ಬೆಂಗಳೂರು: ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಗ್ರ್ಯಾಂಡ್ ಫಿನಾಲೆ ಶುಕ್ರವಾರ (ಸೆ.16) ನಡೆದಿದ್ದು, ರೂಪೇಶ್ ಶೆಟ್ಟಿ ಅವರು ವಿಜೇತ ಎಂದು ನಿರೂಪಕ ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಕಳೆದ 42 ದಿನಗಳ ಕಾಲ ಬಿಗ್ ಬಾಸ್ ಕನ್ನಡ ಓಟಿಟಿ ಸ್ಪರ್ಧೆ ನಡೆದಿತ್ತು.ಭಾರಿ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿತ್ತು.
ಕಾಸರಗೋಡು ಮೂಲದ ರೂಪೇಶ್ ಶೆಟ್ಟಿ ಅವರಿಗೆ ಫಿನಾಲೆಯಲ್ಲಿ 5 ಲಕ್ಷ ರೂ. ಬಹುಮಾನ ನೀಡಲಾಯಿತು. ಕೊನೇ ವಾರದಲ್ಲಿ ವಿಶೇಷ ಟಾಸ್ಕ್ಗಳಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಸಾನ್ಯ ಐಯ್ಯರ್ ಜತೆಗೆ ಅವರು ಹೆಚ್ಚು ಆತ್ಮೀಯರಾಗಿದ್ದರು.ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ಕಾರಣದಿಂದಾಗಿ ಅವರು ಹೆಚ್ಚು ವೋಟ್ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ.
ಕಿಚ್ಚ ಸುದೀಪ್ ಅವರೇ ನಡೆಸಿಕೊದಲಿರುವ ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ಸೆ 24ರಿಂದ ಆರಂಭವಾಗಲಿದ್ದು, ಬಿಗ್ ಬಾಸ್ ಕನ್ನಡ ಒಟಿಟಿ ಫಿನಾಲೆಯಲ್ಲಿ ಜಯ ಸಾಧಿಸಿದ ರೂಪೇಶ್ ಶೆಟ್ಟಿ ಜತೆಗೆ ಸಾನ್ಯ ಐಯ್ಯರ್, ಆರ್ಯವರ್ಧನ್ ಗುರೂಜಿ ಮತ್ತು ರಾಕೇಶ್ ಅಡಿಗ ಅವರು ಪ್ರವೇಶಿಸಿದ್ದಾರೆ. ಅವರೊಂದಿಗೆ ಹಿಂದಿನ ಸೀಸನ್ನ 5 ಸ್ಪರ್ಧಿಗಳು ಪ್ರವೇಶಿಸಲಿದ್ದಾರೆ.
ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರಗಳಲ್ಲಿ ನಟಿಸಿರುವ ರೂಪೇಶ್ ಮಂಗಳೂರಿನಲ್ಲಿ ರೇಡಿಯೋ ಜಾಕಿಯಾಗಿಯೂ ಖ್ಯಾತಿ ಪಡೆದಿದ್ದಾರೆ.