Advertisement

BJP: ಕಾಂಗ್ರೆಸ್‌ ವಿರುದ್ಧ ಬಿಜೆಪಿ “ಪೋಸ್ಟರ್‌” ಸಮರ

11:51 PM Oct 20, 2023 | Team Udayavani |

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃ ತ್ವದ ಬಿಜೆಪಿ ಸರಕಾರದ ವಿರುದ್ಧ “ಪೇ ಸಿಎಂ’ ಅಭಿಯಾನ ನಡೆಸಿದ್ದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಈಗ ಅದೇ ಮಾದರಿಯ “ಕಲೆಕ್ಷನ್‌ ಪೋಸ್ಟರ್‌’ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದೆ. ತಮ್ಮ ಸರಕಾರದ ವಿರುದ್ಧ ಕಾಂಗ್ರೆಸ್‌ ಬಳಸಿದ ಅಸ್ತ್ರಗಳನ್ನು ಬಿಜೆಪಿ ಈಗ ತಿರುಗುಬಾಣಗಳನ್ನಾಗಿ ಪ್ರಯೋಗಿಸುತ್ತಿದೆ.

Advertisement

ಬಿಜೆಪಿ ಆಡಳಿತದ ಸಿಎಂ ಬೊಮ್ಮಾಯಿ ಸಹಿತ ಹಲವು ಸಚಿವರ ಫೋಟೊಗಳನ್ನು ಒಳಗೊಂಡ “ಪೇ ಸಿಎಂ’ ಪೋಸ್ಟರ್‌ಗಳನ್ನು ಬೆಂಗಳೂರು ನಗರ ಸಹಿತ ರಾಜ್ಯವ್ಯಾಪಿ ಪ್ರಮುಖ ಸ್ಥಳಗಳಲ್ಲಿ ಅಂಟಿಸುವ ಮೂಲಕ ಕಾಂಗ್ರೆಸ್‌ ಅಭಿಯಾನ ನಡೆಸಿತ್ತು.

ಕಲೆಕ್ಷನ್‌ ವಂಶಾವಳಿ ಪೋಸ್ಟರ್‌
ಈಗ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿರುವುದರ ನಡುವೆಯೇ ಬಿಜೆಪಿ ಎಟಿಎಂ ಸರಕಾರದ “ಕಲೆಕ್ಷನ್‌ ವಂಶಾವಳಿ’ ಎಂಬ ಪೋಸ್ಟರ್‌ ಬಿಡುಗಡೆ ಮಾಡಿದೆ. ಎಐಸಿಸಿ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್‌, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಫೋಟೋ ಹಾಕಲಾಗಿದೆ. ಇವರ ಮಧ್ಯೆ ಮೇಲ್ಭಾಗದಲ್ಲಿ ಎಐಸಿಸಿ ನಾಯಕ ರಾಹುಲ್‌ ಗಾಂಧಿ ಭಾವಚಿತ್ರವಿದೆ.

ಸಿದ್ದರಾಮಯ್ಯ ಪುತ್ರ ಯತೀಂದ್ರ, ಸಚಿವ ಬೈರತಿ ಸುರೇಶ್‌, ಸಿಎಂ ಕಾರ್ಯದರ್ಶಿ ರಾಮಯ್ಯ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಗುತ್ತಿಗೆದಾರ ಅಂಬಿಕಾಪತಿ, ಪ್ರದೀಪ್‌, ಪ್ರಮೋದ್‌, ಪ್ರಹ್ಲಾದ್‌ ಅವರನ್ನು ಕಲೆಕ್ಷನ್‌ ಏಜೆಂಟ್‌ಗಳೆಂದು ಉಲ್ಲೇಖೀಸಲಾಗಿದೆ. ಈ ಪೋಸ್ಟರನ್ನು ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಬಿಡುಗಡೆ ಮಾಡಿದರು.

ಕಲೆಕ್ಷನ್‌ಗೆ ಪೈಪೋಟಿ
ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಬ್ರ್ಯಾಂಡ್‌ ಸಿಎಂ, ಬ್ರ್ಯಾಂಡ್‌ ಡಿಸಿಎಂ ಹೇಗೆ ಮಾಡಬೇಕೆಂ ಬುದಕ್ಕೆ ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ಎಟಿಎಂ ಸರಕಾರದ ಆಡಳಿತವೇ ಉದಾಹರಣೆ. ರಾಜ್ಯದಲ್ಲಿ ಕಲೆಕ್ಷನ್‌ ಸರಕಾರವಿದೆ. ಅದನ್ನು ಸಾಮಾನ್ಯ ಜನರೂ ತಿಳಿದುಕೊಂಡಿದ್ದಾರೆ. ಅಭಿವೃದ್ಧಿ ಇಲ್ಲದೆ, ರಸ್ತೆಯ ಹೊಂಡ ಗುಂಡಿಗಳನ್ನೂ ತುಂಬಿಸಲಾಗದ ದುಃಸ್ಥಿತಿ ರಾಜ್ಯದ್ದು ಎಂದು ಟೀಕಿಸಿದರು. ಕಲೆಕ್ಷನ್‌ನ ಕೇಂದ್ರ ಬಿಂದು ದಿಲ್ಲಿಯಾಗಿದೆ. ಇದರ ಪೂರ್ಣ ಜವಾಬ್ದಾರಿ ರಾಹುಲ್‌ ಗಾಂಧಿಯದ್ದು. ಕಲೆಕ್ಷನ್‌ನಲ್ಲೂ ಸಿಎಂ, ಡಿಸಿಎಂ ಸ್ಪರ್ಧೆಗಿಳಿದಿದ್ದಾರೆ. ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಡಿಸಿಎಂಗಿಂತ ಹೆಚ್ಚು ಕಲೆಕ್ಷನ್‌ಗೆ ಇಳಿದಿದ್ದಾರೆ ಎಂದು ಡಿವಿಎಸ್‌ ಆರೋಪಿಸಿದರು.

Advertisement

ಇಲ್ಲಿ ಕಲೆಕ್ಷನ್‌ ವಂಶವೃಕ್ಷ ಅನಾವರಣ ಮಾಡಲಾ ಗಿದೆ. ರಾಷ್ಟ್ರೀಯ ಕಾಂಗ್ರೆಸ್ಸಿನ ಕಲೆಕ್ಷನ್‌ ನೇತೃತ್ವವನ್ನು ಸುರ್ಜೇವಾಲ, ವೇಣುಗೋಪಾಲ್‌ ವಹಿಸಿದ್ದಾರೆ. ಸಿದ್ದರಾಮಯ್ಯರ ಹಣ ಸಂಗ್ರಹ ಅವರ ಮಗ ಯತೀಂದ್ರ ಮತ್ತು ಸ್ವಜಾತಿಯ ಬೈರತಿ ಸುರೇಶ್‌ ಮೂಲಕ ನಡೆಯುತ್ತದೆ ಎಂದು ದೂರಿದರು.

ಐಟಿ ಇಲಾಖೆಯಿಂದ ಮಾತ್ರ ಇದರ ತನಿಖೆ ನಡೆದರೆ ಸಾಲದು. ಇದರ ಬೇರು ಆಳವಾಗಿದೆ. ಕ್ರಿಮಿನಲ್‌ ಉದ್ದೇಶ ಗೊತ್ತಾಗಬೇಕಾದರೆ ಸಿಬಿಐ ತನಿಖೆ ಅನಿವಾರ್ಯ ಎಂದು ಆಗ್ರಹಿಸಿದ ಸದಾನಂದ ಗೌಡರು, ಬಿಲ್‌ ಕೊಡದೆ ಹಾವೇರಿ ಮತ್ತಿತರ ಕಡೆ ಇಂದಿರಾ ಕ್ಯಾಂಟೀನ್‌ ಬಂದ್‌ ಆಗಿದೆ. ಹಣ ಪಾವತಿ ಇಲ್ಲ, ಕಮಿಷನ್‌ ಕೇಳುತ್ತಾರೆಂದು ಆರೋಪ ಕೇಳಿಸಿದೆ. ಕಲಾವಿದರ ಕೈಯಲ್ಲಿ ಕಮಿಷನ್‌ ಕೇಳುವು ದಕ್ಕಿಂತ ಕೆಟ್ಟ ಕೆಲಸ ಇನ್ನೇನಿದೆ ಎಂದು ಪ್ರಶ್ನಿಸಿದರು.

ಇದು ಟ್ರೇಲರ್‌ ಅಷ್ಟೇ…
ರಾಜ್ಯದ ಎಲ್ಲ ಕಡೆ ಭ್ರಷ್ಟಾಚಾರ ಪರಿಚಯಿಸುವ ಪೋಸ್ಟರ್‌ ಅಂಟಿಸುವ ಕಾರ್ಯ ನಡೆಯಲಿದೆ. ಇದು ಸಿನೆಮಾ ಪ್ರಾರಂಭದ ಟ್ರೇಲರ್‌ ಅಷ್ಟೇ ಎಂದು ಮಾಜಿ ಸಿಎಂ ಸದಾನಂದ ಗೌಡರು ತಿಳಿಸಿದರು. ಐಟಿ ದಾಳಿ ಬಳಿಕ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಬೆಂಗಳೂರಿಗೆ ಓಡಿ ಬರುವ ದಯನೀಯ ಪರಿಸ್ಥಿತಿ ಯಾಕೆ ಬಂತು ಎಂದೂ ಅವರು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next