Advertisement

ಎಲ್ಲೆಂದರಲ್ಲಿ ನಿಲ್ಲುವ ಬೈಕ್‌ಗಳು; ನಿಯಂತ್ರಣಕ್ಕೆ ಬೇಕಿದೆ ಪ್ರತ್ಯೇಕ ನೀತಿ

01:00 AM Jun 29, 2019 | Lakshmi GovindaRaj |

ಬೆಂಗಳೂರು: ನೀವು ಹೋಗುವ ದಾರಿಯಲ್ಲಿ ಯಾರೋ ನಿಲ್ಲಿಸಿಹೋದ ಬೈಕ್‌ ಏರಿ, ಸಿಟಿ ಸುತ್ತಾಡಿ ಮನಬಂದಲ್ಲಿ ನಿಲ್ಲಿಸಿ ನಂತರ ನೀವು ಮನೆ ಕಡೆ ದಾರಿ ಹಿಡಿಯಬಹುದು. ಹತ್ತು ತಿಂಗಳ ಹಿಂದಷ್ಟೇ ಅನುಷ್ಠಾನಕ್ಕೆ ಬಂದ ಇಂತಹದ್ದೊಂದು ವಿನೂತನ ಪರಿಕಲ್ಪನೆ, ಅಲ್ಪಾವಧಿಯಲ್ಲೇ ಹೆಚ್ಚು ಜನರ ಮೆಚ್ಚುಗೆ ಗಳಿಸಿದೆ. ಆದರೆ, ಬೆನ್ನಲ್ಲೇ ಮತ್ತೂಂದು ರೀತಿಯ ಸಮಸ್ಯೆ ಸೃಷ್ಟಿಸುತ್ತಿದೆ.

Advertisement

ನಗರದ ಫ‌ುಟ್‌ಪಾತ್‌, ವಿಭಜಕ, ಫ್ಲೈಓವರ್‌, ಅಂಡರ್‌ಪಾಸ್‌ ಮತ್ತಿತರ ಜನಸಂಚಾರ ಹೆಚ್ಚಿರುವ ಕಡೆಗಳಲ್ಲಿ ಹಳದಿ ಬಣ್ಣದ ಸ್ಕೂಟರ್‌ಗಳು ಅನಾಥವಾಗಿ ನಿಂತಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಅವೆಲ್ಲವೂ ಬಾಡಿಗೆ ಸ್ಕೂಟರ್‌ಗಳು. ಜನರಿಗೆ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಗೆ ಅನುಕೂಲ ಆಗುವ ದೃಷ್ಟಿಯಿಂದ ಡಾಕ್‌ಲೆಸ್‌ ಶೇರ್‌ ಬೈಕ್‌ (ಎಲ್ಲೆಂದರಲ್ಲಿ ನಿಲುಗಡೆ ಸೌಲಭ್ಯ ಹೊಂದಿರುವ)ಗಳನ್ನು ಪರಿಚಯಿಸಲಾಗಿದೆ.

ಆದರೆ, ಹೀಗೆ ಎಲ್ಲೆಂದರಲ್ಲಿ ನಿಲುಗಡೆ ವ್ಯವಸ್ಥೆಯೇ ಈಗ ಪಾದಚಾರಿಗಳು, ಸೈಕಲ್‌ ಸವಾರರು ಮತ್ತು ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿವೆ. ಇದು ಸಂಚಾರ ಪೊಲೀಸರಿಗೂ ತಲೆನೋವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ನೀತಿ ಅವಶ್ಯಕತೆ ಇದೆ ಎಂಬ ಕೂಗು ಕೇಳಿಬರುತ್ತಿದೆ.

ಅಷ್ಟೇ ಅಲ್ಲ, ಹೀಗೆ ಎಲ್ಲೆಂದರಲ್ಲಿ ನಿಲುಗಡೆ ಆಗುವ ಸ್ಕೂಟರ್‌ಗಳ ಟೈರ್‌, ಬ್ಯಾಟರಿ ಒಳಗೊಂಡಂತೆ ಬಿಡಿಭಾಗಗಳ ಕಳ್ಳತನ ಪ್ರಕರಣಗಳು, ಸ್ಕೂಟರ್‌ಗಳನ್ನು ಜಖಂಗೊಳಿಸಿದ ಪ್ರಕರಣಗಳೂ ವರದಿ ಆಗುತ್ತಿವೆ. ಆರಂಭದಲ್ಲಿ ಏಳೆಂಟು ಸ್ಕೂಟರ್‌ಗಳ ಕಳವು ಕೂಡ ಆಗಿರುವ ಬಗ್ಗೆ ವರದಿ ಆಗಿದೆ. ಇನ್ನು ಕೆಲವೆಡೆ ಚಾಲಕರು ಹೆಲ್ಮೆಟ್‌ ಧರಿಸಿರುವುದಿಲ್ಲ. ಕಿಡಿಗೇಡಿಗಳು ಇವುಗಳನ್ನು ವ್ಹೀಲಿಂಗ್‌ ಮಾಡಲಿಕ್ಕೂ ಬಳಸುತ್ತಾರೆ.

ಸಮಯ ಮತ್ತು ಹಣ ಉಳಿತಾಯಕ್ಕಾಗಿ ಬಳಕೆದಾರರು ನಿಲುಗಡೆ ಇಲ್ಲದ ಜಾಗದಲ್ಲಿ ಬೇಕಾಬಿಟ್ಟಿ ನಿಲ್ಲಿಸಿ ಕಾಣೆಯಾಗುತ್ತಾರೆ. ಇತ್ತ ಗಂಟೆಗಟ್ಟಲೆ ಒಂದೇ ಕಡೆ ನಿಲ್ಲುವ ಬೈಕ್‌ಗಳನ್ನು ಕೆಲವೊಮ್ಮೆ ಕೇಳುವವರೂ ಇರುವುದಿಲ್ಲ. ಈಗಾಗಲೇ ವಾಹನಗಳ ದಟ್ಟಣೆಯಿಂದ ತುಂಬಿತುಳುಕುವ ರಸ್ತೆಗಳಲ್ಲಿ ಈ ಬಾಡಿಗೆ ಬೈಕ್‌ಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ.

Advertisement

ತೆರವುಗೊಳಿಸುವಂತೆ ಸೂಚಿಸಬೇಕೆಂದರೆ ಬಳಕೆದಾರರೇ ನಾಪತ್ತೆಯಾಗಿರುತ್ತಾರೆ. ದೂರು ನೀಡಲು ಮಾಲಿಕರು ಯಾರು ಎಂಬುದೂ ಗೊತ್ತಾಗುವುದಿಲ್ಲ; ಗೊತ್ತಾದರೂ ವಾಹನ ಸವಾರರ ಬಳಿ ಪುರಸೊತ್ತು ಇರುವುದಿಲ್ಲ. ಕೆಲವೊಮ್ಮೆ ಅಪಘಾತಗಳ ಜಾಗದಲ್ಲಿ ನಿಲುಗಡೆ ಆಗಿರುತ್ತದೆ ಎಂದು ವಿಜಯನಗರದ ನಿವಾಸಿ ಕುಮಾರ್‌ ಆರೋಪಿಸುತ್ತಾರೆ.

ಪ್ರತ್ಯೇಕ ನೀತಿ ಅಗತ್ಯ: ಡಾಕ್‌ಲೆಸ್‌ ಬೈಕ್‌ ಶೇರ್‌ ವ್ಯವಸ್ಥೆ ಬೆಂಗಳೂರಿನಂತಹ ನಗರಕ್ಕೆ ಹೇಳಿಮಾಡಿಸಿದ್ದಾಗಿದೆ. ಇದರಿಂದ ಸಾವಿರಾರು ಜನರಿಗೆ ಅನುಕೂಲ ಆಗುತ್ತಿದೆ. ಆದರೆ, ಜತೆಗೆ ಸಮಸ್ಯೆಗೂ ಕಾರಣವಾಗುತ್ತಿದೆ. ಇಲ್ಲಿ ವಾಹನದ ಮಾಲಿಕನೊಬ್ಬ ಬಳಕೆದಾರ ಮತ್ತೂಬ್ಬ ಆಗಿರುತ್ತಾನೆ. ಬಳಕೆದಾರ ಸಾರಿಗೆ ನಿಯಮಗಳ ಉಲ್ಲಂಘನೆ ಅಥವಾ ಅಪಘಾತ ಮಾಡಿಬಂದರೂ ಉತ್ತರದಾಯಿತ್ವ ಇರುವುದಿಲ್ಲ.

ಆದ್ದರಿಂದ ಸಂಚಾರ ಪೊಲೀಸ್‌ ಇಲಾಖೆಯಲ್ಲಿ ಇರುವಂತೆಯೇ ಇ-ಚಲನ್‌, ನೊ-ಪಾರ್ಕಿಂಗ್‌ ಅನ್ನು ಸೂಚಿಸುವಂತಹ ಸೆನ್ಸರ್‌ ಸೇರಿದಂತೆ ಹಲವು ತಂತ್ರಜ್ಞಾನಗಳ ಅಳವಡಿಕೆ ಹಾಗೂ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಇರುವಂತೆ ಪ್ರತ್ಯೇಕ ನೀತಿಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮುಂದಾಗಬೇಕು ಎಂದು ಕ್ಲೀನ್‌ ಏರ್‌ ಪ್ಲಾಟ್‌ಫಾರಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್‌ ರಂಗನಾಥ್‌ ಅಭಿಪ್ರಾಯಪಡುತ್ತಾರೆ.

4 ಸಾವಿರ ಸ್ಕೂಟರ್‌; 30 ಸಾವಿರ ರೈಡ್‌ಗಳು!: ಅಂದಹಾಗೆ ನಗರದಲ್ಲಿ ಬೌನ್ಸ್‌, ವೋಗೊ, ಡ್ರೈವ್‌ ಈಜಿ, ರಾಯಲ್‌ ಬ್ರದರ್ ಸೇರಿದಂತೆ ಸುಮಾರು ಏಳೆಂಟು ಕಂಪೆನಿಗಳು ಜಿಪಿಎಸ್‌ ಆಧಾರಿತ ಬಾಡಿಗೆ ಸ್ಕೂಟರ್‌ಗಳನ್ನು ಪೂರೈಸುತ್ತಿದ್ದು, 8ರಿಂದ 10 ಸಾವಿರ ಸ್ಕೂಟರ್‌ಗಳು ಕಾರ್ಯಾಚರಣೆ ಮಾಡುತ್ತವೆ ಎಂದು ಅಂದಾಜಿಸಲಾಗಿದೆ. ಆದರೆ, ಡಾಕ್‌ಲೆಸ್‌ ಶೇರ್‌ ಸೌಲಭ್ಯ ಹೊಂದಿರುವ ಕಂಪೆನಿ ಬೌನ್ಸ್‌ ಮಾತ್ರ.

ಇದರಡಿ ನಾಲ್ಕು ಸಾವಿರ ಸ್ಕೂಟರ್‌ಗಳು ನಾನಾ ಭಾಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ನಿತ್ಯ 30 ಸಾವಿರ ರೈಡ್‌ (ಟ್ರಿಪ್‌)ಗಳನ್ನು ಇವು ಪೂರ್ಣಗೊಳಿಸುತ್ತವೆ. ಅವೆಲ್ಲವೂ ಸರಾಸರಿ 6-8 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಒಟ್ಟಾರೆ ಬಾಡಿಗೆ ಸ್ಕೂಟರ್‌ಗಳಲ್ಲಿ ಶೇ. 45ರಷ್ಟು ರೈಡ್‌ಗಳು ಮೆಟ್ರೋ ನಿಲ್ದಾಣದಿಂದ ಆರಂಭವಾಗುತ್ತವೆ ಅಥವಾ ಮೆಟ್ರೋ ನಿಲ್ದಾಣಕ್ಕೆ ಅಂತ್ಯಗೊಳ್ಳುತ್ತವೆ ಎಂದು ಬೌನ್ಸ್‌ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಿ. ಅನಿಲ್‌ ಮಾಹಿತಿ ನೀಡಿದರು.

ಕಾರ್ಯಾಚರಣೆ ಹೀಗೆ: ಬಾಡಿಗೆ ಬೈಕ್‌ಗಳ ಸೇವೆ ಪಡೆಯುವುದು ತುಂಬಾ ಸುಲಭ. ಇದಕ್ಕಾಗಿ ಆಯಾ ಕಂಪೆನಿಗಳ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ಬಳಕೆದಾರರ ಮಾಹಿತಿ ಭರ್ತಿ ಮಾಡಿ, ಚಾಲನಾ ಪರವಾನಗಿ ಅಪ್‌ಲೋಡ್‌ ಮಾಡಿದರೆ ಸಾಕು. ಹತ್ತಿರದಲ್ಲಿ ಲಭ್ಯವಿರುವ ಸ್ಕೂಟರ್‌ನ ನಿರ್ದಿಷ್ಟ ಜಾಗದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೀಡಲಾಗುತ್ತದೆ. ಆ ಸ್ಕೂಟರ್‌ ತಲುಪುವಷ್ಟರಲ್ಲಿ “ಒಟಿಪಿ’ ನಂಬರ್‌ ಬರುತ್ತದೆ. ಅದರ ಸಹಾಯದಿಂದ ಬೈಕ್‌ ಲಾಕ್‌ ತೆರೆದು, ಓಡಿಸಬಹುದು. ಒಂದೊಂದು ಕಂಪೆನಿಯದ್ದು ಒಂದೊಂದು ರೀತಿಯ ಬಾಡಿಗೆ ದರ ನಿಗದಿಪಡಿಸಲಾಗಿದೆ.

ಸಂಖ್ಯೆ ನಗಣ್ಯ; ಸಮಜಾಯಿಷಿ: ನಗರದಲ್ಲೇ ಸುಮಾರು 50 ಲಕ್ಷ ದ್ವಿಚಕ್ರ ವಾಹನಗಳಿವೆ. ಇದಕ್ಕೆ ಹೋಲಿಸಿದರೆ, ಬಾಡಿಗೆ ಬೈಕ್‌ಗಳು ಅದರಲ್ಲೂ ಎಲ್ಲೆಂದರಲ್ಲಿ ನಿಲುಗಡೆಯಾಗುವ ಬಾಡಿಗೆ ಬೈಕ್‌ಗಳ ಸಂಖ್ಯೆ ನಗಣ್ಯ. ಆದರೆ, ಅವುಗಳ ಬ್ರ್ಯಾಂಡ್‌ಗಳಿಂದ ಲೋಪ ಎದ್ದುಕಾಣುತ್ತಿದೆ. ನಿಲುಗಡೆ ಬಗ್ಗೆ ಬಳಕೆದಾರರಲ್ಲಿ ಅರಿವು ಇರಬೇಕು. ಇದರ ಕೊರತೆಯಿಂದ ಸಮಸ್ಯೆಗಳು ಕಂಡುಬರುತ್ತಿವೆ ಎಂದು ಕಂಪೆನಿ ಸಮಜಾಯಿಷಿ ನೀಡುತ್ತದೆ.

ನಿಲುಗಡೆ ಇಲ್ಲದ ಕಡೆಗೆ ನಿಲ್ಲಿಸಿದರೆ ಅಥವಾ ಸಾರಿಗೆ ನಿಯಮಗಳನ್ನು ಉಲ್ಲಂ ಸುವ ಬಳಕೆದಾರರ ಮಾಹಿತಿ ನಮ್ಮ ಬಳಿ ಇರುವುದರಿಂದ ಅನಾಯಾಸವಾಗಿ ಸಿಕ್ಕಿಬೀಳುತ್ತಾರೆ. ಆ ಬಳಕೆದಾರರಿಂದಲೇ ದಂಡ ವಸೂಲು ಮಾಡಲಾಗುತ್ತದೆ. ಇನ್ನು ಬಳಕೆದಾರ ಸತತ ಮೂರು ಬಾರಿ ಇದೇ ಲೋಪಗಳನ್ನು ಪುನರಾವರ್ತಿಸಿದರೆ, ಅಂತಹವರನ್ನು ಆ್ಯಪ್‌ ಬಳಕೆಯಿಂದ ತೆಗೆದುಹಾಕಿ, ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಜಿ. ಅನಿಲ್‌ ತಿಳಿಸುತ್ತಾರೆ. ಎಚ್ಚೆತ್ತ ಕಂಪೆನಿ ಮಾಲಿಕರು ಬಿಡಿಭಾಗಗಳನ್ನು ಬಿಚ್ಚಿಕೊಂಡು ಹೋಗಲು ಅವಕಾಶ ಆಗದಂತೆ ಸೀಲ್‌ ಮಾಡಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಇವರಿಗೆ ಹೆಚ್ಚು ಅನುಕೂಲ: ಕೆಎಸ್‌ಆರ್‌ಟಿಸಿ ಅಥವಾ ಬಿಎಂಟಿಸಿ ಚಾಲಕರು ರಾತ್ರಿ ಪಾಳಿ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ, ಈ ಬಾಡಿಗೆ ಬೈಕ್‌ಗಳ ಮೊರೆಹೋಗುತ್ತಾರೆ. ಅದೇ ರೀತಿ, ಬಹುತೇಕ ಆಟೋ ಚಾಲಕರು ಮಾಲಿಕರಿಗೆ ವಾಹನಗಳನ್ನು ಒಪ್ಪಿಸಿ ಮನೆಗೆ ತೆರಳುವಾಗ, ಮಕ್ಕಳನ್ನು ಶಾಲೆಯಿಂದ ಕರೆತರುವವರು, ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಹೆಚ್ಚು ಬಳಕೆ ಮಾಡುತ್ತಿರುವುದು ಕಂಡುಬಂದಿದೆ.

ನಿಲುಗಡೆ ವ್ಯವಸ್ಥೆಯೇ ಇಲ್ಲ!: ನಗರದ ಹೃದಯಭಾಗಗಳಲ್ಲಿ ನಿಲುಗಡೆಗೆ ಸೂಕ್ತ ವ್ಯವಸ್ಥೆಗಳೇ ಇಲ್ಲ. ಅಲ್ಲದೆ, ಬಹುತೇಕ ಕಡೆಗಳಲ್ಲಿ “ನೊ-ಪಾರ್ಕಿಂಗ್‌’ ಸೂಚನೆಗಳೂ ಇರುವುದಿಲ್ಲ. ನಿಲುಗಡೆ ಇಲ್ಲದ ಕಡೆಗಳಲ್ಲಿ ವಾಹನ ನಿಲ್ಲಿಸಲು ಇವು ಕೂಡ ಕಾರಣ ಎಂದು ತಜ್ಞರು ಹೇಳುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next