Advertisement

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

01:54 PM Jul 07, 2020 | mahesh |

ನವದೆಹಲಿ: ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಮುಖ್ಯಸ್ಥ ಕುರ್ಚಿಯಿಂದ ಭಾರತದ ಶಶಾಂಕ್‌ ಮನೋಹರ್‌ ಅಧಿಕಾರವಧಿ ಮುಗಿಸಿ ಕೆಳಕ್ಕಿಳಿಯುತ್ತಿದ್ದಂತೆ ನೂತನ ಮುಖ್ಯಸ್ಥನ ಆಯ್ಕೆಗಾಗಿ ಇದೀಗ ತಯಾರಿ ನಡೆಯುತ್ತಿದೆ. ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಹಾಲಿ
ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಸೇರಿದಂತೆ ಹಲವಾರು ಘಟಾನುಘಟಿ ಆಟಗಾರರ ಹೆಸರು ಕೇಳಿ ಬರುತ್ತಿದೆ. ಒಟ್ಟಾರೆ ಚುನಾವಣಾ ಕಣ ರಂಗೇರಿದ್ದು ಐಸಿಸಿ ಮುಂದಿನ ಚುಕ್ಕಾಣಿಯನ್ನು ಯಾರು ಹಿಡಿಯಬಹುದು ಎನ್ನುವ ಕುತೂಹಲವೆದ್ದಿದೆ.

Advertisement

ಘಟಾನುಘಟಿಗಳ ಹೆಸರು: ಶಶಾಂಕ್‌ ಮನೋಹರ್‌ 2015ರಿಂದ ಐಸಿಸಿ ಮುಖ್ಯಸ್ಥರಾಗಿ ಅಧಿಕಾರವಹಿಸಿದ್ದರು. ವಿಶ್ವದಲ್ಲಿ ಕೋವಿಡ್ ವೈರಸ್‌ ಶುರುವಾಗುವ
ಸಮಯದಲ್ಲಿ ಅವರ ಅಧಿಕಾರವಧಿ ಮುಕ್ತಾಯವಾಗಿ ದ್ದರೂ ಚುನಾವಣೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇವರನ್ನು ಕೆಲವು ದಿನಗಳು ಐಸಿಸಿ ಮುಖ್ಯಸ್ಥರಾಗಿ ಮುಂದುವರಿಸಲು ನಿರ್ಧಾರ ತೆಗೆದು ಕೊಳ್ಳಲಾಗಿತ್ತು. ಇದೀಗ ಹೆಚ್ಚುವರಿ ದಿನಗಳು ಕೂಡ ಮುಗಿದಿದ್ದು ಶಶಾಂಕ್‌ ಮುಖ್ಯಸ್ಥ ಸ್ಥಾನದಿಂದ ಕೆಳಕ್ಕಿಳಿದಿದ್ದಾರೆ.

ಸದ್ಯ ಉಪಾಧ್ಯಕ್ಷ ಇಮ್ರಾನ್‌ ಖವಾಜ ಅವರನ್ನು ಹಂಗಾಮಿ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಚುನಾವಣೆಯನ್ನು ಇದೇ ತಿಂಗಳು ನಡೆಸಲು ಐಸಿಸಿ ತೀರ್ಮಾನ ತೆಗೆದುಕೊಂಡಿದ್ದು ಭಾರತದ ಮಾಜಿ ಕ್ರಿಕೆಟಿಗ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೆಸರು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಗಂಗೂಲಿ ಚುನಾವಣೆಗೆ ಸ್ಪರ್ಧಿಸಿದ್ದೇ ಆದರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಉಳಿದಂತೆ ಮಾಜಿ ಇಸಿಬಿ (ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ) ಅಧ್ಯಕ್ಷ ಕಾಲಿನ್‌ ಗ್ರೇವ್ಸ್‌ , ಶಶಾಂಕ್‌ ಮನೋಹರ್‌ ಕಾಲದಲ್ಲಿ ಉಪಾಧ್ಯಕ್ಷರಾಗಿದ್ದ ಹಾಲಿ ಐಸಿಸಿ ಹಂಗಾಮಿ ಮುಖ್ಯಸ್ಥ ಇಮ್ರಾನ್‌ ಖವಾಜ, ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ದಂತಕಥೆ ಡೇವ್‌ ಕ್ಯಾಮರೂನ್‌ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ.

ಚುಕ್ಕಾಣಿ ಹಿಡಿಯುವರೇ ಗಂಗೂಲಿ?: ಲೋಧಾ ಸಮಿತಿ ಶಿಫಾರಸು ಪ್ರಕಾರ ಸತತ ಮೂರನೇ ಅವಧಿಗೆ ಗಂಗೂಲಿ ಯಾವುದೇ ಹುದ್ಧೆಯಲ್ಲಿ ಮುಂದುವರಿಯುವಂತಿಲ್ಲ. ಬಿಸಿಸಿಐನಲ್ಲಿ ಅಧಿಕಾರ ಹೊಂದುವ ಮೊದಲು ಗಂಗೂಲಿ ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರಾಗಿದ್ದರು. ಇದೀಗ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ನಿಯಮ ಪ್ರಕಾರ 9 ತಿಂಗಳ ಅವಧಿಗೆ ಮಾತ್ರ ಬಿಸಿಸಿಐ ಅಧ್ಯಕ್ಷ ಹುದ್ಧೆಯಲ್ಲಿ ಮುಂದುವರಿಯಲು ಅವರಿಗೆ ಅವಕಾಶವಿದೆ. ಸದ್ಯ ಲೋಧಾ ಸಮಿತಿ ಶಿಫಾರಸುವಿನಲ್ಲಿ ತಿದ್ದುಪಡಿ ಮಾಡಿ ಸೌರವ್‌ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷರಾಗಿಯೇ ಮುಂದುವರಿಯಲು ಅನುವು ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಗ್ರೀನ್‌ ಸಿಗ್ನಲ್‌ ಸಿಕ್ಕಿದರೆ ಗಂಗೂಲಿ ಮತ್ತೆ ಅಧ್ಯಕ್ಷರಾಗಿ ಬಿಸಿಸಿಐನಲ್ಲಿ ಮುಂದುವರಿಯಲಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಇದಕ್ಕೆ ವಿರೋಧವಾಗಿ ತೀರ್ಪು ನೀಡಿದರೆ ಗಂಗೂಲಿ ಹುದ್ಧೆಯಿಂದ ಕೆಳಕ್ಕಿಳಿದು ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.

ಗ್ರೇವ್ಸ್‌ಗೂ ಇದೆ ಅವಕಾಶ: ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಮಾಜಿ ಅಧ್ಯಕ್ಷ ಕಾಲಿನ್‌ ಗ್ರೇವ್ಸ್‌ ಅತ್ಯಂತ ಚುರುಕು ಸ್ವಭಾವದ ಕೆಲಸದಿಂದ
ಗುರುತಿಸಿಕೊಂಡ ಸಮರ್ಥ ಆಡಳಿತಾಧಿಕಾರಿಯಾಗಿ ದ್ದಾರೆ. ಇವರಿಗೆ ಐಸಿಸಿ ಚುನಾವಣೆಯಲ್ಲಿ ಗೆಲ್ಲಬಹುದಾದ ಎಲ್ಲ ಅರ್ಹತೆಗಳೂ ಇದೆ. ಇವರಿಗೆ ಕ್ರಿಕೆಟ್‌
ಆಸ್ಟ್ರೇಲಿಯ, ಇಸಿಬಿಯಿಂದ ಸಂಪೂರ್ಣ ಬೆಂಬಲ ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ಬಿಸಿಸಿಐ ನಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿದ್ದರೆ ಗ್ರೇವ್ಸ್‌ಗೆ ಬೆಂಬಲ
ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಇವರು ಅಧಿಕಾರಕ್ಕೆ ಬರುವುದಕ್ಕೆ ದಕ್ಷಿಣ ಆಫ್ರಿಕಾ ಸೇರಿದಂತೆ ಇತರೆ ಕ್ರಿಕೆಟ್‌ ಮಂಡಳಿಗಳು ವಿರೋಧ
ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಪವರ್‌ ಫ‌ುಲ್‌ ಬಿಸಿಸಿಐ ಬೆಂಬಲಿಸಿದರೆ ಗ್ರೇವ್ಸ್ಗೆ ಸೋಲು ಎದುರಾಗದು ಎಂದು ವಿಶ್ಲೇಷಿಸಲಾಗಿದೆ.

Advertisement

ಪ್ರಭಾವಿ ಇಮ್ರಾನ್‌ ಖವಾಜ: ಶಶಾಂಕ್‌ ಮನೋಹರ್‌ ಕಾಲದಲ್ಲಿ ಉಪಾಧ್ಯಕ್ಷರಾಗಿದ್ದ ಹಾಲಿ ಐಸಿಸಿ ಹಂಗಾಮಿ ಮುಖ್ಯಸ್ಥ ಇಮ್ರಾನ್‌ ಖವಾಜ ತನ್ನ ಪ್ರಭಾವದಿಂದ ಮುಖ್ಯಸ್ಥರಾಗಿ ಆಯ್ಕೆಯಾದರೂ ಅಚ್ಚರಿ ಇಲ್ಲ. ಖವಾಜ ಸಿಂಗಾಪುರ ಕ್ರಿಕೆಟ್‌ ಸಂಸ್ಥೆಯ ಉಪಾಧ್ಯಕ್ಷರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಖವಾಜ
ಪ್ರಬಲ ಸ್ಪರ್ಧಿ ಎನ್ನುವುದರಲ್ಲಿ ಅನುಮಾನವಿಲ್ಲ.

ಪ್ರಬಲ ಡೇವ್‌ ಕ್ಯಾಮರೂನ್‌: ವಿಂಡೀಸ್‌ ಮಾಜಿ ಕ್ರಿಕೆಟಿಗ ಡೇವ್‌ ಕ್ಯಾಮರೂನ್‌ ಈಗಾಗಲೇ ಐಸಿಸಿ ಹುದ್ಧೆಗೆ ಸ್ಪರ್ಧೆ ಮಾಡುವುದಾಗಿ ಅಧಿಕೃತವಾಗಿ ಹೇಳಿರುವ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಯುನೈಟೆಡ್‌ ಸ್ಟೇಟ್ಸ್‌ ಕ್ರಿಕೆಟ್‌ ಹಾಲ್‌ ಆಫ್ ಫೇಮ್‌ ಬೆಂಬಲಿಸಲಿದೆ. ಕ್ಯಾಮರೂನ್‌ ಕೂಡ ಕಣದಲ್ಲಿರುವ ಪ್ರಬಲ ಸ್ಪರ್ಧಿ ಎನ್ನುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ.

ದಾದಾಗೆ ಲಂಕಾ ಕ್ರಿಕೆಟ್‌ ಬೆಂಬಲ
ಸೌರವ್‌ ಗಂಗೂಲಿ ಚುನಾವಣೆಗೆ ನಿಂತರೆ ಅವರನ್ನು ಬೆಂಬಲಿಸುವುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಹಾಲಿ ಕ್ರಿಕೆಟ್‌ ಕಾರ್ಯಾಚರಣೆಗಳ ನಿರ್ದೇಶಕ ಗ್ರೇಮ್‌ ಸ್ಮಿತ್‌ ಅವರು ಸೌರವ್‌ ಗಂಗೂಲಿಗೆ ಬೆಂಬಲ ನೀಡಿದ್ದರು, ಈ ಬೆನ್ನೆಲ್ಲೇ ಲಂಕಾ ಕೂಡ ಗಂಗೂಲಿಗೆ ಬೆಂಬಲ ನೀಡಿ ಅಧಿಕೃತ ಹೇಳಿಕೆ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next