ಮುಂಬಯಿ: ಪ್ರಶಾಂತ್ ನೀಲ್ ನಿರ್ದೇಶನದ ʼಕೆಜಿಎಫ್ ಚಾಪ್ಟರ್ -2ʼ ದಾಖಲೆ ಬರೆದ ಚಿತ್ರಗಳಲ್ಲೊಂದು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಾಕಿಭಾಯ್ ಯಶ್ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಆಮಿರ್ ಖಾನ್ ಅವರ ʼದಂಗಲ್ʼ, ಪ್ರಭಾಸ್ ಅವರ ʼಬಾಹುಬಲಿʼ ಬಳಿಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಅಂದರೆ ಅದು ʼಕೆಜಿಎಫ್ ಚಾಪ್ಟರ್ -2ʼ ಅದ್ಧೂರಿ ದೃಶ್ಯ, ಸಾಹಸ, ಹಾಡು, ಮೇಕಿಂಗ್ ಎಲ್ಲಾ ವಿಭಾಗದಲ್ಲೂ ಕಮಾಲ್ ಮಾಡಿದ ಸಿನಿಮಾ, ವಿಶ್ವದೆಲ್ಲೆಡೆ ಸದ್ದು ಮಾಡಿತ್ತು. ಈಗ ಸಿನಿಮಾದ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮ ಮಾತಾನಾಡಿದ್ದಾರೆ…
ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದದಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಂದರ್ಶನವೊಂದರಲ್ಲಿ ಕೆಜಿಎಫ್ -2 ಬಗ್ಗೆ ಮಾತಾನಾಡಿದ್ದಾರೆ. ʼದಿ ಕಾಶ್ಮೀರ್ ಫೈಲ್ಸ್ ಹಾಗೂ ʼಕೆಜಿಎಫ್ ಚಾಪ್ಟರ್ -2ʼ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕೆಜಿಎಫ್ -2 ಚಿತ್ರವನ್ನು ಬಾಲಿವುಡ್ ನಲ್ಲಿ ಯಾರೂ ಇಷ್ಟಪಟ್ಟಿಲ್ಲ. ಒಂದು ದಿನ ಬಾಲಿವುಡ್ ನ ದೊಡ್ಡ ನಿರ್ದೇಶಕರೊಬ್ಬರು ನನ್ನ ಬಳಿ “ರಾಮು ನಾನು 5 ಬಾರಿ ಕೆಜಿಎಫ್ ಚಾಪ್ಟರ್ -2 ಚಿತ್ರವನ್ನು ನೋಡಲು ಪ್ರಯತ್ನಪಟ್ಟೆ ಆದರೆ, ನನ್ನಿಂದ ಪ್ರತಿ ಬಾರಿಯೂ 30 ನಿಮಿಷಕ್ಕಿಂತ ಹೆಚ್ಚು ಅದನ್ನು ನೋಡಲು ಸಾಧ್ಯವಾಗಿಲ್ಲ” ಎಂದು ಹೇಳಿದ್ದರು. 70 ದಶಕದ ಚಿತ್ರದ ಹಾಗೆ ಕೆಜಿಎಫ್ ಚಿತ್ರವಿದೆ. ನಾವು ಇದನ್ನು ಔಟ್ ಡೇಟೆಡ್ ಎನ್ನುತ್ತೇವೆ ಎಂದು ಅವರು ನನ್ನ ಬಳಿ ಹೇಳಿದ್ದರು ಎಂದಿದ್ದಾರೆ.
ಹಾಲಿವುಡ್ ನಲ್ಲಿ ಒಂದು ಮಾತು ಇದೆ ಕಂಟೆಂಟ್ ಜೊತೆ ವಾದ ಮಾಡಬಹುದು ಆದರೆ ಅದರ ಯಶಸ್ಸಿನ ಜೊತೆ ಅಲ್ಲ, ಚಿತ್ರವನ್ನು ಇಷ್ಟಪಡ್ತೀರೋ ಇಲ್ವೋ ಆದರೆ ಅದರ ಸಕ್ಸಸ್ ಅನ್ನು ನಿರ್ಲಕ್ಷ್ಯ ಮಾಡಬಾರದು ಎಂದು ವರ್ಮ ಹೇಳಿದ್ದಾರೆ.
ಇದೇ ವೇಳೆ ವಿವೇಕ್ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಮಾತನಾಡುತ್ತ, ಕಾಶ್ಮೀರ್ ಫೈಲ್ಸ್ ಕೂಡ ಕಡಿಮೆಯಿಲ್ಲ, ಇದನ್ನು ಅಪರಿಚಿತ ನಿರ್ದೇಶಕ ಡೈರೆಕ್ಟ್ ಮಾಡಿದ್ದಾರೆ. ಅವರನ್ನು ಬಾಲಿವುಡ್ ಎಂದೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಅನುಪಮ್ ಖೇರ್ ಮಾತ್ರ ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಕಾಶ್ಮೀರ್ ಫೈಲ್ಸ್ ಅತ್ಯಂತ ನಿಧಾನವಾಗಿ ಸಾಗುವ ಸಿನಿಮಾ. ಫಿಲ್ಮ್ ಮೇಕರ್ ಗಳು ಏನನ್ನು ಮಾಡಬೇಕು, ಏನನ್ನು ಮಾಡಬಾರದೆನ್ನುವುದನ್ನು ಕಲಿಯಬೇಕು. ಚಿತ್ರದಲ್ಲಿ ಸರಿಯಾದ ಸ್ಕ್ರೀನ್ ಪ್ಲೇ, ನಟನೆ, ಇಂಟರ್ ವೆಲ್, ಕ್ಲೈಮ್ಯಾಕ್ಸ್ ಕೂಡ ಇಲ್ಲ. ಜನ ಇದನ್ನೇ ಮುಗಿಬಿದ್ದು ನೋಡುತ್ತಾರೆ ಎಂದು ಟೀಕಿಸಿದ್ದಾರೆ.