ನಂಜನಗೂಡು: ಉಪ ಚುನಾವಣೆಯ ಹಿನ್ನೆಲೆ ಗುರುವಾರ ಸಂಸದ ಆರ್. ಧ್ರುವನಾರಾಯಣ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಸಹೋದರರು ಬಿಸಿಲನ್ನೂ ಲಕ್ಕಿಸದೇ ಸಂಜೆಯವರಿಗೂ ಪಾದಯಾತ್ರೆ ನಡೆಸಿ ಮತ ಯಾಚಿಸಿದರು.
ಗುರುವಾರ ಸ್ಥಳಾಧಿಪತಿ ಶ್ರೀಕಂಠೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿರುವ ಗಣಪತಿಗೆ ಪೂಜೆ ಸಲ್ಲಿಸಿ ಕಾಂಗ್ರೆಸ್ ಪರವಾಗಿ ಪ್ರಚಾರ ಆರಂಭಿಸಿದರು. ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, 1ನೇ ವಾರ್ಡಿನಿಂದ 27 ವಾರ್ಡ್ ಗಳಲ್ಲೂ ಪಾದಯಾತ್ರೆ ಮೂಲಕ ಮನೆ – ಮನೆಗೂ ತೆರಳಿ ರಾತ್ರಿ 10 ಗಂಟೆವರೆಗೂ ಮತಯಾಚಿಸಲಾಗುವುದು ಎಂದರು.
ಮುಖ್ಯಮಂತ್ರಿಗಳ ಪ್ರವಾಸ: ಶುಕ್ರವಾರ ದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಂಜನಗೂಡಿನಲ್ಲಿ ಪ್ರಚಾರ ಕೈ ಗೊಳ್ಳಲಿದ್ದು ಬೆಳಗ್ಗೆ ಗೊಳೂರಿನಿಂದ ಈ ಪ್ರಚಾರ ಯಾತ್ರೆ ಆರಂಭಗೊಳ್ಳಿದೆ ಎಂದು ಹೇಳಿದರು.
ಕೌಲಂದೆ ಬದನವಾಳು ಹಾಗೂ ಕಳಲೆ ಜಿಪಂ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳು ಪಕ್ಷದ ಅಭ್ಯರ್ಥಿ ಕಳಲೆ ಪರವಾಗಿ ಮತ ಯಾಚಿಸಲಿದ್ದು, ದೊಡ್ಡ ಕವಲಂದೆ, ಹೆಮ್ಮರಗಾಲ ಹಾಗೂ ಕಳಲೆಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ. ಏ.1 ರಂದು ಸಂಸತ್ತಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪಟ್ಟಣಕ್ಕೆ ಆಗಮಿಸಿ ಪ್ರಚಾರ ಕಾರ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ಇಂದಿನಿಂದ ಉಸ್ತುವಾರಿಗಳು: ನಗರದ ಉಸ್ತುವಾರಿಯನ್ನು ಸಚಿವರಾದ ರಮೇಶ್‌ಕುಮಾರ್ ಮತ್ತು ಕೃಷ್ಣಪ್ಪ ಅವರಿಗೆ ವಹಿಸಿದ್ದು, 6 ಜಿಪಂಗಳಿಗೆ ತಲಾ ಒಬ್ಬೊಬ್ಬ ಸಚಿವರಂತೆ ಜವಾಬ್ದಾರಿ ವಹಿಸಿದ್ದು ಇಂದಿನಿಂದ ಎಲ್ಲರೂ ಇಲ್ಲಿಗೆ ಆಗಮಿಸಿ, ಉಸ್ತುವಾರಿಯ ಕಾರ್ಯ ಭರ ವಹಿಸಿಕೊಂಡು ಪಕ್ಷದ ಗೆಲುವಿಗಾಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ನಗರಸಭಾ ಸದಸ್ಯರಾದ ಎನ್.ಎಂ.ಮಂಜುನಾಥ್, ರಾಜೇಶ್, ಸಿ.ಎಂ.ಶಂಕರ್, ಚಂದ್ರಶೇಖರ್, ಚಲುವರಾಜು, ಸುಂದರರಾಜ್, ಡಿ.ಆರ್.ರಾಜು, ರಾಮಕೃಷ್ಣ, ಮೀನಾಕ್ಷಿ, ಮಾಜಿ ಪುರಸಭಾಧ್ಯಕ್ಷರಾದ ಶ್ರೀಧರ್, ಪಿ.ಶ್ರೀನಿವಾಸ್, ಎನ್. ಇಂದ್ರ, ದೊರೆಸ್ವಾಮಿ, ಗಾಯಿತ್ರಿ, ಮಾಜಿ ಸದಸ್ಯರಾದ ಸ್ವಾಮಿ, ಸೌಭಾಗ್ಯ, ನಾಸಿರ್ ಅಹಮದ್, ತಾಪಂ ಸದಸ್ಯ ಮಹದೇವಸ್ವಾಮಿ, ಶಿವಕುಮಾರ್ ಇತರರು ಇದ್ದರು.