ಬಿಹಾರ: ಅದೃಷ್ಟ ಯಾವ ಸಂದರ್ಭದಲ್ಲಿ ಬೇಕಾದರೂ ಖುಲಾಯಿಸಬಹುದು. ಕೇರಳದಲ್ಲಿ ಇತ್ತೀಚಿಗೆ ಆಟೋ ಚಾಲಕನೊಬ್ಬ ಲಾಟರಿ ಮೂಲಕ 25 ಕೋಟಿ ಗೆದ್ದು, ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದ. ಈಗ ಬಿಹಾರದ ವ್ಯಕ್ತಿಯೊಬ್ಬನಿಗೆ ಅಂಥದ್ದೇ ಅದೃಷ್ಟ ಖುಲಾಯಿಸಿದೆ.
ಬಿಹಾರದ ಬೋಜ್‌ಪುರದ ಚಾರ್ಪೋಖಾರಿ ಬ್ಲಾಕ್‌ನ ಠಾಕುರಿ ಗ್ರಾಮದ ನಿವಾಸಿಯಾಗಿರುವ ಸೌರವ್ ಕುಮಾರ್ ಡ್ರೀಮ್ 11ನಲ್ಲಿ ಡ್ರೀಮ್ ಟೀಮ್ ಮಾಡಿ ಅದರಿಂದ ಬಂದ ಅಂಕಗಳಿಂದ 1 ಕೋಟಿ ರೂ. ಗೆದ್ದಿದ್ದಾನೆ.
ಡ್ರೀಮ್ 11 ಒಂದು ಫ್ಯಾಂಟಸಿ ಕ್ರೀಡಾ ಆ್ಯಪ್ ಆಗಿದ್ದು, ಇದರಲ್ಲಿ ಆಡುವ ತಂಡಗಳ ಆಟಗಾರರನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಎರಡು ತಂಡಗಳಲ್ಲಿ ನಾಯಕ, ಉಪನಾಯಕ , ಬೌಲರ್, ಆಲ್ ರೌಂಡರ್ ನಂತೆ ಆಟಗಾರರನ್ನು ಆಯ್ದುಕೊಳ್ಳಬೇಕು. ಹೀಗೆ ನಾವು 30 ರೂ, 50 ರೂ. ನಮಗೆ ಎಷ್ಟು ಆಗುತ್ತದೋ ಅಷ್ಟು ಹಣವನ್ನು ಪಾವತಿಸಿ ಟೀಮ್ ಕಟ್ಟಬೇಕು. ನಾವು ಆಯ್ಕೆ ಮಾಡಿದ ತಂಡದ ಆಟಗಾರರು ಉತ್ತಮ ರೀತಿ ಆಡಿದರೆ ಅಲ್ಲಿ ನಮಗೆ ಅಂಕಗಳು ಸಿಗುತ್ತದೆ. ಅಂಕಗಳ ಅನುಸಾರ ನಮಗೆ ಹಣ ಸಿಗುತ್ತದೆ.
ಸೌರವ್ ಕುಮಾರ್ ಭಾರತ – ಆಸ್ಟ್ರೇಲಿಯ ನಡುವಿನ ಮೊದಲ ಟಿ-20 ಪಂದ್ಯಕ್ಕೆ ತಮ್ಮ ಡ್ರೀಮ್ ಟೀಮ್ ಮಾಡಿದ್ದರು. ಅವರು ಮಾಡಿದ ತಂಡದ ಆಟಗಾರರು ಆ ಪಂದ್ಯದಲ್ಲಿ ಉತ್ತಮ ರೀತಿ ಆಡಿದ್ದರು. ಮ್ಯಾಚ್ ಮುಗಿದ ಬಳಿಕ ಸೌರವ್ ಅವರಿಗೆ ಆಚ್ಚರಿಯೊಟ್ಟಿಗೆ ಆನಂದವೂ ಆಗಿದೆ. ಕಾರಣ ಅವರು ಮಾಡಿದ ತಂಡಕ್ಕೆ ದೊಡ್ಡ ಅಂಕ ಸಿಕ್ಕಿತು. ಅದಲ್ಲದೇ ಅವರು 1 ಕೋಟಿ ರೂ. ಗೆದ್ದಿರುವ ಸಂದೇಶವೂ ಅವರ ಮೊಬೈಲ್ ಗೆ ಬಂದಿದೆ.
ಈ ಬಗ್ಗೆ ಮಾತಾನಾಡಿರುವ ಅವರು, “ನನಗೆ 70 ಲಕ್ಷ ರೂ. ಬಂದಿದೆ. ಉಳಿದ ಹಣ ತೆರಿಗೆಯಾಗಿ ಕಡಿತವಾಗಿದೆ. ನಾನು 2019 ರಿಂದ ಡ್ರೀಮ್ ಟೀಮ್ ಮಾಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೆ ಅದಕ್ಕಾಗಿ ಸಾವಿರಾರು ರೂ. ಹಾಕಿದ್ದೇನೆ ಎಂದು ಹೇಳಿದ್ದಾರೆ. ಸೌರವ್ ಪದವಿ ಮಾಡುತ್ತಿದ್ದಾರೆ. ಅವರಿಗೆ ಕ್ರಿಕೆಟ್ ಆಡುವುದೆಂದರೆ ಇಷ್ಟದ ಹವ್ಯಾಸಗಳಲ್ಲೊಂದು. ದೊಡ್ಡ ಮೊತ್ತ ಗೆದ್ದ ಬಳಿಕ ಸೌರವ್ ಲೋಕಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.