ಮಣಿಪಾಲ: ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಲನಚಿತ್ರ ತೆರೆಗೆ ಬರಲು ಸಜ್ಜಾಗಿದೆ. ತಮಿಳು ನಟ ವಿಜಯ್ ಸೇತುಪತಿ ಅವರು ಮುರಳೀಧರನ್ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದು, ಚಿತ್ರಕ್ಕೆ “800” ಎಂದು ಹೆಸರಿಡಲಾಗಿದೆ.
ಆದರೆ ಚಿತ್ರದ ಪೋಸ್ಟರ್ ಘೋಷಣೆಯಾಗುತ್ತಲೇ ತಮಿಳುನಾಡಿನಲ್ಲಿ ವಿರೋಧ ಆರಂಭವಾಗಿದೆ. ವಿಜಯ ಸೇತುಪತಿಯನ್ನು ತಮಿಳು ವಿರೋಧಿ ಎನ್ನುವಂತೆ ಚಿತ್ರಿಸಲಾಗುತ್ತಿದೆ.
ಯಾಕೆ ವಿರೋಧ?
ಮುತ್ತಯ್ಯ ಮುರಳೀಧರನ್ ಶ್ರೀಲಂಕಾದ ಕ್ರಿಕೆಟಿಗ. ಶ್ರೀಲಂಕಾದಲ್ಲಿರುವ ತಮಿಳು ಜನರ ಮೇಲೆ ಅಲ್ಲಿನ ಸರ್ಕಾರ ದಬ್ಬಾಳಿಕೆ ಮಾಡಿದೆ, ಅನೇಕ ತಮಿಳರನ್ನು ಹತ್ಯೆಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳರ ಪರವಾಗಿ ಮುತ್ತಯ್ಯ ಮುರಳೀಧರನ್ ಮಾತನಾಡಿರಲಿಲ್ಲ. ಇಷ್ಟೆಲ್ಲಾ ಆಗಿರುವಾಗ ತಮಿಳು ನಟನೊಬ್ಬ ಶ್ರೀಲಂಕಾ ಧ್ವಜದ ಜೆರ್ಸಿಯನ್ನು ತೊಟ್ಟು ಸಿನಿಮಾ ಮಾಡಲು ಮುಂದಾಗಿರುವುದು ದುರಂತ ಎಂದು ಟೀಕಿಸಲಾಗುತ್ತಿದೆ. ನಟ ವಿಜಯ್ ಸೇತುಪತಿ ತಮ್ಮ ನಿರ್ಧಾರವನ್ನು ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆ ಈ ವಿಚಾರ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿತ್ತು.
ಇದನ್ನೂ ಓದಿ:ಹರಿಪ್ರಿಯಾ ಕೈಯಲ್ಲಿ ಐದು ಸಿನಿಮಾ
ನಿರ್ಮಾಪಕರು ಹೇಳುವುದೇನು?
ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರದ ಬಗ್ಗೆ ರಾಜಕೀಯ ಪ್ರೇರಿತ ಟೀಕೆಗಳು ಕೇಳಿ ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ “800” ಚಿತ್ರ ಸಂಪೂರ್ಣ ಕ್ರೀಡಾ ಚಿತ್ರವಾಗಿರುತ್ತದೆ. ಈ ಚಿತ್ರವು ತಮಿಳು ಕುಟುಂಬದಲ್ಲಿ ಜನಿಸಿ ವಿಶ್ವಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದವರ ಜೀವನಾಧಾರಿತ ಚಿತ್ರವಷ್ಟೇ ಎಂದು ಚಿತ್ರ ನಿರ್ಮಾಣ ಸಂಸ್ಥೆ ತಿಳಿಸಿದೆ.
ಚಿತ್ರವನ್ನು ದರ್ ಮೋಷನ್ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ. ಎಂ.ಎಸ್ ಶ್ರೀಪತಿ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ವಿಜಯ್ ಸೇತುಪತಿ ಅವರು ಮುರಳೀಧರನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ ಉಳಿದ ಯಾವುದೇ ನಟರ ಆಯ್ಕೆ ಅಂತಿಮವಾಗಿಲ್ಲ. 2021ರ ಆರಂಭದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಭಾರತ, ಶ್ರೀಲಂಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.