ನಾಲತವಾಡ: ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಕರು ಸಂಚರಿಸುತ್ತಿದ್ದರೆ, ಮತ್ತೂಂದೆಡೆ ಬಸ್‌ಗಳು ತಗ್ಗು ದಿನ್ನೆಗಳಲ್ಲಿ ಜೋಲಿ ಹೊಡೆಯುತ್ತಿದ್ದವು. ಸುಮಾರು ವರ್ಷಗಳಿಂದಲೂ ಹದಗೆಟ್ಟಿದ್ದ ಬಸ್ ನಿಲ್ದಾಣ ಸದ್ಯ ಹೊರ ರೂಪ ಪಡೆದಿದ್ದು ಪಟ್ಟಣದ ಸೌಂದರ್ಯ ಹೆಚ್ಚಿಸಿದೆ.
ಪಟ್ಟಣದ ಬೃಹತ್ ಬಸ್ ನಿಲ್ದಾಣ ಕಾಮಗಾರಿ ಸದ್ಯ ಭರದಿಂದ ಸಾಗಿದ್ದು, ಬರುವ ಆಗಸ್ಟ್ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ಸುಮಾರು ವರ್ಷಗಳಿಂದಲೂ ಕೆಸರು ಗದ್ದೆಯಂತಾಗಿದ್ದ ಬಸ್ ನಿಲ್ದಾಣದ ಸ್ಥಿತಿ ಕಂಡ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಸುಮಾರು 3 ಕೋಟಿ ರೂ.ವೆಚ್ಚದ ಅನುದಾನ ಒದಗಿಸಿ ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಭೂಮಿಪೂಜೆ ನಡೆಸಿದ್ದರು. ಕಳೆದ 8 ತಿಂಗಳ ಹಿಂದೆ ಆರಂಭಗೊಂಡ ಬಸ್ ನಿಲ್ದಾಣದ ಕಾಮಗಾರಿ ಯಾವುದೇ ಅಡೆತಡೆ ಇಲ್ಲದೇ ಪೂರ್ಣ ಹಂತ ತಲುಪಿದೆ.
ಗುಣಮಟ್ಟದ ಕಾಮಗಾರಿ: ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬಸ್ ನಿಲ್ದಾಣ ಕಾಮಗಾರಿ ಎಲ್ಲರ ಗಮನ ಸೆಳೆಯುತ್ತಿದೆ. ಸದ್ಯ ನಿಲ್ದಾಣದ ಪ್ಲಾಟ್ ಫಾರಂನಲ್ಲಿ ಬಸ್‌ಗಳ ಓಡಾಟಕ್ಕೆ ಸುಮಾರು 2 ಅಡಿಗೂ ಹೆಚ್ಚು ಎತ್ತರದಲ್ಲಿ ಫ್ಲೋರಿಂಗ್ ನಿರ್ಮಿಸಲಾಗಿದೆ. 6 ಪ್ಲಾಟ್‌ಫಾರಂಗಳು, 22 ಸುಸಜ್ಜಿತ ವಾಣಿಜ್ಯ ಮಳಿಗೆಗಳು, ಮಹಿಳಾ ವಿಶ್ರಾಂತಿ ಕೊಠಡಿಗಳ ನಿರ್ಮಾಣ ಪೂರ್ಣಗೊಂಡಿದ್ದು ಶೌಚಾಲಯಗಳ ಕಾಮಗಾರಿ ಭರದಿಂದ ಸಾಗಿದೆ.
ಮಳೆ ನೀರು ನಿಲ್ಲದಂತೆ ಎದುರಲ್ಲೇ ಬೃಹತ್ ಚರಂಡಿಗಳನ್ನು ನಿರ್ಮಿಸಲಾಗುತ್ತಿದ್ದು, ಆಗಮನ- ನಿರ್ಗಮನದ ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ವಾಣಿಜ್ಯ ಮಳಿಗೆಗಳಲ್ಲಿ ಟೈಲ್ಸ್ ಫ್ಲೋರಿಂಗ್ ಜತೆಗೆ ಸುಣ್ಣ ಬಣ್ಣದ ಕೆಲಸವೂ ಭರ್ಜರಿಯಾಗಿ ನಡೆದಿದೆ. ಸುಮಾರು ವರ್ಷಗಳಿಂದ ಕೆಸರು ಗದ್ದೆಯಂತಾಗಿದ್ದ ಬಸ್ ನಿಲ್ದಾಣ ಸದ್ಯ ಸುಂದರ ಕಟ್ಟಡವಾಗಿ ಗೋಚರಿಸುತ್ತಿದೆ. ಸಾರ್ವಜನಿಕರ, ಪ್ರಯಾಣಿಕರ ಗಮನ ಸೆಳೆಯುತ್ತಿದೆ.
ಪಟ್ಟಣದ ಬಸ್ ನಿಲ್ದಾಣ ನನ್ನ ಕನಸಿನ ಕೂಸು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಕೊರೊನಾ ಹಾಗೂ ಮಳೆಗಾಲಹಿನ್ನೆಲೆಯಲ್ಲಿ ಎಂದೋ ಮುಗಿಯಬೇಕಿದ್ದ ಬಸ್ ನಿಲ್ದಾಣ ಕಾಮಗಾರಿ ಈಗಾಗಲೇ ಶೇ.95 ಮುಗಿದಿದೆ. ಪಟ್ಟಣದ ಅಭಿವೃದ್ಧಿಯಲ್ಲಿ ಇದೂ ಒಂದು ಪ್ರಮುಖ ಬೇಡಿಕೆಯಾಗಿದ್ದು ನಿಲ್ದಾಣ ಕಾಮಗಾರಿ ತೃಪ್ತಿ ತಂದಿದೆ. ಕೆಲ ತಿಂಗಳಲ್ಲಿ ಲೋಕಾರ್ಪಣೆಗೊಳ್ಳುತ್ತದೆ.
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು, ಮುದ್ದೇಬಿಹಾಳ
ಕಾಮಗಾರಿ ಈಗಾಗಲೇ ಮುಕ್ತಾಯ ಹಂತದಲ್ಲಿದೆ. ಸುಣ್ಣ ಬಣ್ಣದ ಕೆಲಸವೂ ನಡೆದಿದೆ. ಶಾಸಕರೊಂದಿಗೆ ಸಂಪರ್ಕಿಸಿ ಲೋಕಾರ್ಪಣೆಯ ಮಹೂರ್ತ ನಿಗದಿ ಮಾಡಲಾಗುತ್ತದೆ.
-ಜೋಗಣ್ಣನವರ, ಎಇಇ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಿಜಯಪುರ.
-ಕಾಶೀನಾಥ ಬಿರಾದಾರ