ಅದು ಸಂಜೆ 6ರ ಸಮಯ. ಮನೆಯಿಂದ ಹಬ್ಬ ಮುಗಿಸಿ ಹೊರಟಾಗ ದಾರಿ ಮಧ್ಯೆ ಬಸ್ಸಿನ ಟಯರ್ ಪಂಕ್ಚರ್ ಆಗಿತ್ತು. ಬೇರೆ ಬಸ್ ಇಲ್ಲದ ಕಾರಣ ಅದೇ ಬಸ್ ರಿಪೇರಿ ಅಗುವವರೆಗೆ ಕಾದು ಮುಂದುವರಿಯಬೇಕಾದ ಅನಿವಾರ್ಯತೆ. ಸುಮಾರು ಒಂದು ತಾಸಿನ ನಂತರ ಬಸ್ಸು ರೆಡಿಯಾಗಿ ಹೊರಟಾಗ ಅಲ್ಲೋಲ ಕಲ್ಲೋಲವಾಗಿದ್ದ ಮನಸ್ಸು ತಹಬದಿಗೆ ಬಂತು. ಅಂತೂ ಇಂತೂ ಬಸ್ಸು ನಿಧಾನವಾಗಿ ಉಡುಪಿಗೆ ಬಂದು ತಲುಪಿದಾಗ ನಿರುಮ್ಮಳವಾಗಿದ್ದ ಮನಕ್ಕೆ ಮಗದೊಮ್ಮೆ ಆತಂಕ ಎದುರಾಯಿತು.
ಮೊದಲ ಬಸ್ ತಡವಾದ್ದರಿಂದ ಧರ್ಮಸ್ಥಳಕ್ಕೆ ಹೋಗಬೇಕಾದ ಮತ್ತೂಂದು ಬಸ್ಸು ನೀನು ಬರುವವರೆಗೂ ಕಾಯಲಾಗುವುದಿಲ್ಲ ಅಂದುಕೊಂಡು ಅದಾಗಲೇ ಹೊರಟು ಹೋಗಿತ್ತು. ಇವತ್ತು ಹೊರಟ ಗಳಿಗೆಯೇ ಸರಿ ಇಲ್ಲ ಎಂದು ನನ್ನನ್ನು ನಾನು ಹಳಿದುಕೊಳ್ಳುತ್ತ ನೇರವಾಗಿ ಒಂದು ಅಂಗಡಿಯೊಳಗೆ ನುಗ್ಗಿದೆ. ಅಂಗಡಿಯವನು ನನ್ನನ್ನು ನೋಡಿದವನೇ ತುಳುವಿನಲ್ಲಿ “ದಾದ ಬೋಡಿತ್ತಂಡ್?’ ಎಂದು ಕೇಳಿದ. ಅವರು ಕೇಳಿದ ಪ್ರಶ್ನೆಗೆ ನನಗೆ ಬರುತ್ತಿದ್ದ ಚೂರುಪಾರು ತುಳುವಿನಲ್ಲಿ ನಿಜವಾದ ಸುಂದರ ತುಳು ವಿಕಾರವಾಗದಂತೆ, “ಒಂದು ಬಾಟಲಿ ಜ್ಯೂಸ್ ಕೊಡಿ ಅಣ್ಣಾ’ ಎಂದೆ. ನಾನು ಕೇಳಿದ ಜ್ಯೂಸ್ ನೀಡಿದ ಅಂಗಡಿಯವನು, ಬಿಸ್ಕೆಟ್ ಬಾಕ್ಸ್ ಒಂದನ್ನು ತೋರಿಸಿ, “ಇದು ತುಂಬಾ ಚೆನ್ನಾಗಿದೆ, ತೆಗೊಳ್ಳಿ ಟೇಸ್ಟ್ ನೋಡಿ’ ಎನ್ನುತ್ತ ತನ್ನ ವ್ಯಾಪಾರಿ ಗುಣ ಮೆರೆದ. ನಾನು ಬೇಡವೆಂದರೂ ಕೇಳದೆ ಒಮ್ಮೆ ತಿಂದು ನೋಡಿ ಎಂದು ಒತ್ತಾಯಿಸಿ ಕೈಗೆ ಬಿಸ್ಕೆಟ್ ಪ್ಯಾಕೆಟ್ ನೀಡಿಯೇ ಬಿಟ್ಟರು. ನಾನು ಅವರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಅದನ್ನ ತೆಗೆದುಕೊಂಡು ಅರ್ಧ ಗಂಟೆ ಬಸ್ಸಿಗಾಗಿ ಕಾದು ಕೊನೆಗೂ ಬಂದ ಬಸ್ ಹತ್ತಿ ಮುಂದಿನ ಸೀಟಿನಲ್ಲಿ ಕುಳಿತೆ.
ಆಗಲೇ ಬಸ್ ಹತ್ತಿದ ಮತ್ತೂಬ್ಬ ವ್ಯಕ್ತಿಯೂ ಕೂಡ ಸೀದಾ ಬಂದು, ನಾನು ಕುಳಿತಿದ್ದ ಸೀಟ್‌ನಲ್ಲೆ ಬಂದು ಆಸೀನರಾದರು. ಅವರ ಮುಖ ತೀರಾ ಗಂಭೀರತೆಯಿಂದ ಕೂಡಿತ್ತು. ನಾನೂ ಅವರ ಗಂಭೀರತೆಗೆ ಮಣಿದು ಸುಮ್ಮನೆ ಕುಳಿತು ಕಿವಿಗೆ ಇಯರ್ ಫೋನ್ ಸಿಗಿಸಿಕೊಂಡು ಇಂಪಾದ ಹಾಡನ್ನು ಗುನುಗುತ್ತಿದ್ದೆ. ಮೇಲ್ನೋಟಕ್ಕೆ ನಾನು ಹಾಡು ಕೇಳುವುದರಲ್ಲಿ ಮಗ್ನನಾಗಿದ್ದರೂ ನನ್ನ ಮನಸ್ಸು ಮಾತ್ರ ಪಕ್ಕದಲ್ಲಿ ಕುಳಿತಿದ್ದ ದೈತ್ಯ ವ್ಯಕ್ತಿಯ ಕಡೆಗಿತ್ತು. ಇವರನ್ನು ನೋಡಿದರೆ ಸೇನೆಯಲ್ಲಿದ್ದಿರಬಹುದು, ಹಬ್ಬದ ಪ್ರಯುಕ್ತ ಮನೆಗೆ ಬಂದಿರಬಹುದು ಎಂಬಂಥ ನಾನಾ ಆಲೋಚನೆಗಳು ಮನದಲ್ಲಿ ಮೂಡಿ ಮರೆಯಾದವು.
ಮೊದಲಿನಿಂದಲೂ ಯೋಧರ ಬಗ್ಗೆ ಉತ್ಕಟ ಅಭಿಮಾನವಿದ್ದ ನನಗೆ ಅವರನ್ನು ಒಮ್ಮೆಯಾದರೂ ಮಾತನಾಡಿಸಬೇಕೆನಿಸಿತು. ಆದರೆ, ಹೇಗೆ ಆರಂಭ ಮಾಡುವುದೆಂದು ತಿಳಿಯದೆ ಮತ್ತದೆ ಆಲೋಚನೆಯಲ್ಲಿ ಮುಳುಗಿದೆ. ಕೊನೆಗೆ ನನ್ನಲ್ಲಿದ್ದ ಬಿಸ್ಕೆಟ್ ಪ್ಯಾಕ್ ತೆಗೆದು, ತೆಗೆದುಕೊಳ್ಳಿ ಎಂದು ಮುಗುಳುನಗೆ ಬೀರುತ್ತ ಕೈ ಚಾಚಿದೆ. ಅವರು ನನ್ನತ್ತ ನೋಡಿ ಒಮ್ಮೆ ಕಿರುನಗೆ ಬೀರಿ, “ಇಲ್ಲಾ ಪರವಾಗಿಲ್ಲ ತಿನ್ನಿ’ ಎಂದರು. ನನಗೂ ಅಷ್ಟೇ ಬೇಕಾಗಿತ್ತು. ತತ್‌ಕ್ಷಣ ಒತ್ತಾಯ ಮಾಡಿ ಅವರಿಗೆ ಬಿಸ್ಕೆಟ್ ನೀಡಿ ನನ್ನ ಮಾತುಗಳಿಗೆ ಪೀಠಿಕೆ ಹಾಕಿದೆ. ಅವರೂ ನನ್ನೊಂದಿಗೆ ಅಲ್ಪ ಸ್ವಲ್ಪವೇ ಮಾತಾಡುತ್ತ ತಮ್ಮ ಪೂರ್ವಾಪರ ಬಿಚ್ಚಿಟ್ಟರು.
“ನಾನು ಇಂಜಿನಿಯರಿಂಗ್ ಮುಗಿಸಿ ಇವಾಗ ಧಾರವಾಡದಲ್ಲಿ ಲೆಕ್ಚರರ್ ಆಗಿ ಜಾಬ್ ಮಾಡ್ತಿದ್ದೇನೆ. ನನ್ನ ಮನೆಯೂ ಅಲ್ಲೇ ಇದೆ’ ಅಂದಾಗ ನನ್ನ ಮನದಲ್ಲಿ ಆಗಲೇ ಮೂಡಿದ ಅಲೋಚನೆಗಳು ತಟ್ಟನೆ ಮರೆಯಾದವು. ಅವರು ಮತ್ತೂ ಮಾತು ಮುಂದುವರಿಸಿ, “ಮೊದಲು ಬೆಂಗಳೂರಿನಲ್ಲಿದ್ದೆ , ಆದರೆ, ಅಲ್ಲಿಯ ಜೀವನಕ್ಕಿಂಥ ನನ್ನ ಊರು ನೆಮ್ಮದಿ ಕೊಡುತ್ತೆ’ ಅಂದಾಗ, ನಾನು ಮಾತಿನ ಮಧ್ಯೆ ಕುತೂಹಲಕ್ಕೆ, “ನೀವು ಯಾಕೆ ಟೀಚಿಂಗ್ ಜಾಬ್ ಆರಿಸಿಕೊಂಡಿರಿ?’ ಎಂದು ಕೇಳಿದೆ. ನನ್ನ ಮಾತಿಗೆ ಅವರು ನಗುತ್ತ, “ಯಾವಾಗಲೂ ಕೂಡ ನಾವು ನಮ್ಮ ಮನಸ್ಸಿಗೆ ಹಿಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಅದು ಬಿಟ್ಟು ಸಿಕ್ಕಿದ ಕೆಲಸ ಮಾಡಿದರಾಯಿತೆಂದುಕೊಂಡು ಬೇರಾವುದೋ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಅಲ್ಲಿ ಸುಖ-ಶಾಂತಿ-ನೆಮ್ಮದಿ ಯಾವುದೂ ಸಿಗುವುದಿಲ್ಲ. ಆದ್ದರಿಂದ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುನ್ನುಗ್ಗಿ ಜೀವನದಲ್ಲಿ ಯಶಸ್ಸು ಗಳಿಸಬೇಕು. ನನಗೆ ಮಕ್ಕಳಿಗೆ ಪಾಠ ಮಾಡುವುದರಲ್ಲಿರುವ ನೆಮ್ಮದಿ ಬೇರೆ ಯಾವ ಕೆಲಸದಲ್ಲಿಯೂ ಸಿಗುವುದಿಲ್ಲ. ಹಣ ಮಾಡಲು ಬೇಕಾದಷ್ಟು ದಾರಿ ಇದೆ. ಆದರೆ, ಅದು ಯಾವುದು ಕೂಡ ಮನಸ್ಸಿಗೆ ಹಿಡಿಸಲ್ಲ. ನಾನು ನನ್ನಲ್ಲಿರುವ ವಿದ್ಯೆಯನ್ನು ಒಂದಷ್ಟು ಜನರಿಗೆ ನೀಡುವುದರಲ್ಲಿಯೇ ಹೆಚ್ಚು ಸಂತೋಷ ಪಡುತ್ತೇನೆ’ ಅಂದರು. ಅವರ ಮಾತು ನನಗೆ ಅಕ್ಷರಶಃ ಸತ್ಯ ಅನ್ನಿಸಿತು.
ನಮ್ಮ ಭವಿಷ್ಯವನ್ನು ನಾವೇ ನಮ್ಮ ಆಸಕ್ತಿ-ಅಭಿರುಚಿಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಉತ್ತಮನಾಗಿ ಬಾಳಬೇಕೇ ಹೊರತು ಮತ್ತೂಬ್ಬರ ಆಶಯಗಳಿಗೆ ಅನುಗುಣವಾಗಿ ನಾವು ಬದುಕಬಾರದು ಎಂಬ ಸತ್ಯ ಅವತ್ತು ಮನದಟ್ಟಾಯಿತು. ಹಾಗೇ ಮಾತಿನ ಹರಟೆಯಲ್ಲಿ ನನ್ನ ಹವ್ಯಾಸ, ನಾನು “ಮಳೆಮಾಲೆ ‘ ಅನ್ನುವಂತಹ ಪುಸ್ತಕ ಬರೆದದ್ದನ್ನೆಲ್ಲ ಹಂಚಿಕೊಂಡು ಒಂದು ಪುಸ್ತಕವನ್ನೂ ಓದಲು ಅವರಿಗೆ ನೀಡಿದೆ.
ಆದರ್ಶ ಕೆ. ಜಿ.
ಪ್ರಥಮ ಎಂ.ಸಿ.ಜೆ. ಎಸ್.ಡಿ. ಎಂ. ಕಾಲೇಜು, ಉಜಿರೆ