ಬೆಂಗಳೂರು: ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸಿದ ಬಸವರಾಜ್ ಬೊಮ್ಮಾಯಿ ಅವರಿಗೆ ಈಗ ಪಕ್ಷದ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲು ಬಿಜೆಪಿ ನಿರ್ಧರಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಅದ ಶ್ರೀ ನಳಿನ್‍ಕುಮಾರ್ ಕಟೀಲ್ ಶುಕ್ರವಾರ ಸಂಜೆ 5 ಗಂಟೆಗೆ ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬೊಮ್ಮಾಯಿ ಅವರಿಗೆ ಅಭಿನಂದಿಸುವರು. ರಾಜ್ಯದ ಸಚಿವರು, ಪಕ್ಷದ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪಕ್ಷ ಹಾಗೂ ಸರಕಾರದ ನಡುವಿನ ಅಂತರ ತಗ್ಗಿಸುವಲ್ಲಿ ಈ ಕಾರ್ಯ ಕ್ರಮ ಮಹತ್ವದ್ದಾಗಲಿದೆ.
ಬೊಮ್ಮಾಯಿ ಅವರಿಗೆ ಪಕ್ಷದ ವತಿಯಿಂದ ಇದುವರೆಗೆ ಯಾವುದೇ ಅಭಿನಂದನಾ ಕಾರ್ಯಕ್ರಮ ಇದುವರೆಗೆ ನಡೆದಿಲ್ಲ. ಗೋಹತ್ಯಾ ನಿಷೇಧ ಕಾಯಿದೆ ಜಾರಿಗೆ ತಂದಿದ್ದಕ್ಕಾಗಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಅವರನ್ನು ಅಭಿನಂದಿಸಲಾಗಿತ್ತು. ಅದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯಿಂದಲೂ ಪಕ್ಷದ ಆಂತರಿಕ ವಲಯದಲ್ಲಿ ಅವರಿಗೆ ಗೌರವ ಸಮರ್ಪಣೆ ನಡೆದಿರಲಿಲ್ಲ.
ಆದರೆ ಬದಲಾದ ಪರಿಸ್ಥಿತಿಯಲ್ಲಿ ಬೊಮ್ಮಾಯಿ ಪಕ್ಷದ ಆಂತರಿಕ ವಲಯಕ್ಕೂ ಆಪ್ತರಾಗುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ಸಂಘಪರಿವಾರದ ಮುಖಂಡರ ಜತೆಗೂ ಅವರು ಉತ್ತಮ ಸಂಬಂಧ ಕಾಯ್ದುಕೊಂಡಿದ್ದಾರೆ.
ಯಡಿಯೂರಪ್ಪ ಸಂಘ ಪರಿವಾರದ ಒಂದು ವರ್ಗದ ನಾಯಕರ ಜತೆಗೆ ಭಿನ್ನಮತ ಹೊಂದಿದ್ದರು. ಹೀಗಾಗಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪಕ್ಷ ಹಾಗೂ ಸರಕಾರದ ನಡುವಿನ ಅಂತರ ಕಡಿಮೆ ಮಾಡುವ ಪ್ರಯತ್ನಗಳು ನಡೆದಿರಲಿಲ್ಲ. ಆದರೆ ಬೊಮ್ಮಾಯಿ ಪಕ್ಷದ ಮುಖಂಡರ ಜತೆ ಸೌಹಾರ್ದ ಸಂಬಂಧವನ್ನು ಕಾಯ್ದುಕೊಳ್ಳುವುದಕ್ಕೂ ಆದ್ಯತೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.