ಪಟ್ನಾ : ಬಿಹಾರದ ಛಾಪ್ರಾ ರೈಲ್ವೇ ಜಂಕ್ಷನ್‌ನಲ್ಲಿ ಭಾರೀ ಪ್ರಮಾಣದ ಮಾನವ ತಲೆಬರುಡೆಗಳು ಮತ್ತು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು ಈ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ವ ಚಂಪಾರಣ್ ಜಿಲ್ಲೆಯ ನಿವಾಸಿಯಾಗಿರುವ ಸಂಜಯ್ ಪ್ರಸಾದ್ (29) ಎಂಬಾತನ ಬಳಿ ಇದ್ದ ಈ ಅಸ್ಥಿ ಅವಶೇಷಗಳನ್ನು ಮೊನ್ನೆ ಸೋಮವಾರ ವಶಪಡಿಸಿಕೊಳ್ಳಲಾಯಿತು. ಛಾಪ್ರಾ ಜಂಕ್ಷನ್ ನಲ್ಲಿನ ಜಿಆರ್‌ಪಿ ತಂಡದವರು ಆರೋಪಿಯನ್ನು ಸೆರೆ ಹಿಡಿದರು ಎಂದು ಡಿವೈಎಸ್ಪಿ (ರೈಲ್ವೇ) ತನ್ವೀರ್ ಅಹ್ಮದ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ 16 ಮಾನವ ತಲೆ ಬುರುಡೆಗಳು ಮತ್ತು 50 ಇತರ ಅಸ್ಥಿ ಅವಶೇಷಗಳನ್ನು ಬಂಧಿತ ಪ್ರಸಾದ್ ನಿಂದ ವಶಪಡಿಸಿಕೊಳ್ಳಲಾಯಿತು; ಮಾತ್ರವಲ್ಲದೆ ಆತನ ಬಳಿ ಇದ್ದ ಭೂತಾನೀ ಕರೆನ್ಸಿ, ವಿವಿಧ ದೇಶಗಳ ಎಟಿಎಂ ಕಾರ್ಡುಗಳು ಮತ್ತು ಒಂದು ವಿದೇಶಿ ಸಿಮ್ ಕೂಡ ವಶಪಡಿಸಿಕೊಳ್ಳಲಾಯಿತು ಎಂದು ಅಹ್ಮದ್ ಹೇಳಿದ್ದಾರೆ.
ಬಂಧಿತ ಪ್ರಸಾದ್ ನನ್ನು ಪೊಲೀಸರು ಪ್ರಶ್ನಿಸಿದಾಗ ಆತ “ನಾನು ಈ ಅಸ್ಥಿ ಅವಶೇಷಗಳನ್ನು ನೆರೆಯ ಉತ್ತರ ಪ್ರದೇಶದ ಬಲ್ಲಿಯಾ ದಿಂದ ಪಡೆದಿದ್ದೇನೆ; ನೆರೆಯ ಪಶ್ಚಿಮ ಬಂಗಾಲದ ಜಲಪಾಯ್‌ಗಾರಿಯಾಗಿ ನಾನು ಭೂತಾನಿಗೆ ಹೋಗುತ್ತಿದ್ದೇನೆ’ ಎಂದು ಹೇಳಿದನೆಂದು ಡಿವೈಎಸ್ಪಿ ತಿಳಿಸಿದ್ದಾರೆ.
ಆರೋಪಿ ಪ್ರಸಾದ್, ಭೂತಾನ್ ನಲ್ಲಿ ಮಾಟ ಮಂತ್ರ, ಭೂತ ಪ್ರೇತ ಉಚ್ಚಾಟನೆ ಮಾಡುವ ಮಂತ್ರವಾದಿಗಳಿಗೆ ಈ ತಲೆ ಬರುಡೆಗಳನ್ನು ಪೂರೈಸುವ ಗ್ಯಾಂಗಿನ ಭಾಗವಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಹೆಚ್ಚಿನ ತನಿಖೆಗಾಗಿ ಆತನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅಹ್ಮದ್ ಹೇಳಿದರು.