Advertisement

ಕಳಪೆ ಸಾಧನೆಗೆ ಈಶ್ವರಪ್ಪ ಅಸಮಾಧಾನ

01:02 PM Nov 29, 2019 | Naveen |

ಬೀದರ: ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಗ್ರಾಮೀಣ ನೀರು ಸರಬರಾಜು ಯೋಜನೆಗೆ ಜಿಲ್ಲೆಗೆ ಬಿಡುಗಡೆಯಾದ 645.54 ಲಕ್ಷ ರೂ. ಪೈಕಿ ಇದುವರೆಗೆ ಕೇವಲ 103.88 ಲಕ್ಷ ರೂ. ಬಳಸಿ ಶೇ. 4.39ರಷ್ಟು ಕಳಪೆ ಸಾಧನೆ ತೋರಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಪ್ರಿಲ್‌ ಒಳಗಾಗಿ ಬಳಸದಿದ್ದರೆ ಈ ಅನುದಾನ ಲ್ಯಾಪ್ಸ್‌ ಆಗುತ್ತದೆ. ಬಾಕಿ ಉಳಿದ ಅನುದಾನವನ್ನು ಈಗುಳಿದ ನಾಲ್ಕು ತಿಂಗಳ ಅವಧಿಯೊಳಗೆ ಬಳಸಲು ಒತ್ತು ಕೊಡಬೇಕು ಎಂದು ಸಚಿವರು ಸಂಬಂಧಿಸಿದ ಅಧಿ  ಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಬಾಕಿ ಉಳಿದ ಅನುದಾನಕ್ಕೆ ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದೆ.

ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು. ಜಿಲ್ಲೆಯಲ್ಲಿ ಮೇಲ್ಮಟ್ಟದ ನೀರು ಸಂಗ್ರಹಗಾರ, ನೀರು ಶುದ್ಧೀಕರಣ ಘಟಕಗಳ ಸ್ಥಿತಿಗತಿ ಬಗ್ಗೆ ಸುಧೀರ್ಘ‌ ಚರ್ಚೆ ನಡೆಯಿತು. ಭಾಲ್ಕಿಯಲ್ಲಿ 21 ಮೇಲ್ಮಟ್ಟದ ನೀರು ಸಂಗ್ರಹಗಾರಗಳ ಪೈಕಿ 17 ಪೂರ್ಣಗೊಳಿಸಿದ್ದು, 4 ಬಾಕಿ ಉಳಿದಿದೆ.

ಬಸವಕಲ್ಯಾಣದಲ್ಲಿ 19 ಘಟಕಗಳ ಪೈಕಿ 4, ಬೀದರನಲ್ಲಿ 9ರ ಪೈಕಿ 1, ಔರಾದ್‌ನಲ್ಲಿ 21ರ ಪೈಕಿ 6 ಬಾಕಿ ಉಳಿದಿವೆ ಎಂದು ಅ ಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕೆಆರ್‌ಐಡಿಎಲ್‌ನಿಂದ 102 ನೀರು ಶುದ್ಧೀಕರಣ ಘಟಕಗಳು ಕೆಲಸ ನಿರ್ವಹಿಸುತ್ತಿವೆ ಎಂದು ಅ ಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಅಧಿಕಾರಿಗಳಿಗೆ ಸಹಕಾರ ನೀಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದೇ ಸಭೆ ನಡೆಸಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಸರಿಯಾದ ಮಾಹಿತಿ ಒದಗಿಸಬೇಕು ಎಂದು ಸಚಿವರಾದ ಈಶ್ವರಪ್ಪ ತಿಳಿಸಿದರು. ತಾವು ಸುತ್ತಿದ ಎಷ್ಟೋ ಹಳ್ಳಿಗಳಲ್ಲಿ ವೀಕ್ಷಿಸಿದಂತೆ ನೀರು ಶುದ್ಧೀಕರಣ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಂಸದ ಭಗವಂತ ಖೂಬಾ ಅವರು ಇದೆ ವೇಳೆ ತಿಳಿಸಿದರು.

Advertisement

ಕುಡಿಯುವ ನೀರಿನ ಘಟಕಗಳ ಬಗ್ಗೆ ಅಧಿ ಕಾರಿಗಳು ಸಭೆಗೆ ಸುಳ್ಳು ಮಾಹಿತಿ ಕೊಡಬಾರದು ಎಂದು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧಿ ಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಾಮೂಹಿಕ ಶೌಚಾಲಯ ನಿರ್ಮಾಣ: ಸ್ವಚ್ಛ ಭಾರತ ಮಿಶನ್‌ ಯೋಜನೆಯಡಿ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಬಿಟ್ಟು ಹೋದ ಕುಟುಂಬಗಳ 5200 ಕುಟುಂಬಗಳ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಪೈಕಿ 1987 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಮಹಿಳೆಯರ ಮಾನದ ದೃಷ್ಟಿಯಿಂದ ಸಾಮೂಹಿಕ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ಕೊಡಬೇಕು. ಇದಕ್ಕಾಗಿ ಎಷ್ಟು ಅನುದಾನ ಕೇಳಿದರೂ ನಾವು ಕೊಡುತ್ತೇವೆ ಎಂದು ಸಚಿವರಾದ ಈಶ್ವರಪ್ಪ ತಿಳಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಶಾಸಕ ಬಿ.ನಾರಾಯಣರಾವ್‌, ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌, ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ, ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್‌. ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next