Advertisement

ಎನ್‌ಡಿಎ ಪರವಾಗಿದೆಯೇ ಬಿಹಾರ? 

12:30 AM Mar 06, 2019 | |

ದೇಶದ 31 ರಾಜ್ಯಗಳ ಪೈಕಿ ನಲವತ್ತಕ್ಕಿಂತ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳು ನಾಲ್ಕು. ಅದರಲ್ಲಿ ಬಿಹಾರವೂ ಒಂದು. ಬಿಹಾರ 40, ಮಹಾರಾಷ್ಟ್ರ  48, ತಮಿಳುನಾಡು 39, ಉತ್ತರ ಪ್ರದೇಶ 80, ಪಶ್ಚಿಮ ಬಂಗಾಳ 42 ಕ್ಷೇತ್ರಗಳನ್ನು ಹೊಂದಿವೆ. ಯಾವುದೇ ಮೈತ್ರಿಕೂಟ ಅಥವಾ ಏಕ ಪಕ್ಷ ನವದೆಹಲಿಯಲ್ಲಿ ಆಡಳಿತ ನಡೆಸಬೇಕು ಎಂದಾದರೆ, ಈ ನಾಲ್ಕು ರಾಜ್ಯಗಳತ್ತ ಹೆಚ್ಚು ಗಮನ ಹರಿಸಲೇಬೇಕು. 

Advertisement

ಸದ್ಯ ಬಿಹಾರದಲ್ಲಿ ಬಿಜೆಪಿ – ಜೆಡಿಯು ಮೈತ್ರಿಕೂಟ ಆಡಳಿತ ನಡೆಸುತ್ತಿದೆ. ಒಂದು ಬಾರಿ ಬಿಜೆಪಿ ಸಖ್ಯ ಬೇಡವೆಂದು ದೂರವಾಗಿದ್ದ ಜೆಡಿಯು ಮತ್ತೆ ಬಿಜೆಪಿ ತೆಕ್ಕೆಗೆ ಬಂದು ಸರ್ಕಾರವನ್ನೂ ರಚಿಸಿದೆ. ಭಾನುವಾರ (ಮಾ.3) ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ಸರಿಸುಮಾರು ಹತ್ತು ವರ್ಷಗಳ ಬಳಿಕ ರಾಜಕೀಯ ರ್ಯಾಲಿಯಲ್ಲಿ ಭಾಗವಹಿಸಿ ಚುನಾವಣೆಯ ರಣಕಹಳೆಯನ್ನೂ ಮೊಳಗಿಸಿದ್ದಾರೆ.

ಒಟ್ಟು 40 ಸ್ಥಾನಗಳಿಗೆ ಸಂಬಂಧಿಸಿದಂತೆ ಎನ್‌ಡಿಎ ವ್ಯಾಪ್ತಿಯಲ್ಲಿ ಸ್ಥಾನ ಹೊಂದಾಣಿಕೆಯಂತೂ ಈಗಾಗಲೇ ಅಂತಿಮವಾಗಿದೆ. ನಲವತ್ತು ಸ್ಥಾನಗಳ ಪೈಕಿ ಬಿಜೆಪಿ, ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ. ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕಜನ ಶಕ್ತಿ ಪಕ್ಷ (ಎಲ್‌ಜೆಪಿ) ಆರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಕೇಂದ್ರದ ಮಾಜಿ ಸಚಿವ ಉಪೇಂದ್ರ ಖುಶ್ವಾಹಾ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್‌ಎಲ್‌ಎಸ್‌ಪಿ) 2018ರ ಆರಂಭದಿಂದಲೇ ಎನ್‌ಡಿಎ ತೊರೆಯುವ ಸೂಚನೆ ನೀಡಿ, ಅಂತಿಮವಾಗಿ ಮೈತ್ರಿಕೂಟಕ್ಕೆ ವಿದಾಯ ಹೇಳಿದೆ. ಅವರಿಗೆ ನೀಡಬೇಕಾಗಿದ್ದ ಲೋಕಸಭಾ ಸ್ಥಾನಗಳು ಎಲ್‌ಜೆಪಿ ಪಾಲಾಗಿದೆ. ಜತೆಗೆ ಉತ್ತರ ಪ್ರದೇಶ ಅಥವಾ ಉತ್ತರಾಖಂಡದಲ್ಲಿ 1 ಸ್ಥಾನ ಮತ್ತು ಸದ್ಯ ಲೋಕಸಭೆ ಸದಸ್ಯರಾಗಿರುವ ಪಾಸ್ವಾನ್‌ರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಡೀಲ್‌ ಆಗಿದೆ. ಹೀಗಾಗಿ, ಎನ್‌ಡಿಎ ಸ್ಥಾನ ಹೊಂದಾಣಿಕೆ ವಿಚಾರಕ್ಕೆ ಭದ್ರವಾಗಿಯೇ ಇದೆ. ಜತೆಗೆ ನಿತೀಶ್‌ ಕುಮಾರ್‌ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯವೇ ಇದೆ. 

ಇನ್ನು ಪ್ರತಿಪಕ್ಷಗಳತ್ತ ನೋಡುವುದಿದ್ದರೆ ಮಹಾ ಮೈತ್ರಿಕೂಟದಲ್ಲಿ ಹೊಸ ಸೇರ್ಪಡೆ ಎಂದರೆ ಉಪೇಂದ್ರ ಖುಶ್ವಾಹಾರ ಆರ್‌ಎಲ್‌ಎಸ್‌ಪಿ. ಜೆಡಿಯು, ಬಿಜೆಪಿ ಬಳಿಕ ಪ್ರಬಲವಾಗಿರುವ ಪಕ್ಷ ಲಾಲು ಪ್ರಸಾದ್‌ ಯಾದವ್‌ರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ). ಲಾಲು ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಜತೆಗೆ ಆರ್‌ಜೆಡಿಯ ನೇತೃತ್ವ ಯಾರು ಹೊರಬೇಕು ಎನ್ನುವ ವಿಚಾರವೇ ಪುತ್ರರಾದ ತೇಜಸ್ವಿ ಯಾದವ್‌, ತೇಜ್‌ಪ್ರತಾಪ್‌ ಯಾದವ್‌ ನಡುವೆ ಶೀತಲ ಸಮರವಿದೆ. ಜತೆಗೆ ಸಹೋದರಿ ಮಿಸಾ ಭಾರತಿ ಕೂಡ ಪಕ್ಷದ ಆಗುಹೋಗುಗಳಲ್ಲಿ ತನ್ನ ಮಾತೇ ನಡೆಯಬೇಕು ಎನ್ನುತ್ತಿದ್ದಾರೆ. 

ಇನ್ನು ಸ್ಥಾನ ಹೊಂದಾಣಿಕೆ ವಿಚಾರಕ್ಕೆ ಬಂದರೆ ಯಾವುದೂ ಅಂತಿಮವಾಗಿಲ್ಲ. 40 ಸ್ಥಾನಗಳ ಪೈಕಿ ಕಾಂಗ್ರೆಸ್‌ 12-13 ಸ್ಥಾನ ಕೇಳುತ್ತಿದೆ. ಆದರೆ ಆರ್‌ಜೆಡಿ 8-10 ಮಾತ್ರ ಕೊಡಲು ಸಾಧ್ಯ ಎನ್ನುತ್ತಿದೆ. ಸಣ್ಣ ಪಕ್ಷಗಳಾಗಿರುವ ಮಾಜಿ ಸಿಎಂ ಜಿತನ್‌ ರಾಂ ಮಾಂಝಿ ನೇತೃತ್ವದ ಹಿಂದುಸ್ಥಾನಿ ಅವಾಮಿ ಮೋರ್ಚಾ (ಎಚ್‌ಎಎಂ), ಮಾಜಿ ಸಚಿವ ಶರದ್‌ ಯಾದವ್‌ ನೇತೃತ್ವದ ಲೋಕತಾಂತ್ರಿಕ್‌ ಜನತಾ ದಳ, ವಿಕಾಸ್‌ಶೀಲ್‌ ಇನ್ಸಾನ್‌ ಪಾರ್ಟಿ, ಆರ್‌ಎಲ್‌ಎಸ್‌ಪಿ ಆರ್‌ಜೆಡಿ ನಿಯಂತ್ರಣಕ್ಕೆ ಒಳಪಟ್ಟು ಮೌನವಾಗಿವೆ. ಪ್ರತಿಪಕ್ಷಗಳ ಒಕ್ಕೂಟದಲ್ಲಿ ದರ್ಭಾಂಗ, ಮುಂಗೇರ್‌, ಪೂರ್ನಿಯಾ ಕ್ಷೇತ್ರಗಳಿಗೆ ತಗಾದೆ ಇದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿರುವ ಕೀರ್ತಿ ಆಜಾದ್‌ಗೆ ದರ್ಭಾಂಗ ಕ್ಷೇತ್ರ ನೀಡಬೇಕೆನ್ನುವುದು ಬೇಡಿಕೆ. ಆದರೆ ವಿಕಾಸ್‌ಶೀಲ್‌ ಇನ್ಸಾನ್‌ ಪಾರ್ಟಿ ನಾಯಕ ಮುಕೇಶ್‌ ಸಾಹಿ°ಗೆ ದರ್ಭಾಂಗದಿಂದ ಟಿಕೆಟ್‌ ಕೊಡುವುದರ ಬಗ್ಗೆ ಆರ್‌ಜೆಡಿ ಉತ್ಸುಕವಾಗಿದೆ. 

Advertisement

ಇನ್ನು ವಿವಾದಿತ ಸಂಸದ ಪಪ್ಪು ಯಾದವ್‌ಗೆ ಮಾಧೇಪುರ ಕ್ಷೇತ್ರದಿಂದ ಟಿಕೆಟ್‌ ನೀಡಿಕೆಗೆ ಆರ್‌ಜೆಡಿಯಲ್ಲೇ ವಿರೋಧವಿದೆ. ಅವರ ಪತ್ನಿ ರಂಜೀತ್‌ ರಂಜನ್‌ ಸುಪಾಲ್‌ ಕ್ಷೇತ್ರದಿಂದ ಕಾಂಗ್ರೆಸ್‌ ಸಂಸದೆ. ಮಾಧೇಪುರದಿಂದ ಶರದ್‌ ಯಾದವ್‌ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸ್ಥಾನಾರ್ಥಿಯಾಗಿ ಪೂರ್ನಿಯಾದಿಂದ ಟಿಕೆಟ್‌ ಬಯಸುತ್ತಿದ್ದಾರೆ ಪಪ್ಪು ಯಾದವ್‌. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಕಿಶನ್‌ಗಂಜ್‌,  ಸುಪಾಲ್‌ ಕ್ಷೇತ್ರಗಳನ್ನು ಗೆದ್ದಿದೆ. 2 ಸ್ಥಾನಗಳ ಆಧಾರದಲ್ಲಿ  ಕಾಂಗ್ರೆಸ್‌ಗೆ 13 ಸ್ಥಾನ ನೀಡಲು ಸಾಧ್ಯವಿಲ್ಲವೆಂಬುದು ಆರ್‌ಜೆಡಿ ವಾದ.

ಹಿಂದುಳಿದ ವರ್ಗಗಗಳ ಪ್ರಭಾವಿ ನಾಯಕರಾಗಿರುವ ಖುಶ್ವಾಹಾ, ಮುಕೇಶ್‌ ಸಾಹ್ನಿ, ಜಿತನ್‌ ರಾಂ ಮಾಂಝಿ ಈ ಬಾರಿ ನಿರ್ಣಾಯಕರಾಗುವ ಸಾಧ್ಯತೆಯೂ ಇಲ್ಲದೇ ಇಲ್ಲ.

ಮತ ಮಾಹಿತಿ
ಅತಿ ಹೆಚ್ಚು ಮತದಾರರಿರುವ ಲೋಕಸಭಾ ಕ್ಷೇತ್ರಗಳು
ಮಲ್ಕಾಜ್ಗಿರಿ(ತೆಲಂಗಾಣ)
31.83  ಲಕ್ಷ ಮತದಾರರು
51.05 %
2014ರ ಮತದಾನ ಪ್ರಮಾಣ

ಬೆಂಗಳೂರು ಉತ್ತರ (ಕರ್ನಾಟಕ)
24.01 ಲಕ್ಷ ಮತದಾರರು

ಬೆಂಗಳೂರು ಉತ್ತರ (ಕರ್ನಾಟಕ)
24.01  ಲಕ್ಷ ಮತದಾರರು

ಗಾಜಿಯಾಬಾದ್‌(ಉತ್ತರಪ್ರದೇಶ)
23.57   ಲಕ್ಷ ಮತದಾರರು
75.55 % 2014ರ ಮತದಾನ ಪ್ರಮಾಣ

ವಾಯುವ್ಯ ದೆಹಲಿ
21.94  ಲಕ್ಷ ಮತದಾರರು
76.09% 2014ರ ಮತದಾನ ಪ್ರಮಾಣ

ಬೆಂಗಳೂರು ಗ್ರಾ (ಕರ್ನಾಟಕ)
21.90  ಲಕ್ಷ ಮತದಾರರು
77.68 % 2014ರ ಮತದಾನ ಪ್ರಮಾಣ

ನಾವು ಅವರ ಮನೆಗೆ(ಪಾಕಿಸ್ತಾನಕ್ಕೆ) ನುಗ್ಗಿ ಹೊಡೆಯುತ್ತೇವೆ ಎನ್ನುತ್ತಾರೆ ಮೋದಿಯವರು. ಪ್ರಧಾನಿಗಳೇ ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರಗಳೆಂದು ಅರಿವಿದೆ ತಾನೇ? ಚುನಾವಣೆಗಾಗಿ ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಾ?
ಸಾಗರಿಕಾ ಘೋಷ್‌

ಸಾಗರಿಕಾ ಅವರೇ ಮೋದಿಯವರು ಪಾಕಿಸ್ತಾನಕ್ಕೆ ಧಮಕಿ ಹಾಕಿದರೆ ನೀವೇಕೆ ಸಿಟ್ಟಾಗುತ್ತಿದ್ದೀರಿ? ಅವರು ಪಾಕಿಸ್ತಾನಿ ಉಗ್ರರನ್ನು ಸದೆಬಡಿಯುತ್ತೇವೆ ಅಂದಿದ್ದಾರೆ. 
ಅನಿರ್ಬಾನ್‌ ಚಟರ್ಜಿ

ಇಂದಿನ ಕೋಟ್‌
ಅಮಿತ್‌ ಶಾ 240 ಉಗ್ರರು ಸತ್ತರು ಅಂದರೆ, ಅಹ್ಲುವಾಲಿಯಾ “ಒಬ್ಬರೂ ಸತ್ತಿಲ್ಲ’ ಅಂತಾರೆ. ಇವರಲ್ಲಿ ಸುಳ್ಳರು ಯಾರು? 
ದಿಗ್ವಿಜಯ ಸಿಂಗ್‌

ನಿಮ್ಮ ಈ ಚೌಕೀದಾರನ ಪ್ರಾಮಾಣಿಕತೆಯೇ ಪ್ರತಿಪಕ್ಷಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಹೀಗಾಗಿ ಅವರೆಲ್ಲ ಮೋದಿ ಹಠಾವೋ ಎನ್ನುತ್ತಿದ್ದಾರೆ. 
ನರೇಂದ್ರ ಮೋದಿ 

ಶೀಲಾ ದೀಕ್ಷಿತ್‌ಗೆ ಆಪ್‌ ಜತೆ ಮೈತ್ರಿ ಇಷ್ಟವಿಲ್ಲ ಎಂದರೆ ಕೇಜ್ರಿವಾಲ್‌ ಸಿಟ್ಟಾಗೋದ್ಯಾಕೆ? ಶೀಲಾರನ್ನು ಜೈಲಿಗೆ ಕಳುಹಿಸುತ್ತೇನೆ ಎಂದಿದ್ದವರು ಯಾರು? 
ಗೀತಿಕಾ ಎಸ್‌

ಮೊದಲ ಬಾರಿಯ ಮತದಾರರೇ ಗೆಲುವಿನ ಮೆಟ್ಟಿಲು
ಈ ಬಾರಿಯ ಚುನಾವಣೆಯಲ್ಲಿ 1997-2001ರ ನಡುವೆ ಜನಿಸಿದವರು ಮೊದಲ ಬಾರಿಗೆ ಮತ ಹಾಕಲಿದ್ದಾರೆ. ಕರ್ನಾಟಕ ಸೇರಿದಂತೆ 29 ರಾಜ್ಯಗಳಲ್ಲಿ ಅವರು ಪ್ರಧಾನ ಪಾತ್ರ ವಹಿಸಲಿದ್ದಾರೆ. ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಾಸರಿ 1.49 ಲಕ್ಷ ಹೊಸ ಮತದಾರರು ಇದ್ದಾರೆ. ಭಾರತದ ಚುನಾವಣಾ ಆಯೋಗವೇ ಈ ಬಗ್ಗೆ ವಿಶ್ಲೇಷಣೆ ನಡೆಸಿದೆ. 1997-2001ರ ನಡುವೆ ಜನಿಸಿದವರಿಗೆ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮತಹಾಕಲು ವಯೋಮಿತಿ ಅರ್ಹತೆ ಇರಲಿಲ್ಲ. 

ಈ ಪೈಕಿ ಕೆಲವರಿಗೆ 2018ರಲ್ಲಿ ನಡೆದಿದ್ದ ಐದು ರಾಜ್ಯಗಳ ವಿಧಾಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಸಿಕ್ಕಿರುವ ಸಾಧ್ಯತೆಯೂ ಇದೆ. ಭಾರತದ ಚುನಾವಣಾ ಆಯೋಗ ಸಂಗ್ರಹಿಸಿದ ಮಾಹಿತಿ ಆಧರಿಸಿ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಲೋಕಸಭೆ ಕ್ಷೇತ್ರವಾರು ನಡೆಸಿದ ಸಮೀಕ್ಷೆ ಪ್ರಕಾರ 18-22 ವರ್ಷ ವಯೋಮಿತಿ ನಡುವಿನ ಮತದಾರರು ಯಾವುದೇ ಒಂದು ಮೈತ್ರಿಕೂಟ ಮತ್ತು ಏಕ ಪಕ್ಷಕ್ಕೆ ಅಗತ್ಯವಾಗಿರುವ ಸರಳ ಬಹುಮತ (272)ಕ್ಕಿಂತ ಹತ್ತು ಸ್ಥಾನ ಅಂದರೆ 282 ಕ್ಷೇತ್ರಗಳಲ್ಲಿ ನಿರ್ಣಾಯಕರಾಗಲಿದ್ದಾರೆ.

2016, 2017, 2018, 2019ನೇ ಸಾಲಿನಲ್ಲಿ ಭಾರತದ ಚುನಾವಣಾ ಆಯೋಗ ನಡೆಸುವ ಮತದಾರರ ಪಟ್ಟಿಯ ಪರಿಷ್ಕರಣೆ ಮಾಹಿತಿ ಪ್ರಕಾರ ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ 217 ಸ್ಥಾನಗಳಲ್ಲಿ ಮೊದಲ ಬಾರಿ ಮತದಾನ ಮಾಡುವವರು ಪ್ರಧಾನ ಭೂಮಿಕೆ ವಹಿಸಲಿದ್ದಾರೆ. 

ಪಶ್ಚಿಮ ಬಂಗಾಳ 32, ಬಿಹಾರ 29, ಉತ್ತರ ಪ್ರದೇಶ 24, ಕರ್ನಾಟಕ 20, ತಮಿಳುನಾಡು 20, ರಾಜಸ್ಥಾನ 17, ಕೇರಳ 17, ಜಾರ್ಖಂಡ್‌ 13, ಆಂಧ್ರಪ್ರದೇಶ 12, ಮಹಾರಾಷ್ಟ್ರ 12, ಮಧ್ಯಪ್ರದೇಶ 11,  ಅಸ್ಸಾಂನ 10 ಕ್ಷೇತ್ರಗಳ ಪೈಕಿ ಮೊದಲ ಬಾರಿ ಮತ ಹಾಕುವವರು ಪ್ರಧಾನ ಭೂಮಿಕೆ ವಹಿಸಲಿದ್ದಾರೆ. ಈ ಎವ್ವ ರಾಜ್ಯಗಳಲ್ಲಿನ ಒಟ್ಟು ಲೋಕಸಭೆ ಸ್ಥಾನ 404.  

ದೇಶದಲ್ಲಿ ಅತ್ಯಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ (80)ದಲ್ಲಿ ಹೊಸ ಮತದಾರರ ಸರಸಾರಿ ಪ್ರಮಾಣ ಕ್ಷೇತ್ರವಾರು 1.15 ಲಕ್ಷ. ಒಟ್ಟಾರೆಯಾಗಿ ಹೇಳುವುದಿದ್ದರೆ ದೇಶದಲ್ಲಿ 8.1 ಕೋಟಿ ಹೊಸ ಮತದಾರರು ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next