Advertisement

ಬಿಳಿಗಿರಿ ರಂಗನ ಬೆಟ್ಟದ ಪ್ರಾಣಿಗಳಿಗೆ ಕಿರಿಕಿರಿ ಆಗದಿರಲಿ ಹೊಸ ವರ್ಷ

09:10 PM Dec 28, 2019 | Lakshmi GovindaRaj |

ಯಳಂದೂರು: ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಹೊಸ ವರ್ಷಕ್ಕೆ ಸಾವಿರಾರು ಪ್ರವಾಸಿಗರು ಲಗ್ಗೆ ಇಡುತ್ತಾರೆ. ಆದರೆ ಇಲ್ಲಿ ಗದ್ದಲವೆಬ್ಬಿಸುವ ಹಾಗೂ ಅನೈರ್ಮಲ್ಯಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲು ಅರಣ್ಯ-ಪೊಲೀಸ್‌ ಇಲಾಖೆ ಸಿದ್ಧವಾಗಿದೆ. ಈ ಕುರಿತು ಪರಿಸರ ಪ್ರೇಮಿಗಳಲ್ಲಿ ಈಗಾಗಲೇ ಅರಣ್ಯ ಹಾಗೂ ಪೊಲೀಸ್‌ ಇಲಾಖೆ ವತಿಯಿಂದ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.

Advertisement

ರಾಜ್ಯದಲ್ಲೇ ವಿಶಿಷ್ಟ ಪ್ರಬೇಧದ ಸಸ್ಯವರ್ಗಗಳನ್ನು ತಮ್ಮ ಬಗಲಿನಲ್ಲೇ ಇಟ್ಟುಕೊಂಡಿರುವ ಬಿಳಿಗಿರಿರಂಗನಬೆಟ್ಟದ ಪ್ರಾಕೃತಿಕ ಸೊಬಗಿಗೆ ಮಾರುಹೋಗದವರೇ ಇಲ್ಲ. ನಿತ್ಯ ಸಾವಿರಾರು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಈ ಬೆಟ್ಟಕ್ಕಿದೆ. ಅತಿಯಾದ ಹುಲಿ ಸಂತತಿ ಬೆಳೆಯುತ್ತಿರುವ 2 ನೇ ಅರಣ್ಯವಾಗಿ ಇದು ಗುರುತಿಸಲ್ಪಟ್ಟಿದೆ. ಹುಲಿ ರಕ್ಷಿತ ಅರಣ್ಯ ಪ್ರದೇಶವಾದ ಮೇಲೆ ಇಲ್ಲಿ ನಿಯಮಗಳು ಕಠಿಣವಾಗಿದೆ.

ಬಿಳಿಗಿರಿರಂಗನಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ. ಇದು ಸಮುದ್ರ ಮಟ್ಟದಿಂದ 2800 ಅಡಿಗಳ ಎತ್ತರದಲ್ಲಿದೆ. ಬಿಆರ್‌ಟಿ ವನ್ಯಧಾಮ ವಲಯ ಸುಮಾರು 675 ಚ.ಕಿ.ಮೀ ವಿಸ್ತೀರ್ಣದ ಅರಣ್ಯ ಹೊಂದಿದೆ. ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲಿ ಬಿಳಿಗಿರಿರಂಗನ ಬೆಟ್ಟವೂ ಒಂದಾಗಿದ್ದು, ನಿತ್ಯವೂ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರುವುದರಿಂದ, ಇಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳು ಪ್ರವಾಸಿಗರನ್ನು ಅಕರ್ಷಿಸುತ್ತದೆ.

ಅದರಲ್ಲೂ ಬಿಳಿದಾದ, ಏಕಶಿಲೆಯಿಂದ ರಚನೆಯಾಗಿರುವ ಕಮರಿ ಇಲ್ಲಿನ ಪ್ರಮುಖ ಆಕರ್ಷಣೆ. ಇಂತಹ ತಾಣದಲ್ಲಿ ಹೊಸವರ್ಷ ಆಚರಣೆಗೆ ಯುವ ಸಮೂಹ ಇಷ್ಟಪಡುತ್ತಾರೆ. ಈ ಸ್ಥಳಗಳಲ್ಲಿ ಮಧ್ಯರಾತ್ರಿ ಧ್ವನಿವರ್ಧಕ ಹಾಕಿ ನೃತ್ಯ ಮಾಡುವುದು, ಮದ್ಯಪಾನ, ಮಾಂಸದ ಊಟ ಮಾಡುವ ಮೂಲಕ ಬಿಳಿಗಿರಿ ರಂಗನಬೆಟ್ಟದಲ್ಲಿ ಅನೇಕ ಕಾನೂನುಗಳನ್ನು ಗಾಳಿಗೆ ತೂರಿ ಆಚರಿಸುತ್ತಾರೆ. ಇದರಿಂದ ವನ್ಯ ಪ್ರಾಣಿಗಳಿಗೆ ಕಿರಿಕಿರಿ ಹಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಪರಿಸರ ಪ್ರಿಯರ ನೋವಿನ ನುಡಿ.

ಕಾಡಂಚಿನ ಪ್ರದೇಶದಲ್ಲಿ ಮೋಜು: ಮಧ್ಯರಾತ್ರಿ ವೇಳೆ ಹೊಸ ವರ್ಷ ಆಚರಣೆ ಮಾಡುವ ಉದ್ದೇಶದಿಂದ ಕಾಡಂಚಿನ ಪ್ರದೇಶದ ತೋಟದ ಮನೆಗಳು, ಕೆಲವು ಹೋಂ ಸ್ಟೇ ಗಳು, ಹಾಗೂ ಕಾಡಂಚಿನ ಪ್ರದೇಶವಾದ ಕೃಷ್ಣಯ್ಯನ ಕಟ್ಟೆ, ಗೌಡಹಳ್ಳಿ ಡ್ಯಾಂ, ಬೆಲವತ್ತ ಡ್ಯಾಂ, ಸೇರಿದಂತೆ ಇತರೆ ನಿರ್ಜನವಾದ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಯುವ ಸಮೂಹ ಸೇರಿ ಧ್ವನಿವರ್ಧಕ ಬಳಸಿ, ಬೆಂಕಿ ಹಾಕಿ ನರ್ತಿಸುವ ಮೂಲಕ ಮೋಜು ಮಾಡುತ್ತಾರೆ. ಇದರಿಂದ ವನ್ಯ ಪ್ರಾಣಿಗಳಿಗೆ ಕಿರಿಕಿರಿ ಆಗುವ ಸಂಭವ ಹೆಚ್ಚಾಗಿದೆ. ಈ ಸ್ಥಳಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್‌ ಇಲಾಖೆ ಮುಂಜಾಗ್ರತೆ ವಹಿಸಿದೆ.

Advertisement

ವಸತಿ ಗೃಹಗಳು ಭರ್ತಿ: ಬಿಳಿಗಿರಿ ರಂಗನಬೆಟ್ಟ ಪ್ರಕೃತಿ ಸೌಂದರ್ಯ ಒಳಗೊಂಡಿದ್ದು ಹೊಸ ವರ್ಷ ಆಚರಣೆ ನಿಮಿತ್ತ ಸಂಖ್ಯೆ ಹೆಚ್ಚಳವಾಗುತ್ತದೆ. ಇಲ್ಲಿನ ಬಿಳಿಗಿರಿ ಭವನ, ಲೋಕೋಪಯೋಗಿ ಪ್ರವಾಸಿ ಮಂದಿರ, ಅರಣ್ಯ ಕೊಠಡಿ, ತೋಟಗಾರಿಕೆ ವಸತಿ ಗೃಹಗಳು ಈಗಾಗಲೇ ಶೇ. 80 ಮುಂಗಡವಾಗಿ ಕಾಯ್ದಿರಿಸಲಾಗಿದೆ. ದೂರದ ಮೈಸೂರು, ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ಇತರೆ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗಳು ಖಾಸಗಿ ವಸತಿ ಗೃಹಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಹಣ ನೀಡಿ ಉಳಿಯುತ್ತಾರೆ. ಇವುಗಳೂ ಕೂಡ ಭರ್ತಿಯಾಗುತ್ತಿವೆ.

ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಗುಂಬಳ್ಳಿ ಚೆಕ್‌ ಪೋಸ್ಟ್‌ನಲ್ಲಿ ಡಿ.31ರ ಸಂಜೆ 6 ಗಂಟೆ ನಂತರ ಪ್ರವೇಶ ನಿರ್ಬಂಧಿಸಲಾಗಿದೆ. ವನ್ಯ ಪ್ರಾಣಿಗಳಿಗೆ ಕಿರಿಕಿರಿ ಮಾಡದಿರುವ ಬಗ್ಗೆ ವಿಶೇಷ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವ ಪ್ರಯಾಣಿಕರೂ ಧ್ವನಿವರ್ಧಕ ಬಳಕೆ ಮಾಡದಂತೆ, ಫೈರ್‌ ಕ್ಯಾಂಪ್‌ ಮಾಡದಂತೆ ಗಮನ ಇರಿಸಲಾಗುವುದು.
-ಮಹಾದೇವಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಯಳಂದೂರು ವಲಯ

* ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next