Advertisement

ಜೆಡಿಎಸ್‌ಗೆ ಬಿಗ್‌ ಶಾಕ್‌

11:41 PM Jul 06, 2019 | Lakshmi GovindaRaj |

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್‌ನ ಅತೃಪ್ತ ಶಾಸಕರೇ ಕಂಟಕ. ನಮ್ಮವರ್ಯಾರೂ ಎಲ್ಲೂ ಹೋಗಲ್ಲ ಎಂದು ಬೀಗುತ್ತಿದ್ದ ಜೆಡಿಎಸ್‌ಗೆ ಮೂವರು ನಿಷ್ಠ ಶಾಸಕರು ಬುಡ ಅಲ್ಲಾಡಿಸಿದ್ದು, ಅದರಲ್ಲೂ ಹಳ್ಳಿಹಕ್ಕಿ ಖ್ಯಾತಿಯ ಎಚ್‌.ವಿಶ್ವನಾಥ್‌ “ಮಾಸ್ಟರ್‌ ಮೈಂಡ್‌’ ಆಗಿರುವುದು ಮರ್ಮಾಘಾತ ತರಿಸಿದೆ.

Advertisement

ಸರ್ಕಾರಕ್ಕೆ ಆತಂಕ ಎದುರಾದಾಗಲೆಲ್ಲಾ ಕಾಂಗ್ರೆಸ್‌ನವರದೇ ಸಮಸ್ಯೆ. ನಮ್ಮದೇನಿಲ್ಲ, ನಮ್ಮವರೆಲ್ಲರೂ ಗೆರೆ ದಾಟಲ್ಲ ಎಂದು ಹೇಳಿಕೊಳ್ಳುತ್ತಿದ್ದ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಮೂವರು ಶಾಸಕರು “ಶಾಕ್‌’ ನೀಡಿದ್ದಾರೆ.

ಅಮೆರಿಕದಲ್ಲಿದ್ದ ಕುಮಾರಸ್ವಾಮಿ ಅತೃಪ್ತ ಶಾಸಕರ ಮನವೊಲಿಕೆ ಮಾಡುತ್ತಿದ್ದರೆ ಅವರ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ. ಕೆ.ಆರ್‌.ನಗರ ಶಾಸಕ ನಾರಾಯಣಗೌಡ ಅವರು ಬಿಜೆಪಿ ಸಂಪರ್ಕದಲ್ಲಿದ್ದ ಗುಮಾನಿ ಇತ್ತಾದರೂ ಎಚ್‌.ವಿಶ್ವನಾಥ್‌ ಹಾಗೂ ನೆಚ್ಚಿನ ಶಿಷ್ಯ ಗೋಪಾಲಯ್ಯ ಅವರ ನಡೆ ಜೆಡಿಎಸ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಮತ್ತೂಂದು ವಿಚಾರ ಎಂದರೆ ಇನ್ನೂ ಎರಡರಿಂದ ಮೂವರು ಜೆಡಿಎಸ್‌ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ನಿಸರ್ಗ ನಾರಾಯಣಸ್ವಾಮಿ, ಕೆ.ಶ್ರೀನಿವಾಸಗೌಡ, ಸಿರಾ ಸತ್ಯನಾರಾಯಣ ಅವರ ಹೆಸರು ಚಾಲ್ತಿಗೆ ಬಂದಿವೆ.

ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ನಂತರದ ವಿದ್ಯಮಾನಗಳಲ್ಲಿ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಿ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಬಂದಾಗಲೇ ಒಂದಷ್ಟು ಬೆಳವಣಿಗೆಗಳು ಸಂಸತ್‌ ಬಜೆಟ್‌ ಮಂಡನೆಯಾದ ನಂತರ ನಡೆಯಬಹುದು ಎಂಬ ಅನುಮಾನವಿತ್ತು. ಆದರೆ, ಅದು ಕಾಂಗ್ರೆಸ್‌ ಪಾಳಯದಲ್ಲಿ ಆಗಬಹುದು ಎಂದು ಜೆಡಿಎಸ್‌ ನಾಯಕರು ಮೈ ಮರೆತಿದ್ದರು.

Advertisement

ಆದರೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಚ್‌.ವಿಶ್ವನಾಥ್‌ ಕೋಲ್ಕತ್ತಾ ಮೂಲಕ ದೆಹಲಿಗೆ ಬಂದು ಬಿಜೆಪಿ ನಾಯಕರ ಜತೆ ಉಪಾಹಾರ ಕೂಟ ನಡೆಸಿದಾಗ ಏನೋ ಎಡವಟ್ಟು ನಡೆಯುತ್ತಿದೆ ಎಂಬ ಮಾಹಿತಿ ಪಡೆದ ದೇವೇಗೌಡರು ತರಾತುರಿಯಲ್ಲಿ ರಾಜ್ಯಾಧ್ಯಕ್ಷರ ನೇಮಕವನ್ನೂ ಮಾಡಿದರು.

ಕಾರಣವೇನು?: ಎಚ್‌.ವಿಶ್ವನಾಥ್‌ ಅವರು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಚಿವರಾಗುವ ನಿರೀಕ್ಷೆಯಲ್ಲಿದ್ದರು. ಆದರೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸಲಾಗಿತ್ತು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಹೋಗುವ ಬಯಕೆ ಹೊಂದಿದ್ದರು. ಆದರೆ, ಅದಕ್ಕೆ ಸಿದ್ದರಾಮಯ್ಯ ಅವಕಾಶ ಕೊಡಲಿಲ್ಲ ಎಂದು ಮುನಿಸಿಕೊಂಡಿದ್ದರು.

ನಾರಾಯಣಗೌಡ ಅವರಿಗೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಟಿಕೆಟ್‌ ಸಿಗುವ ಅನುಮಾನವಿತ್ತು. ಆದರೂ ನಾಯಕರ ಮೇಲೆ ಒತ್ತಡ ಹಾಕಿ ಟಿಕೆಟ್‌ ಪಡೆದು ಗೆಲುವು ಸಾಧಿಸಿದ್ದರು. ಇದರ ನಂತರ ಲೋಕಸಭೆ ಚುನಾವಣೆಗೆ ಮುಂಚೆ ನಡೆದ ಆಪರೇಷನ್‌ ಕಮಲ ಕಾರ್ಯಾಚರಣೆಯಲ್ಲೂ ಬಿಜೆಪಿಗೆ ಹೋಗುವ ಸುದ್ದಿ ಹಬ್ಬಿತ್ತು. ಯಡಿಯೂರಪ್ಪ ಅವರೇ ಎಲ್ಲ ಶಾಸಕರು ನಾರಾಯಣಗೌಡರ ಹೋಟೆಲ್‌ನಲ್ಲಿದ್ದಾರೆ. ಅವರೂ ಬರ್ತಾರೆ, ನೀವು ಸೇರಿಕೊಳ್ಳಿ ಎಂದು ಹೇಳಿದ್ದರು ಎನ್ನಲಾದ ಆಡಿಯೋ ಟೇಪ್‌ ಸಹ ಬಿಡುಗಡೆಯಾಗಿತ್ತು.

ಇದಾದ ನಂತರ ಅವರ ಮೇಲೆ ಪಕ್ಷದ ನಾಯಕರು ಒಂದು ಕಣ್ಣು ಇಟ್ಟೇ ಇದ್ದರು. ಆದರೆ, ಜೆಡಿಎಸ್‌ಗೆ ಅಚ್ಚರಿ ಎಂದರೆ ಮಹಾಲಕ್ಷ್ಮಿ ಲೇ ಔಟ್‌ ಶಾಸಕ ಗೋಪಾಲಯ್ಯ ಅವರದು. ಎರಡು ದಿನಗಳ ಹಿಂದೆಯಷ್ಟೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಜೆಡಿಎಸ್‌ನ ಹಿರಿಯ ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ಇದೀಗ ದಿಢೀರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಯಕರಿಗೆ ಶಾಕ್‌ ಕೊಟ್ಟಿದ್ದಾರೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next