ನವದೆಹಲಿ: ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದ ಉದಯ್ ಪುರ್, ಮಹರಾಷ್ಟ್ರದ ಅಮರಾವತಿ ನಂತರ ಬಿಹಾರದ ಸೀತಾಮರ್ಹಿಯಲ್ಲೂ ಅದೇ ರೀತಿಯ ದಾಳಿ ನಡೆದಿದ್ದು, ನೂಪುರ್ ಶರ್ಮಾ ಅವರ ವಿವಾದಿತ ಹೇಳಿಕೆಯ ವಿಡಿಯೋ ನೋಡಿದ ಯುವಕನೊಬ್ಬನಿಗೆ ಚೂರಿಯಿಂದ ಆರು ಬಾರಿ ಇರಿದ ಘಟನೆ ನಡೆದಿದೆ.
ಇದನ್ನೂ ಓದಿ:ಸಾಮೂಹಿಕ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಶಾಲಾ ಕಟ್ಟಡದಿಂದ ಜಿಗಿದ ಬಾಲಕಿ
ಘಟನೆಯಲ್ಲಿ ಅಂಕಿತ್ ಝಾ (23) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಜುಲೈ 16ರಂದು ನಡೆದಿರುವುದಾಗಿ ವರದಿ ವಿವರಿಸಿದೆ.
ಐದು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಮುಖ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮೊಹಮ್ಮದ್ ನಿಹಾಲ್, ಮೊಹಮ್ಮದ್ ಬಿಲಾಲ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ನೂಪುರ್ ವಿಡಿಯೋ ವೀಕ್ಷಿಸುತ್ತಿದ್ದ ಯುವಕನಿಗೆ ಆರು ಬಾರಿ ಇರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾನ್ ಬೀಡಾ ಅಂಗಡಿ ಸಮೀಪ ನಿಂತು ಝಾ ನೂಪುರ್ ವಿಡಿಯೋ ನೋಡುತ್ತಿದ್ದಾಗ, ಮತ್ತೊಬ್ಬ ಯುವಕ ಆಕ್ಷೇಪ ವ್ಯಕ್ತಪಡಿಸಿದ್ದ. ಈ ಸಂದರ್ಭದಲ್ಲಿ ವಾಗ್ವಾದ ನಡೆದಿತ್ತು. ಬಳಿಕ ಯುವಕ ತನ್ನ ಸಂಗಡಿರೊಂದಿಗೆ ಬಂದು ಅಂಕಿತ್ ಮೇಲೆ ಹಲ್ಲೆ ನಡೆಸಿ, ಆರು ಬಾರಿ ಚೂರಿಯಿಂದ ಇರಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ರಕ್ತಸ್ರಾವವಾಗಿದ್ದು, ಅಂಕಿತ್ ಝಾ ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ಹೇಳಿದೆ. ಪ್ರಕರಣದ ಬಗ್ಗೆ ಮೊದಲು ನೂಪುರ್ ಶರ್ಮಾ ವಿಚಾರದಲ್ಲಿ ದಾಳಿ ನಡೆದಿದೆ ಎಂದು ದೂರು ನೀಡಲಾಗಿತ್ತು. ಆದರೆ ಬಳಿಕ ಪೊಲೀಸರು ನೂಪುರ್ ಶರ್ಮಾ ವಿಷಯವನ್ನು ಬದಲಿಸಲು ಹೇಳಿ, ಬೇರೆ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ಉಲ್ಲೇಖಿಸಿದ್ದಾರೆಂದು ಝಾ ಪೋಷಕರು ಆರೋಪಿಸಿದ್ದಾರೆ.