ಪಾಟ್ನಾ: ಬಿಜೆಪಿ ಮುಕ್ತ ಭಾರತ ನಿರ್ಮಿಸುವ ಉದ್ದೇಶದಿಂದ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಪಾಟ್ನಾದಲ್ಲಿ ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ ನಡೆಯಿತು.
“ಬಿಜೆಪಿ ಓಡಿಸಿ, ದೇಶ ಉಳಿಸಿ’ ಎಂಬ ಘೋಷಣೆಯಡಿ ನಡೆದ ರ್ಯಾಲಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಲಾಲು ಯಾದವ್ ವಾಗ್ಧಾಳಿ ನಡೆಸಿದರು. “ಜನ ನೀಡಿರುವ ತೀರ್ಪನ್ನೇ ಕದ್ದಿರುವ ಹಾಗೂ ಪ್ರವಾಹದಲ್ಲಿ ನೂರಾರು ನಾಗರಿಕರ ಸಾವಿಗೆ ಕಾರಣರಾಗಿರುವ ನಿತೀಶ್ ಕುಮಾರ್‌ಗೆ ಇನ್ನು ನೆಮ್ಮದಿಯಿಂದ ನಿದ್ರಿಸಲಾಗದು. ಅವರಿಗೆ ಜನರ ಮುಂದೆ ಹೋಗುವ ಧೈರ್ಯವಿಲ್ಲ’ ಎನ್ನುವ ಮೂಲಕ ನಿತೀಶ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಇನ್ನು ಕೇಂದ್ರ ಸರ್ಕಾರವನ್ನು ಟೀಕಿಸಿದ ಲಾಲು, “ದೇಶವು ಅತ್ಯಂತ ಅಪಾಯದ ಸ್ಥಿತಿಗೆ ತಲುಪಿದೆ. ಇಲ್ಲಿ ಸಂವಿಧಾನವನ್ನು ಪಾಲಿಸುವ ಬದಲು, ಇಬ್ಬರೇ ಇಬ್ಬರು ವ್ಯಕ್ತಿಯ ಆದೇಶಗಳನ್ನು ಪಾಲಿಸಲಾಗುತ್ತಿದೆ. ಆ ವ್ಯಕ್ತಿಗಳು ಪ್ರತಿಪಕ್ಷಗಳನ್ನು ದೇಶದಿಂದಲೇ ನಿರ್ಮೂಲನೆ ಮಾಡುವಂಥ ಬೆದರಿಕೆಗಳನ್ನು ಹಾಕುತ್ತಿದ್ದಾರೆ’ ಎಂದರು. ಇದೇ ವೇಳೆ, ನಿತೀಶ್ ಅವರು ಬಿಜೆಪಿ ಜತೆ ಕೈಜೋಡಿಸುವ ಮೂಲಕ ತಮ್ಮನ್ನು ವಂಚಿಸಿದರು ಎಂದು ಆರೋಪಿಸಿದ ಲಾಲು, ತನಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದರೂ, ಜೆಡಿಯು ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಪ್ರಚಾರ ನಡೆಸಿದ್ದೆ ಎಂಬುದನ್ನು ಸ್ಮರಿಸಿದರು.
ರ್ಯಾಲಿಯಲ್ಲಿ ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಹಾಗೂ ಅಲಿ ಅನ್ವರ್, ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಎಸ್ಪಿ ನಾಯಕ ಅಖೀಲೇಶ್ ಯಾದವ್, ಸಿಪಿಐ ನಾಯಕರಾದ ಸುಧಾಕರ್ ರೆಡ್ಡಿ ಹಾಗೂ ಡಿ. ರಾಜಾ ಮತ್ತಿತರರು ಭಾಗವಹಿಸಿದ್ದರು.
ಶರದ್ ವಜಾ?:
ರ್ಯಾಲಿಯಲ್ಲಿ ಪಾಲ್ಗೊಂಡರೆ ಪಕ್ಷವನ್ನು ತ್ಯಜಿಸಿದಂತೆ ಎಂದು ಜೆಡಿಯು ಎಚ್ಚರಿಸಿದ್ದರೂ ಶರದ್ ಅವರು ರ್ಯಾಲಿಯ ವೇದಿಕೆಯಲ್ಲೇ ಆಸೀನರಾಗಿ, ಲಾಲು ಅವರನ್ನು ಆಲಿಂಗಿಸಿಕೊಂಡಿದ್ದೂ ಕಂಡುಬಂತು. ಹೀಗಾಗಿ, ಶರದ್ ಯಾದವ್ ವಿರುದ್ಧ ಪಕ್ಷವು ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಅಧಿಕವಾಗಿದೆ.