ಬಾಗಲಕೋಟೆ: ಬಿಜೆಪಿಯ ವಿಪಕ್ಷ ನಾಯಕನ ಸ್ಥಾನ ಆರ್.ಅಶೋಕ್ ಅವರಿಗೆ ಟೆಂಡರ್ ನಲ್ಲಿ ದೊರಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಲೇವಡಿ ಮಾಡಿದ್ದಾರೆ.
ಗುರುವಾರ ನವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಹಿಂದೆ ಅವರದ್ದೆ, ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಕ್ಕೆ ಹಣ ನಿಗದಿಯಾಗಿತ್ತು ಎಂದು ಹೇಳಿದ್ದರು. ಅದರಂತೆ ಇದೀಗ ವಿಪಕ್ಷ ನಾಯಕನ ಹುದ್ದೆಗೂ ಕೂಡ ಟೆಂಡರ್ ನಡೆದಿರಬಹುದು. ಟೆಂಡರ್ ಮೊತ್ತದ ಬಗ್ಗೆ ಅಶೋಕ್ ಅವರು ಹೇಳಬೇಕು ಎಂದರು.
ಮುಳುಗುವ ಹಡಗು ಅಲ್ಲ, ಮುಳುಗಿದ ಹಡಗು
ರಾಜ್ಯದಲ್ಲಿ ಬಿಜೆಪಿ ಮುಳುಗುವ ಹಡಗು ಅಲ್ಲ, ಈಗಾಗಲೇ ಮುಳುಗಿದ ಹಡಗು. ಜೋಡೆತ್ತು ಎನಿಸಿಕೊಳ್ಳುತ್ತಿರುವ ವಿಜಯೇಂದ್ರ ಹಾಗೂ ಆರ್. ಅಶೋಕ್ ಅವರಲ್ಲ, ಇನ್ನೂ ಎರಡೆತ್ತು ಬಂದರೂ ಮುಳುಗಿದ ಹಡಗನ್ನು ಮೇಲೆ ಎತ್ತಲು ಸಾಧ್ಯವಿಲ್ಲ. ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರ ನೇಮಕದ ಬಗ್ಗೆ ಅವರ ಪಕ್ಷದಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷದವರು ಯಾರೂ ಮಾತನಾಡಿಲ್ಲ ಎಂದು ಮಾರ್ಮಿಕವಾಗಿ ತಿಳಿಸಿದರು.
ಮುಖ್ಯಮಂತ್ರಿಗೆ ಎಷ್ಟು ಸಾವಿರ ಕೋಟಿ, ಸಚಿವ ಸ್ಥಾನಕ್ಕೆ ಎಷ್ಟು ಕೋಟಿ ಎಂದು ಅವರೇ ಹೇಳಿದ್ದು. ಈಗ ಬಿಜೆಪಿಯವರು ವಿಪಕ್ಷ ನಾಯಕನ ಹುದ್ದೆ ಕೋಟಿಗೆ ಬಿಕರಿಯಾಗಿದೆ ಎಂದು ಹೇಳಬೇಕು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸೋಮಣ್ಣ ಮಾತ್ರವಲ್ಲ. ಬಿಜೆಪಿ ಹಾಗೂ ಜೆಡಿಎಸ್ ನ ಹಲವು ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದು, ಕಾದು ನೋಡಿ ಎಂದು ಹೇಳಿದರು.