Advertisement

ಕಾರ್ಯಕರ್ತರೇ ಬಿಜೆಪಿಯ ಮಾಲೀಕರು: ಸಿ.ಟಿ ರವಿ

09:59 PM Sep 10, 2019 | Team Udayavani |

ಮೈಸೂರು: ಕಾರ್ಯಕರ್ತರೇ ಬಿಜೆಪಿಯ ಮಾಲೀಕರು, ಇಲ್ಲಿ ಯಾರೂ ಶಾಶ್ವತ ನಾಯಕರೂ ಇಲ್ಲ, ಸದಸ್ಯರೂ ಇಲ್ಲ. ಸಾಯುವವರೆಗೆ ಅಧ್ಯಕ್ಷರಾಗಿರಲೂ ಸಾಧ್ಯವಿಲ್ಲ. ಆರು ವರ್ಷಕ್ಕೊಮ್ಮೆ ಸದಸ್ಯತ್ವ ನವೀಕರಿಸಲೇಬೇಕು ಎಂದು ಬಿಜೆಪಿ ರಾಜ್ಯ ಚುನಾವಣಾಧಿಕಾರಿಗಳಾದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಮೈಸೂರು ನಗರ ಬಿಜೆಪಿ ಸಾಂಸ್ಥಿಕ ಚುನಾವಣೆಯ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಸೇರಿದಂತೆ ಇತರೆಲ್ಲಾ ಪಕ್ಷಗಳು ಪ್ರಜಾಪ್ರಭುತ್ವದ ಹೆಸರಲ್ಲಿ ಕೌಟುಂಬಿಕ ರಾಜಕಾರಣ ಮಾಡುತ್ತಿವೆ. ಬಿಜೆಪಿಯೊಂದೇ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಕಾಲಕಾಲಕ್ಕೆ ಚುನಾವಣೆ ನಡೆಸುತ್ತಾ ಬಂದಿದೆ ಎಂದರು.

ಜಾತಿ ರಾಜಕಾರಣ: ಸಮಾಜವಾದಿ ಪಕ್ಷ, ಆರ್‌ಜೆಡಿ, ಬಿಜೆಡಿ, ಎನ್‌ಸಿಪಿ, ಜಾತ್ಯತೀತತೆ ಹೆಸರಲ್ಲಿ ಜಾತಿ ರಾಜಕಾರಣ ಮಾಡುವ ದೊಡ್ಡ ಗೌಡರು ಪಕ್ಷದ ಕಾರ್ಯಕರ್ತರುಗಳಿಗೆ ಅವಕಾಶವನ್ನೇ ಕೊಡದೆ ಯುವ ರಾಜರ ಪಟ್ಟಾಭಿಷೇಕ ಯಾರಿಗೆ ಮಾಡಬೇಕು ಎಂಬ ಪೈಪೋಟಿ ನಡೆಸುತ್ತಾರೆ. ಆದರೂ ನಮ್ಮದು ಕುಟುಂಬ ರಾಜಕಾರಣವಲ್ಲ, ಎಂದು ಪ್ರಜಾಪ್ರಭುತ್ವದ ಪಾಠ ಹೇಳುತ್ತಾರೆ ಎಂದು ಟೀಕಿಸಿದರು.

ವಾರಸುದಾರರಲ್ಲ: ಜನಸಂಘವನ್ನು ಸ್ಥಾಪಿಸಿದ ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯರಿಂದ ಹಿಡಿದು ಅಟಲ್‌ಜೀ, ಆಡ್ವಾಣಿ, ನರೇಂದ್ರ ಮೋದಿ, ಅಮಿತ್‌ ಶಾ ಅವರ ಕುಟುಂಬದವರ್ಯಾರು ಬಿಜೆಪಿಯಲ್ಲಿ ಅವರ ವಾರಸುದಾರರಾಗಲ್ಲ. ಬೂತ್‌ ಸಮಿತಿ ಅಧ್ಯಕ್ಷರಾಗಿದ್ದ ಅಮಿತ್‌ ಶಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ. 1988ರಲ್ಲಿ ಬೂತ್‌ ಸಮಿತಿ ಅಧ್ಯಕ್ಷನಾಗಿದ್ದ ನನ್ನನ್ನೂ ಪಕ್ಷ ಈ ಮಟ್ಟಕ್ಕೆ ಬೆಳೆ‌ಸಿದೆ. ಕಾರ್ಯಕರ್ತರೇ ಬಿಜೆಪಿಯ ಮಾಲೀಕರು ಎಂದು ತಿಳಿಸಿದರು.

ವಂಶಪಾರಂಪರ್ಯವಾಗಿ ಪಕ್ಷದ ಜವಾಬ್ದಾರಿಯನ್ನು ಅಪ್ಪನ ಆಸ್ತಿಯಂತೆ ಮಕ್ಕಳಿಗೆ ವರ್ಗಾವಣೆ ಮಾಡಲು ಬರಲ್ಲ. ಆದರೆ, ಕೆಲವು ಪಕ್ಷಗಳವರು ಅಪ್ಪನ ಆಸ್ತಿಯಂತೆ ಪಕ್ಷದ ಜವಾಬ್ದಾರಿಯನ್ನು ವರ್ಗಾವಣೆ ಮಾಡುತ್ತಾ, ಅಂಬೇಡ್ಕರ್‌ ಆಶಯಗಳನ್ನೇ ಗಾಳಿಗೆ ತೂರಿದವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನೀತಿ, ಸಿದ್ಧಾಂತ: ಜಾತಿಯನ್ನು ಕಡೆಗಣಿಸಿ ರಾಜಕಾರಣ ಮಾಡಲಾಗಲ್ಲ. ಆದರೆ, ಜಾತಿಯೇ ರಾಜಕಾರಣವಲ್ಲ. ಬಿಜೆಪಿಗೆ ಜಾತಿ ಇಲ್ಲ. ನೀತಿ ಮತ್ತು ಸಿದ್ಧಾಂತದ ಮೇಲೆ ಪಕ್ಷ ಬೆಳೆದಿದೆ. ಪಕ್ಷದಲ್ಲಿ ಬೆಳೆದು ನಾಯಕರಾದವರನ್ನು ಅವರ ಜಾತಿಯ ಮೂಲಕ ಗುರುತಿಸಬಹುದೇ ವಿನಾ ಪಕ್ಷವನ್ನು ಜಾತಿಯ ಮೂಲಕ ಗುರುತಿಸಲಾಗಲ್ಲ ಎಂದರು.

ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ವಿಧಾನಪರಿಷತ್‌ ಮಾಜಿ ಸದಸ್ಯ ಅಶ್ವತ್ಥ ನಾರಾಯಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ವಿಭಾಗೀಯ ಪ್ರಭಾರಿ ಎನ್‌.ವಿ.ಫ‌ಣೀಶ್‌, ರಾಷ್ಟ್ರೀಯ ಪರಿಷತ್‌ ಸದಸ್ಯ ಬಿ.ಪಿ.ಮಂಜುನಾಥ್‌, ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ನಗರಪಾಲಿಕೆ ಸದಸ್ಯ ಸಂದೇಶ್‌ ಸ್ವಾಮಿ, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ನಗರ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ರಾಜೀವ್‌, ಮೈ.ಪು.ರಾಜೇಶ್‌, ಎಚ್‌.ವಿ.ಗಿರಿಧರ್‌ ಮೊದಲಾದವರು ಉಪಸ್ಥಿತರಿದ್ದರು.

ಡಿಎನ್‌ಎ ಆಧಾರದ ಮೇಲೆ ಕಾಂಗ್ರೆಸ್‌ ನಾಯಕನ ಆಯ್ಕೆ: ಕಾಂಗ್ರೆಸ್‌ ಪ್ರಜಾಪ್ರಭುತ್ವದ ಹೆಸರಲ್ಲಿ ಕೌಟುಂಬಿಕ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ ನಾಯಕನ ಆಯ್ಕೆ ಯಾಗುವುದು ಪಕ್ಷ ಕಟ್ಟುವ ಯೋಗ್ಯತೆ ಮೇಲಲ್ಲ, ಡಿಎನ್‌ಎ ಆಧಾರದ ಮೇಲೆ ಎಂದು ಸಿ.ಟಿ.ರವಿ ಟೀಕಿಸಿದರು. ರಕ್ತದ ಗುಂಪಿನ ಮೇಲೆ ಯೋಗ್ಯತೆ ಬರುವುದಿಲ್ಲ. ಆ ರೀತಿ ಪಕ್ಷದ ನಾಯಕತ್ವ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ. ವಂಶಪಾರಂಪರ್ಯವಾಗಿ ಅಧಿಕಾರ ಹಸ್ತಾಂತರ ಮಾಡಲು ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದಂತೆ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.

ರಾಜಪ್ರಭುತ್ವದಲ್ಲಾದರೂ ಜನರ ಕಷ್ಟ ಸುಖಗಳಿಗೆ ಸ್ಪಂದಿಸಲು ಮಹಾರಾಜರುಗಳು ಮಾರುವೇಷದಲ್ಲಿ ಸಂಚರಿಸುತಿದ್ದರು. ಸಿದ್ದರಾಮಯ್ಯ ಇರುವ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಆದರೆ, ತಮ್ಮನ್ನು ತಾವು ಸಮಾಜವಾದಿ ಎಂದು ಕರೆದುಕೊಳ್ಳುವವರು, ಪ್ರಗತಿಪರರು ಎಂದು ಹೇಳಿಕೊಳ್ಳುವವರು ಒಂದು ಕುಟುಂಬದ ಹಿಡಿತದ ಪಕ್ಷದಲ್ಲಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next