ಪಾಟ್ನಾ: ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಕೇಂದ್ರದಲ್ಲಿ ಮರಳಿ ಅಧಿಕಾರದ ಗದ್ದುಗೆಗೆ ಏರಲು ನಿರ್ಣಾಯಕವಾಗಿರುವ ರಾಜ್ಯಗಳಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿರುವ ಬಿಹಾರ ಕೂಡಾ ಒಂದು.
2014ರಲ್ಲಿ ಮೋದಿ ಜೊತೆ ನಿತೀಶ್ ಮುನಿಸಿಕೊಂಡಿದ್ದ ಕಾರಣ ಜೆಡಿಯು ಪಕ್ಷದ ಬೆಂಬಲವಿಲ್ಲದೇ ಬಿಜೆಪಿ ಇಲ್ಲಿ ಸ್ಪರ್ಧಿಸಿ ಬರೋಬ್ಬರಿ 28 ಸೀಟುಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ನಿತೀಶ್ ಕುಮಾರ್ ಅವರು ಮತ್ತೆ ಎನ್.ಡಿ.ಎ. ಮೈತ್ರಿಕೂಟಕ್ಕೆ ಮರಳಿರುವುದರಿಂದ ಇಲ್ಲಿ ಮೋದಿಗೆ ಹೆಚ್ಚಿನ ಬಲ ಸಿಕ್ಕಿದಂತಾಗಿದೆ.
ಈ ಬಾರಿ ಬಿಜೆಪಿ ಮತ್ತು ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಹಾಗೂ ಪಾಸ್ವಾನ್ ಅವರ ಎಲ್.ಜೆ.ಪಿ. ಪಾಲಿಗೆ 6 ಕ್ಷೇತ್ರಗಳು ಒಲಿದಿವೆ.
ರಾಜ್ಯದಲ್ಲಿ
ಭಾರತೀಯ ಜನತಾ ಪಕ್ಷವು ಪಾಟ್ನಾ ಸಾಹೀಬ್, ಪಾಟಲೀಪುತ್ರ, ಅರಾ, ಬಕ್ಸಾರ್, ಸರಾನ್, ಮಹಾರಾಜಗಂಜ್, ಪೂರ್ವಿ ಚಂಪಾರಣ್, ಪಶ್ಚಿಮ್ ಚಂಪಾರಣ್, ಧರ್ಬಾಂಗ, ಮುಝಾಫರಪುರ್, ಬೇಗುಸರಾಯ್, ಉಜೈರ್ ಪುರ್, ಮಧುಬನಿ, ಸಸರಮ್, ಅರಾರಿಯಾ, ಶೇಹಿಯಾರ್ ಮತ್ತು ಔರಂಗದಾಬಾದ್ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಇನ್ನು ಮುಖ್ಯಮಂತ್ರಿ
ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳವು ನಳಂದಾ, ಮುಂಗೇರ್, ಭಾಗಲ್ಪುರ, ಕಾರಕಟ್, ಗಯಾ, ಜಹಾನಾಬಾದ್, ಪೂರ್ಣಿಯಾ, ಬಾಂಕಾ, ಕಿಶನ್ ಗಂಜ್, ಸುಪೌಲ್, ಕಥಿಹಾರ್, ವಾಲ್ಮೀಕಿ ನಗರ್, ಸಿವಾನ್, ಗೋಪಾಲ್ ಗಂಜ್, ಜಂಝರ್ ಪುರ್, ಸೀತಾಮರ್ಹಿ ಮತ್ತು ಮಾಧೇಪುರಗಳಲ್ಲಿ ಸ್ಪರ್ಧಿಸಲಿದೆ.
ಪಾಸ್ವಾನ್ ಅವರ ಲೋಕ ಜನತಾಂತ್ರಿಕ ಪಕ್ಷದ ಅಭ್ಯರ್ಥಿಗಳು ಹಾಜೀಪುರ್, ವೈಶಾಲಿ, ಸಮಷ್ಠಿಪುರ್, ನಾವಾಡ, ಖಗಾರಿಯಾ ಮತ್ತು ಜಮುಯ್ ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಮೈತ್ರಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪಾಟ್ನಾದಲ್ಲಿರುವ ಜೆಡಿಯು ಕಛೇರಿಯಲ್ಲಿ ಪಕ್ಷದ ಹಿರಿಯ ನಾಯಕ ಬಶಿಷ್ಠ ನಾರಾಯಣ್ ಸಿಂಗ್ ಅವರು ಇಂದು ಪ್ರಕಟಿಸಿದರು.