡ ಯಶಸ್ವಿಯಾಯಿತು. ಅಂತಿಮ ಕ್ಷಣದಲ್ಲಿ ಮೇಯರ್‌- ಉಪ ಮೇಯರ್‌ ಪಟ್ಟ ಬಿಜೆಪಿ ಪಾಲಾಗುವುದು ತಪ್ಪಿತು. ರಾಮಲಿಂಗಾರೆಡ್ಡಿ ಅಭ್ಯರ್ಥಿ ಗಂಗಾಂಬಿಕೆ ಮೇಯರ್‌ ಆಗುವುದು ಕಾಂಗ್ರೆಸ್‌ನಲ್ಲೇ ಕೆಲವರಿಗೆ ಇಷ್ಟ ಇರಲಿಲ್ಲ.

Advertisement

ಜತೆಗೆ, ಮಾಜಿ ಸಚಿವ ರೋಷನ್‌ಬೇಗ್‌ ಚುನಾವಣಾ ಪ್ರಕ್ರಿಯೆಗೆ ಗೈರು ಹಾಜರಾಗುವ ಮುನ್ಸೂಚನೆ ಪಡೆದಿದ್ದ ರಾಮಲಿಂಗಾರೆಡ್ಡಿ, ಜಮೀರ್‌ ಅಹಮದ್‌ ಅವರ ಮೂಲಕ ಜೆಡಿಎಸ್‌ನ ಅತೃಪ್ತ ಸದಸ್ಯರನ್ನು ಹಿಡಿದಿಟ್ಟುಕೊಂಡು, ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಮನಿರತ್ನ, ಬೈರತಿ ಬಸವರಾಜ್‌ ಮೂಲಕ ಪಕ್ಷೇತರರನ್ನು ರೆಸಾರ್ಟ್‌ನಲ್ಲಿ ಕಾಯ್ದುಕೊಂಡು ತಮ್ಮ ಅಭ್ಯರ್ಥಿ ಮೇಯರ್‌ ಆಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿಯವರು ತಮ್ಮನ್ನು ಅಪಹರಿಸಿದ್ದರು ಎಂದು ಸ್ವತಃ ಪಕ್ಷೇತರ ಸದಸ್ಯ ಆನಂದ್‌ ಅವರೇ ಹೇಳಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ರಾಜೀವ್‌ ಚಂದ್ರಶೇಖರ್‌ ಹಾಗೂ ಪಿ.ಸಿ.ಮೋಹನ್‌ ಆಪರೇಷನ್‌ ಕಮಲಕ್ಕೆ ಕೈ ಹಾಕಿದ್ದರು. ಆದರೆ, ಸಚಿವರಾದ ಜಮೀರ್‌, ಕೃಷ್ಣ ಬೈರೇಗೌಡ ಹಾಗೂ ನಮ್ಮೆಲ್ಲಾ ಶಾಸಕರು ಬಿಜೆಪಿಯ ತಂತ್ರ ವಿಫ‌ಲಗೊಳಿಸಿದರು.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next