Advertisement

ಕೈ ಶಾಸಕರಿಂದ ಆಮಿಷ: ದೂರು ಎಚ್ಚರಿಕೆ

02:55 PM Mar 02, 2023 | Team Udayavani |

ಬಂಗಾರಪೇಟೆ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ ಶಾಸಕ ಎಸ್‌. ಎನ್‌.ನಾರಾಯಣ ಸ್ವಾಮಿರಿಗೆ ತಾಲೂಕು ಮಟ್ಟದ ಕೆಲವು ಇಲಾಖೆಗಳ ಅಧಿಕಾರಿಗಳು ಕಾಂಗ್ರೆಸ್‌ ಏಜೆಂಟ್‌ರಂತೆ ಬಳಸಿಕೊಳ್ಳುತ್ತಿದ್ದು, ಕೆಲವು ಇಲಖೆಗಳ ಸಿಬ್ಬಂದಿ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್‌ ಆರೋಪಿಸಿದರು.

Advertisement

ತಾಲೂಕಿನ ಕೆಸರನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆಗಳನ್ನು ಗ್ರಾಮಸ್ಥರಿಗೆ ಅರಿವು ಮೂಡಿಸಿ ಮಾತನಾಡಿ, ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕ್ಷೇತ್ರ ಶಿಕ್ಷಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್‌ ಏಜೆಂಟ್‌ರಂತೆ ಮತ ಹಾಕುವ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಸೋಲಿನ ಭೀತಿಯಿಂದ ಹಾಲಿ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಅಧಿಕಾರ ದರ್ಪ ದಿಂದ ಕೆಲವು ಇಲಾಖೆಗಳ ಅಧಿಕಾರಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದೆ ಶಾಸಕರು ಅಂಗನವಾಡಿ ಕಾರ್ಯಕರ್ತೆಯರನ್ನು, ಆಶಾ ಕಾರ್ಯಕರ್ತೆಯರನ್ನು ಹಾಗೂ ಬಿಸಿಯೂಟ ತಯಾರಕರನ್ನು ತಮ್ಮ ರೆಸಾರ್ಟ್‌ಗೆ ಕರೆಸಿಕೊಂಡು ಗುಪ್ತವಾಗಿ ಸಭೆ ನಡೆಸಿ ಅವರಿಗೆಲ್ಲಾ ಉಡುಗೊರೆಗಳನ್ನು ನೀಡಿ ಕಾಂಗ್ರೆಸ್‌ ಬೆಂಬಲಿಸುವಂತೆ ತಿಳಿಸಿದ್ದಾರೆ.

ಇದಕ್ಕೆ ಬಿಇಒ, ಸಿಡಿಪಿಒ ಹಾಗೂ ಟಿಎಚ್‌ಒ ಸಹಕಾರ ನೀಡಿದ್ದಾರೆ ಇಂತಹ ಪಕ್ಷಪಾತ ಅಧಿಕಾರಿಗಳಿದ್ದರೆ ಮುಕ್ತವಾಗಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಹಾಗೂ ಚುನಾವಣೆ ಆಯೋಗಕ್ಕೆ ಇವರ ವಿರುದ್ದ ದೂರು ಕೊಡಲಾಗುವುದು ಎಂದು ಎಚ್ಚರಿಸಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌ .ನಾರಾಯಣಸ್ವಾಮಿ ದೌರ್ಜನ್ಯ ದಬ್ಟಾಳಿಕೆಯಿಂದ ಬೇಸತ್ತಿರುವ ಜನರು ಬದಲಾವಣೆ ಬಯಸಿದ್ದು ಅದರಂತೆ ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

10 ವರ್ಷಗಳಿಂದ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌ .ನಾರಾಯಣಸ್ವಾಮಿ ರೌಡಿಸಂ ಮಾಡಿಕೊಂಡು ತಮ್ಮ ವಿರುದ್ಧ ಧ್ವನಿ ಎತ್ತುವವರನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರನ್ನು ದಮನ ಮಾಡುವ ಕಾಯಕದಲ್ಲಿ ತೊಡಗಿರುವುದರಿಂದ ವಿರೋಧಿ ಅಲೆ ವ್ಯಾಪಕವಾಗಿದೆ. ಹತ್ತು ವರ್ಷಗಳಿಂದ ಅಭಿವೃದ್ಧಿಗಿಂತ ಭ್ರಷ್ಟಾಚಾರ ಹೆಚ್ಚಾಗಿದೆ. ಮತದಾರರು ಈ ಬಾರಿ ಶಾಸಕರನ್ನು ಬದಲಾವಣೆತರಲು ಮುಂದಾಗಿದ್ದಾರೆಂದರು.

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ ಕಾಂಗ್ರೆಸ್‌ ಶಾಸಕರ ಹಿಟ್ಲರ್‌ ಆಡಳಿತಕ್ಕೆ ಕೊನೆಗಾಣಿಸುವ ಸಮಯ ಬಂದಿದೆ. ಮತದಾರರು ಕಾಂಗ್ರೆಸ್‌ ಅವರು ನೀಡುವ ಹಣದ ಆಸೆಗೆ ಮತವನ್ನು ಮಾರಾಟ ಮಾಡಿ ಕೊಳ್ಳದೆ ನಿಮ್ಮ ಸೇವೆ ಮಾಡುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಮತ್ತಷ್ಟು ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಬೂತ್‌ ಅಭಿಯಾನ ಸಂಚಾಲಕ ಕೆ.ಚಂದ್ರಾರೆಡ್ಡಿ, ಪಕ್ಷದ ತಾಲೂಕು ಅಧ್ಯಕ್ಷ ನಾಗೇಶ್‌, ಮುಖಂಡ ವಿ.ಶೇಷು, ಪುರಸಭೆ ಸದಸ್ಯ ಕಪಾಲಿ ಶಂಕರ್‌, ಗೋವಿಂದರಾಜು, ಮಾಜಿ ತಾಪಂ ಸದಸ್ಯ ಶಿವಣ್ಣ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next