Advertisement

ಹಕಿಜ್ವರ ಭೀತಿ: ಪಕ್ಷಿಧಾಮಗಳಲ್ಲಿ ಪರಿಶೀಲನೆ : ಹಕ್ಕಿ ತ್ಯಾಜ್ಯ ಸಂಗ್ರಹಿಸಿ ಪರೀಕ್ಷೆಗೆ ರವಾನೆ

03:52 PM Jan 07, 2021 | Team Udayavani |

ಶ್ರೀರಂಗಪಟ್ಟಣ: ಕೇರಳದಲ್ಲಿ ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮ ಹಾಗೂ ಮದ್ದೂರಿನ ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಬುಧವಾರ ವೈದ್ಯರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಡಿಸೆಂಬರ್‌ ಹಾಗೂ ಜನವರಿಯಲ್ಲಿ ಸಂತಾನಕ್ಕಾಗಿ ಶ್ರೀರಂಗಪಟ್ಟಣದ ರಂಗನತಿಟ್ಟು ಹಾಗೂ ಮದ್ದೂರಿನ ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ವಿವಿಧ ಜಾತಿಯ ಪಕ್ಷಿಗಳು ಆಗಮಿಸಿದ್ದು, ಬೀಡು ಬಿಟ್ಟಿವೆ. ಈಗಾಗಲೇ ಕೇರಳದಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿರುವ ಬೆನ್ನಲ್ಲೇ ಕೊಕ್ಕರೆ ಬೆಳ್ಳೂರಿನಲ್ಲಿ ಹಕ್ಕಿಗಳು ಇದ್ದಕ್ಕಿದ್ದಂತೆ ಮರದಿಂದ ಬಿದ್ದು ಸಾವನ್ನಪ್ಪುತ್ತಿವೆ. ಈ ಹಿನ್ನೆಲೆಯಲ್ಲಿ ಬುಧವಾರ
ರಂಗನತಿಟ್ಟು ಹಾಗೂ ಕೊಕ್ಕರೆ ಬೆಳ್ಳೂರಿಗೆ ಅರಣ್ಯಾಧಿಕಾರಿಗಳು ಹಾಗೂ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಕ್ಷಿ ತ್ಯಾಜ್ಯ ಸಂಗ್ರಹ: ಹಕ್ಕಿಜ್ವರದ ಮುಂಜಾಗ್ರತೆ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಹಕ್ಕಿಗಳ ತ್ಯಾಜ್ಯ ಸಂಗ್ರಹಿಸಿ, ಪರೀಕ್ಷೆಗೆ ಕೊಂಡೊಯ್ಯಲಾಯಿತು. ಇತ್ತ ಕೊಕ್ಕರೆ ಬೆಳ್ಳೂರಿನಲ್ಲಿ ಅಧಿಕಾರಿಗಳು ಸತ್ತ ಪಕ್ಷಿಗಳ ಕಳೆಬರಹ ಪಂಚನಾಮೆ ನಡೆಸಿ ಮಾದರಿ
ಸಂಗ್ರಹಿಸಲಾಗಿದೆ.

ದ್ರಾವಣ ಸಿಂಪಡಣೆ: ರಂಗನತಿಟ್ಟು ಪಕ್ಷಿಧಾಮದಲ್ಲಿ ಮುಂಜಾಗ್ರತೆ ಕ್ರಮವಾಗಿ ಸ್ಯಾನಿಟೈಸರ್‌, ದ್ರಾವಣ ಸಿಂಪಡಿಸಲಾಯಿತು. ಅಲ್ಲದೆ, ಪ್ರವಾಸಿಗರು ಒಳ ಪ್ರವೇಶಿಸುವ ಮುನ್ನ ಪಾದಗಳಿಗೆ ಹಾಗೂ ಕೈಗಳಿಗೆ ದ್ರಾವಣ ಸಿಂಪಡಿಸಿ ಪ್ರವೇಶಕ್ಕೆ ಅವಕಾಶ
ಕಲ್ಪಿಸಲಾಗುತ್ತಿದೆ.

Advertisement

ಹಕ್ಕಿಜ್ವರದ ಭೀತಿ ಇಲ್ಲ: ಪಕ್ಷಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌ ಕುಮಾರ್‌ ಮಾತನಾಡಿ, ಕೇರಳದಲ್ಲಿ ಹಕ್ಕಿಜ್ವರದ ಭೀತಿ ಹಿನ್ನೆಲೆ ಪ್ರವಾಸಿ ತಾಣರಂಗನತಿಟ್ಟು ಪಕ್ಷಿಧಾಮದಲ್ಲಿ ಕ್ರಮ ಕೈಗೊಳ್ಳಲಾಗಿದೆ. ರಂಗನತಿಟ್ಟಲ್ಲಿ ಪಕ್ಷಿಗಳ ಸಂರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕಳೆದ 6-7 ತಿಂಗಳ ಹಿಂದೆ ವಿವಿಧ ಕಾರಣದಿಂದ ಹಕ್ಕಿಜ್ವರ ಭೀತಿ ವ್ಯಾಪಕವಾಗಿ ಹರಡಿ ಅವಾಂತರ ಉಂಟು ಮಾಡಿತ್ತು. ಮೈಸೂರಿನ ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆಯಲ್ಲಿ ಅಪರೂಪದ ಕೆಲವು ಪಕ್ಷಿಗಳು ಮೃತಗೊಂಡ ಹಿನ್ನೆಲೆ ಆ ಕಹಿ ನೆನಪು ಮಾಸುವ ಮುನ್ನೆವೇ ಕೇರಳದಲ್ಲಿ ಹಕ್ಕಿಜ್ವರದ ಭೀತಿ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ ತಡೆಗಟ್ಟಲು ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ರಸಾಯನಿಕ ಸಿಂಪಡಣೆ: ಈಗಾಗಲೇ ಪಕ್ಷಿಧಾಮದಲ್ಲಿ ರಸಾಯನಿಕ ಸಿಂಪಡಣೆಯಾಗಿದೆ. ಪ್ರತಿ ವಾರದ 2 ಬಾರಿ ಪಕ್ಷಿಗಳ ತ್ಯಾಜ್ಯ ಸಂಗ್ರಹಿಸಿ, ಹಕ್ಕಿಜ್ವರ ಹರಡಿದೆಯೇ ಎಂದು ತಿಳಿಯಲು ಸುತ್ತಮುತ್ತ ಹಕ್ಕಿಗಳ ತ್ಯಾಜ್ಯ ಮಾದರಿಯನ್ನು ಸಂಗ್ರಹಿಸಿ
ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.

 

ಪಕ್ಷಿಧಾಮದಲ್ಲಿ ಹಕ್ಕಿಗಳ ಮೇಲೆ ನಿಗಾ ಇಡಲಾಗಿದ್ದು, ಪ್ರತಿದಿನ ವೈದ್ಯರಿಂದ ಪರೀಕ್ಷಾ ಕಾರ್ಯಗಳು ನಡೆಯುತ್ತಿದೆ. ಅದರಲ್ಲೂ ರಂಗನತಿಟ್ಟು, ಕಾರಂಜಿಕೆರೆ, ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿಗಳ ತ್ಯಾಜ್ಯ ಸಂಗ್ರಹಿಸಿ ಲ್ಯಾಬ್‌ಗ ಕಳುಹಿಸಲಾಗುತ್ತಿದೆ. ಮುಂದೆ
ಪ್ರಯೋಗಾಲಯದ ವರದಿ ಆಧಾರಿಸಿ ಇನ್ನಷ್ಟು ಹೆಚ್ಚಿನ ಕ್ರಮ ವಹಿಸಲಾಗುತ್ತದೆ ಎಂದರು.

ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವಲಿಂಗಯ್ಯ, ಪರಿವೀಕ್ಷಕ ಹರೀಶ್‌ ಸೇರಿದಂತೆ ಅಧಿಕಾರಿಗಳ ತಂಡ ಹಕ್ಕಿಗಳ ಚಲನವಲನಗಳ ಮೇಲೆ ನಿಗಾವಹಿಸಿ, ಪ್ರತಿ ಸ್ಥಳಗಳನ್ನು ವೀಕ್ಷಿಣೆ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲು ಹಕ್ಕಿಗಳ ತ್ಯಾಜ್ಯ ಸಂಗ್ರಹಿಸಿದರು. ವಲಯ ಅರಣ್ಯಾಧಿಕಾರಿ ಸುರೇಂದ್ರ, ಉಪವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ಹಾಜರಿದ್ದರು.

ಕೊಕ್ಕರೆ ಬೆಳ್ಳೂರಲ್ಲಿ ಪೆಲಿಕಾನ್‌ಗಳ ಸಾವು
ಭಾರತೀನಗರ: ಇಲ್ಲಿಗೆ ಸಮೀಪದ ಪಕ್ಷಿಧಾಮ ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಆಗಮಿಸಿರುವ ಪೆಲಿಕಾನ್‌ ಹಕ್ಕಿಗಳ ಸಾವಿನ ಸರಣಿ
ಮುಂದುವರಿದಿದೆ. ನವೆಂಬರ್‌ ತಿಂಗಳಿಂದ ಕೊಕ್ಕರೆ ಬೆಳ್ಳೂರಿಗೆ ಆಗಮಿಸಿರುವ ಪೆಲಿಕಾನ್‌ ಹಕ್ಕಿಗಳು ಮೊಟ್ಟೆ ಇಟ್ಟು ಮರಿ ಹಾಕುತ್ತಿವೆ. ಈಗಾಗಲೇ ಇಲ್ಲಿಯವರೆಗೆ ಆರು ಪೆಲಿಕಾನ್‌ ಹಕ್ಕಿಗಳು ಮೃತಪಟ್ಟಿದ್ದು, ಕಳೆದ 2020ರಲ್ಲಿ 125ಕ್ಕೂ ಹೆಚ್ಚು ಪೆಲಿಕಾನ್‌ ಸಾವನ್ನಪ್ಪಿವೆ. ಇದರಿಂದ ಪಕ್ಷಿ ಪ್ರಿಯರು ಆತಂಕಗೊಂಡಿದ್ದಾರೆ. ಪಕ್ಷಿಗಳ ಸಾವಿಗೆ ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಪಶುವೈದ್ಯಾ ಧಿಕಾರಿಗಳು ಪಕ್ಷಿಯ ಕಳೆಬರಹವನ್ನು ಪಂಚನಾಮೆ ನಡೆಸಿದ್ದಾರೆ.

ಇದನ್ನೂ ಓದಿ:ಎಚ್ಚರ…ಪ್ಲೇ ಸ್ಟೋರ್ ನಿಂದ ನಕಲಿ ಕೋ ವಿನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಡಿ!

125ಕ್ಕೂ ಹೆಚ್ಚು ಪೆಲಿಕಾನ್‌ ಸಾವು:
ವಿದೇಶದಿಂದ ಸಂತಾನಕ್ಕಾಗಿ ಗ್ರಾಮಕ್ಕೆ ಆಗಮಿಸುವ ಪೆಲಿಕಾನ್‌ ಗಳು, ಗ್ರಾಮದ ಮಧ್ಯೆಯೇ ಮರಗಳ ಮೇಲೆ ಗೂಡು ಕಟ್ಟಿ
ವಾಸಿಸುವುದು ವಿಶೇಷ. ಕಳೆದ ನಾಲ್ಕು ವರ್ಷದಿಂದ ಪೆಲಿಕಾನ್‌ಗಳು ಮರದ ಮೇಲಿಂದ ಉರುಳಿ ಬಿದ್ದು ಸಾವನ್ನಪ್ಪುತ್ತಿದ್ದು, ಇದುವರೆಗೆ ಸುಮಾರು 125ಕ್ಕೂ ಹೆಚ್ಚು ಪೆಲಿಕಾನ್‌ಗಳು ಮೃತಪಟ್ಟಿವೆ.
ಅರಣ್ಯ, ಪಶು ಹಾಗೂ ಹಲವು ಪಕ್ಷಿ ತಜ್ಞರು ಪೆಲಿಕಾನ್‌ಗಳ ಸಾವಿಗೆ ಸಂಬಂಧಿಸಿದಂತೆ ಹಲವು ಪರೀಕ್ಷೆಗಳನ್ನು ಕೈಗೊಂಡಿದ್ದರೂ, ಗ್ರಾಮದಲ್ಲಿ ಪೆಲಿಕಾನ್‌ಗಳ ಸಾವು ಸಂಭವಿಸುತ್ತಿರುವುದು ಆತಂಕ ಮೂಡಿಸಿದೆ.

ನೀರು ಕಲುಷಿತವಾಗಿಲ್ಲ: ಪೆಲಿಕಾನ್‌ ಹಕ್ಕಿ ಸಾವನ್ನಪ್ಪಿದಾಗಲೇ ಸುತ್ತಮುತ್ತಲ ಕೆರೆಗಳ ನೀರಿನ ಮಾದರಿ ಸಂಗ್ರಹಿಸಿ, ಪರೀಕ್ಷಿಸಲಾಗಿತ್ತು. ಯಾವುದೇ ಕೆರೆ ನೀರು ಕಲುಪಿತಗೊಂಡಿಲ್ಲ ಎಂದು ವರದಿ ಬಂದಿತ್ತು. ಉತ್ತಮ ಮಳೆಯಾಗಿರುವುದರಿಂದ
ಕೆರೆ-ಕಟ್ಟೆಗಳಲ್ಲಿ ಹೊಸ ನೀರು ತುಂಬಿಕೊಂಡಿದೆ.

ತಹಶೀಲ್ದಾರ್‌ ಭೇಟಿ: ತಹಶೀಲ್ದಾರ್‌ ವಿಜಯ್‌ ಕುಮಾರ್‌ ಮತ್ತು ಪಶು ವೈದ್ಯಾಧಿಕಾರಿ ಡಾ.ಸತೀಶ್‌, ಡಾ.ಕೃಷ್ಣಪ್ಪ ಅವರು ಕೊಕ್ಕರೆ ಬೆಳ್ಳೂರಿಗೆ ಭೇಟಿ ನೀಡಿ, ಸಾವಿಗೆ ನಿಖರ ಮಾಹಿತಿ ಕಲೆ ೆ ಹಾಕುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next