Advertisement

BJP; ರಾಜ್ಯದಲ್ಲಿಂದು ಅಮಿತ್‌ ಶೋ: ಚನ್ನಪಟ್ಟಣದಿಂದಲೇ ಮೊದಲ ರೋಡ್‌ ಶೋ

12:18 AM Apr 02, 2024 | Team Udayavani |

ಬೆಂಗಳೂರು: ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣದಲ್ಲಿ ತಮ್ಮ ಮೊದಲ ರೋಡ್‌ ಶೋ ನಡೆಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ಸಹೋದರರಿಗೆ ಸಂದೇಶ ರವಾನಿಸಲು ಮುಂದಾಗಿದ್ದಾರೆ.

Advertisement

ಸೋಮವಾರ ರಾತ್ರಿ 11 ಗಂಟೆಗೆ ಬಂದಿಳಿದ ಅಮಿತ್‌ ಶಾ ಅವರು ತಾಜ್‌ ವೆಸ್ಟ್‌ಎಂಡ್‌ ಹೊಟೇಲ್‌ ನಲ್ಲಿ ವಾಸ್ತವ್ಯ ಹೂಡಿದರು. ಪಕ್ಷದ ಪ್ರಮುಖ ನಾಯಕರು ಅವರನ್ನು ಬರಮಾಡಿಕೊಂಡರು.

ಮಂಗಳವಾರ ಬೆಳಗ್ಗೆ ಶಾ ಅವರು ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಉಪಾಹಾರ ಸೇವನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ತಲುಪುವಲ್ಲಿ ಯಾವುದೇ ಲೋಪ ಆಗಬಾರದು, ಹೊಂದಾಣಿಕೆಗೆ ಧಕ್ಕೆ ಆಗಬಾರದು ಎಂಬುದನ್ನು ಕುಮಾರಸ್ವಾಮಿ ಮನವರಿಕೆ ಮಾಡಿಕೊಡಲಿದ್ದಾರೆ. ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆ ಕೂಡ ನಡೆಯಲಿದ್ದು, ಮಿತ್ರಪಕ್ಷಗಳ ನಡೆ ಹೇಗಿರಬೇಕೆಂಬ ಬಗ್ಗೆ ಅಮಿತ್‌ ಶಾ ಕೂಡ ಮಾರ್ಗದರ್ಶನ ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಅರಮನೆ ಮೈದಾನದಲ್ಲಿ ಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಯಲಿದ್ದು, ಸುಮಾರು ಒಂದೂವರೆ ತಾಸು ನಡೆಯಲಿರುವ ಸಭೆಯಲ್ಲಿ ಈ ಭಾಗದ 5 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣ ಜವಾಬ್ದಾರಿ ಹೊಂದಿರುವ 5 ಸಾವಿರ ಕಾರ್ಯಕರ್ತರ ಜತೆಗೆ ನೇರ ಮಾತುಕತೆ ನಡೆಸಲಿದ್ದಾರೆ.

ಅಮಿತ್‌ ಶಾ ಕಾರ್ಯಕ್ರಮ
ಮಧ್ಯಾಹ್ನ 12ಕ್ಕೆ ಬೆಂಗಳೂರಿನಲ್ಲಿ ಶಕ್ತಿ ಕೇಂದ್ರ ಪ್ರಮುಖರ ಸಭೆ, 6 ಜಿಲ್ಲೆಗಳ ಕೋರ್‌ ಕಮಿಟಿ ಸಭೆ
ಎಚ್‌ಎಎಲ್‌ನಿಂದ ಹೊರಟು ಚನ್ನ ಪಟ್ಟಣದ ಶೆಟ್ಟಿಹಳ್ಳಿ ಹೆಲಿಪ್ಯಾಡ್‌ಗೆ ಸಂಜೆ 4.50ರಿಂದ 5.50ರ ವರೆಗೆ ಚಿಕ್ಕಮಾಲೂರಿನಿಂದ ಡಿ.ಟಿ. ರಾಮು ವೃತ್ತದವರೆಗೆ ರೋಡ್‌ಶೋ ಪಕ್ಷದ ಬೆಂ. ಗ್ರಾಮಾಂತರ ಅಭ್ಯರ್ಥಿ ಡಾ| ಸಿ.ಎನ್‌. ಮಂಜು ನಾಥ್‌ ಪರ ಮತಯಾಚನೆ ಸಂಜೆ 6.30ಕ್ಕೆ ಬೆಂಗಳೂರಿನಿಂದ ಹೊಸದಿಲ್ಲಿಯತ್ತ ಪಯಣ

Advertisement

ಬಿಕ್ಕಟ್ಟು ಬಗೆಹರಿಸಲು ಮುಂದಾದ ಶಾ
ಪ್ರಸ್ತುತ ಬಿಜೆಪಿಯಲ್ಲಿ ತಲೆನೋವಾಗಿರುವ ಚಿಕ್ಕಬಳ್ಳಾಪುರ, ತುಮ ಕೂರು, ದಾವಣಗೆರೆ, ಚಿತ್ರದುರ್ಗ, ಬೀದರ್‌, ಬೆಳಗಾವಿ ಜಿಲ್ಲೆಗಳಲ್ಲಿ ಅಸಮಾಧಾನಿತ ರನ್ನು ಸಮಾಧಾನಪಡಿಸುವ ಕಾರ್ಯವನ್ನು ರಾಜ್ಯ ಬಿಜೆಪಿ ನಾಯಕರು ಮಾಡುತ್ತಲೇ ಇದ್ದರೂ ಅಲ್ಲಲ್ಲಿ ಭಿನ್ನಮತದ ಹೊಗೆ ಕಾಣಿಸಿಕೊಳ್ಳುತ್ತಲೇ ಇದೆ. ಇದನ್ನು ಶಾಂತಗೊಳಿಸಲು ಖುದ್ದು ಅಮಿತ್‌ ಶಾ ಅವರೇ ಈ ಆರು ಜಿಲ್ಲೆಗಳ ಕೋರ್‌ ಕಮಿಟಿ ಸಭೆ ಕರೆದಿದ್ದು, ಚುನಾವಣ ಸಿದ್ಧತೆಗೆ ಸೂಚನೆ, ಮಾರ್ಗದರ್ಶನ ನೀಡಲಿದ್ದಾರೆ. ಮಧ್ಯಾಹ್ನದ ಭೋಜನದ ಅನಂತರ 2.20ರಿಂದ 3.50ರ ವರೆಗೆ ಇದಕ್ಕಾಗಿ ಸಮಯವನ್ನು ಮೀಸಲಿಟ್ಟಿದ್ದಾರೆ.

ಈಶ್ವರಪ್ಪ ಮನವೊಲಿಕೆ ಕೈಬಿಟ್ಟ ವರಿಷ್ಠರು?
ಚಿತ್ರದುರ್ಗದಲ್ಲಿ ಅಸಮಾಧಾನಗೊಂಡಿದ್ದ ಶಾಸಕ ಚಂದ್ರಪ್ಪ ಅವರನ್ನು ಈಗಾಗಲೇ ಯಡಿಯೂರಪ್ಪ ಕರೆಯಿಸಿಕೊಂಡು ಸಮಾಧಾನಪಡಿಸಿದ್ದಾರೆ. ಶಿವಮೊಗ್ಗದಲ್ಲೂ ಬಿಕ್ಕಟ್ಟಿದೆ. ಆದರೆ 6 ಜಿಲ್ಲೆಗಳ ಕೋರ್‌ ಕಮಿಟಿ ಸಭೆ ಕರೆದಿರುವ ಶಾ ಅವರು ಶಿವಮೊಗ್ಗ ಜಿಲ್ಲೆಯ ಕೋರ್‌ ಕಮಿಟಿ ಸಭೆ ಕರೆದಿಲ್ಲ. ಈ ಮೂಲಕ ಕೆ.ಎಸ್‌. ಈಶ್ವರಪ್ಪ ಅವರ ಮನವೊಲಿಕೆ ಪ್ರಯತ್ನ ಕೈಬಿಟ್ಟಿರುವ ಸಂದೇಶವನ್ನೂ ರವಾನಿಸಿದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next