ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ನಗರದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನನ್ನು ವಿಚಾರಣೆ ನಡೆಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್‌ನ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಯಶಸ್ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಕೆಲ ದಿನಗಳ ಹಿಂದಷ್ಟೇ ವಿಚಾರಣೆ ನಡೆಸಿದ್ದಾರೆ. ಹಗರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಯಶಸ್ ಸ್ನೇಹಿತರಾಗಿದ್ದಾರೆ. ಈ ಹಿಂದೆ ಬಿಟ್‌ಕಾಯಿನ್ ಹಾಗೂ ಮಾದಕ ವಸ್ತು ಮಾರಾಟದಲ್ಲಿ ಬಂದ ಹಣವನ್ನು ಯಶಸ್ ಖಾತೆಗೆ ವರ್ಗಾವಣೆ ಆಗಿತ್ತು ಎನ್ನಲಾಗಿದೆ.
ಅಲ್ಲದೆ, ಬಿಟ್ ಕಾಯಿನ್ ಹಗರಣದ ಸಂದರ್ಭದಲ್ಲಿ ಯಶಸ್, ಕೋರಮಂಗಲದ ಬ್ಯಾಂಕ್‌ವೊಂದಕ್ಕೆ ಶ್ರೀಕಿಯನ್ನು ಕರೆದೊಯ್ದು ಲಕ್ಷಾಂತರ ರೂ. ಅನ್ನು ಡ್ರಾ ಮಾಡಿ ನೀಡಿದ್ದ ಎಂಬುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಯಶಸ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ಆತ ಸಿಐಡಿ ಕಚೇರಿಯಲ್ಲಿರುವ ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ತನ್ನ ಹೇಳಿಕೆ ದಾಖಲಿಸಿಕೊಂಡಿದ್ದಾನೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಡ್ರಗ್ಸ್ ಕೇಸ್‌ನಲ್ಲೂ ಯಶಸ್ ವಿಚಾರಣೆ: ಒಂದೆರಡು ವರ್ಷಗಳ ಹಿಂದೆ ಮುಂಬೈ ಹಾಗೂ ಚೆನ್ನೈನಲ್ಲಿ ನಡೆದ ಮಾದಕ ವಸ್ತು ಮಾರಾಟ ಆರೋಪದಡಿಯಲ್ಲಿ ಯಶಸ್‌ನನ್ನು ಎನ್‌ಸಿಬಿ(ಮಾದಕ ವಸ್ತು ನಿಯಂತ್ರಣ ಘಟಕ) ಅಧಿಕಾರಿಗಳು ಮುಂಬೈನ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ಆಗಲೇ ಶ್ರೀಕೃಷ್ಣ ಹೆಸರು ಬೆಳಕಿಗೆ ಬಂದಿತ್ತು. ಈ ಮಧ್ಯೆ ಬೆಂಗಳೂರಿನಲ್ಲೂ ಶ್ರೀಕಿ ವಿರುದ್ಧ ಡ್ರಗ್ಸ್ ಪ್ರಕರಣ ದಾಖಲಾದಾಗಲೂ ಯಶಸ್ ಹೆಸರು ಕೇಳಿ ಬಂದಿತ್ತು.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಯಶಸ್‌ನನ್ನು 2-3 ಬಾರಿ ವಿಚಾರಣೆ ನಡೆಸಲಾಗಿದ್ದು, ಶ್ರೀಕಿ ಮತ್ತು ತನ್ನ ನಡುವಿನ ಸಂಬಂಧ ಬಗ್ಗೆ ಆತ ಬಾಯಿಬಿಟ್ಟಿದ್ದಾನೆ. ಆದರಿಂದ ಈತನನ್ನು ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.