ಇಂಫಾಲ್/ಹೊಸದಿಲ್ಲಿ: ಗೋವಾ ಬಳಿಕ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದ ಮಣಿಪುರದಲ್ಲೂ ಈಗ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಣಿಪುರದಲ್ಲಿ ಇದೇ ಮೊದಲ ಬಿಜೆಪಿ ನೇತೃತ್ವದ ಸರಕಾರದ ಮುಖ್ಯಮಂತ್ರಿಯಾಗಿ ಎನ್. ಬಿರೇನ್ ಸಿಂಗ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ನಜ್ಮಾ ಹೆಫ್ತುಲ್ಲಾ ಅವರು ಬಿರೇನ್ ಹಾಗೂ ಇತರ 8 ಮಂದಿ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಫಲಿತಾಂಶದ ಬಳಿಕ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಗೊಂಡ ಟಿ.ಎಚ್. ಶ್ಯಾಮ್‌ಕುಮಾರ್ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಅಸ್ಸಾಂ ಸಚಿವ ಹಿಮಾಂತ ಬಿಸ್ವಾ ಸರ್ಮಾ, ನಿರ್ಗಮಿತ ಸಿಎಂ ಒಕ್ರಾಮ್ ಇಬೋಬಿ ಸಿಂಗ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ನೂತನ ಸಿಎಂ ಬಿರೇನ್ ಸಿಂಗ್ ಮತ್ತು ಸಚಿವ ಸಂಪುಟಕ್ಕೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಊಹೆ ಅನಗತ್ಯ: ಉತ್ತರಪ್ರದೇಶದ ಸಿಎಂ ರೇಸ್‌ನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೇ ಮುಂಚೂಣಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ, ಇಂತಹ ನಿಷ್ಪ್ರಯೋಜಕ ಊಹೆ ಅನಗತ್ಯ ಎಂದು ಸ್ವತಃ ರಾಜನಾಥ್ ಹೇಳಿದ್ದಾರೆ. ಗುರುವಾರ ಸಭೆಯಲ್ಲಿ ಸಿಎಂ ಹೆಸರು ಅಂತಿಮಗೊಳ್ಳಲಿದೆ.
ಇಂದು ಪಾರೀಕರ್ ವಿಶ್ವಾಸಮತ
ಗೋವಾದಲ್ಲಿ ಅಧಿಕಾರಕ್ಕೇರಿರುವ ಮನೋಹರ್ ಪಾರೀಕರ್ ಸರಕಾರವು ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಸಾಬೀತುಪಡಿಸಲಿದೆ. ಎಲ್ಲರೂ ಒಗ್ಗಟ್ಟಾಗಿರುವ ಕಾರಣ ವಿಶ್ವಾಸಮತವು ಸುಗಮವಾಗಿ ಸಾಗಲಿದೆ ಹಾಗೂ ನಾವೇ ಗೆಲ್ಲುತ್ತೇವೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.