ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪಕ್ಷದ ಕೇಂದ್ರ ಚುನಾವಣಾ ಸಮಿತಿಯೊಂದಿಗೆ ಚರ್ಚೆ ನಡೆಸಲಿದ್ದು, ಮಂಗಳವಾರ ಸಂಜೆ ಹೊತ್ತಿಗೆ ರಾಜ್ಯದ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆ ಇದೆ.
ರಾಜ್ಯದ ಐದಾರು ಹಾಲಿ ಬಿಜೆಪಿ ಸಂಸದರ ಬಗ್ಗೆ ಅಪಸ್ವರ, ಅಸಮಾಧಾನ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿಯೇತರ ಸಂಸದರಿರುವ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಮಾತ್ರವಲ್ಲದೆ, ಹಾಲಿ ಸಂಸದರು ಕೂಡ ಟಿಕೆಟ್ ನಿರೀಕ್ಷೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆಯತ್ತ ಚಿತ್ತ ನೆಟ್ಟಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳನ್ನು ಭಾನುವಾರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗಿತ್ತು. ಐದಾರು ಹಾಲಿ ಸಂಸದರ ಬಗ್ಗೆ ಸಭೆಯಲ್ಲಿ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಆ ಐದಾರು ಕ್ಷೇತ್ರಗಳಲ್ಲಿನ ಪಕ್ಷದ ಸ್ಥಿತಿಗತಿ, ಧನಾತ್ಮಕ- ಋಣಾತ್ಮಕ ಅಂಶಗಳ ಬಗ್ಗೆಯೂ ವರದಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜತೆಗೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪ್ರತಿನಿಧಿಸುವ ಉತ್ತರ ಕನ್ನಡ ಕ್ಷೇತ್ರ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಬಧಂಪಟ್ಟಂತೆ ಸಂಭಾವ್ಯ ಒಂದೆರಡು ಆಕಾಂಕ್ಷಿಗಳ ಹೆಸರನ್ನು ಶಿಫಾರಸು ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪಕ್ಷದ ಕೇಂದ್ರ ಚುನಾವಣಾ ಸಮಿತಿಯೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿತ್ತು. ಆದರೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಕಾಲಿಕ ನಿಧನದಿಂದಾಗಿ ಸೋಮವಾರ ನಿಗದಿಯಾಗಿದ್ದ ಸಭೆಗಳೆಲ್ಲಾ ಮಂಗಳವಾರಕ್ಕೆ ಮುಂದೂಡಿಕೆಯಾಗಿತ್ತು.
ಹಾಗಾಗಿ ಭಾನುವಾರ ರಾತ್ರಿಯೇ ದೆಹಲಿ ತಲುಪಿದ್ದ ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ಸೋಮವಾರ ದೆಹಲಿಯಲ್ಲೇ ವಾಸ್ತವ್ಯ ಮುಂದುವರಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಸಾಧ್ಯತೆ ಇದೆ. ಮಂಗಳವಾರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡರೆ ಸಂಜೆ ಇಲ್ಲವೇ ರಾತ್ರಿ ಹೊತ್ತಿಗೆ ಹೆಸರು ಘೋಷಣೆಯಾಗಲಿ ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.
ಮಂಡ್ಯ, ತುಮಕೂರು ಸೇರಿದಂತೆ ಆಯ್ದ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಏಕಕಾಲಕ್ಕೆ ಅಂತಿಮಗೊಳಿಸಿ ಪ್ರಕಟಿಸುವ ನಿರೀಕ್ಷೆ ಇದೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದ್ದರೂ ಮುಖಂಡರು, ಕಾರ್ಯಕರ್ತರು ಸಂಘಟನೆ ಹಾಗೂ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಮಂಡ್ಯ ಕ್ಷೇತ್ರ ಕುತೂಹಲ
ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸೋಮವಾರ ಅಧಿಕೃತವಾಗಿ ಪ್ರಕಟಿಸಿರುವುದರಿಂದ ಬಿಜೆಪಿ ಯಾವ ನಿಲುವು ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ.
ಪಕ್ಷದ ಬೆಂಬಲಿಗರು, ಕಾರ್ಯಕರ್ತರಿಗೆ ನಿರಾಸೆಯಾಗದಂತೆ ಪಕ್ಷದಿಂದ ಅಧಿಕೃತ ಅಭ್ಯರ್ಥಿಯನ್ನು ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ. ಆದರೆ ಸುಮಲತಾ ಅವರು ಬೆಂಬಲ ನೀಡುವಂತೆ ಕೋರಿರುವ ಮನವಿಯನ್ನೂ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಸದ್ಯ ಒಬ್ಬ ಅಭ್ಯರ್ಥಿಯನ್ನು ಘೋಷಿಸಿ ಬದಲಾದ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಸ್ಪರ್ಧೆ ಮುಂದುವರಿಸಬೇಕೆ ಅಥವಾ ನಾಮಪತ್ರ ಹಿಂಬಪಡೆದು ಸುಮಲತಾ ಅವರನ್ನು ಬೆಂಬಲಿಸಬೇಕೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಅಂತಿಮವಾಗಿ ವರಿಷ್ಠರ ಸೂಚನೆಯಂತೆ ಮುಂದುವರಿಯಲಾಗುವುದು ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.