ಬೀದರ: ಹೊರಗಡೆಯಿಂದ ಯಾರೇ ಬಂದರೂ ಅವರನ್ನು ಮನೆಯೊಳಗಡಿ ಸೇರಿಸಬೇಡಿ ಎಂದು ಜನರಲ್ಲಿ ತಿಳಿವಳಿಕೆ ಮೂಡಿಸಲು ಜಿಲ್ಲಾದ್ಯಂತ ಎಲ್ಲ ಹಳ್ಳಿಗಳಲ್ಲಿ ಈ ಕೂಡಲೇ ಡಂಗೂರ ಹೊಡೆಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ| ಎಚ್. ಆರ್. ಮಹಾದೇವ ಅವರು ಎಲ್ಲ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಎಲ್ಲ ತಾಲೂಕುಗಳ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಒಬ್ಬರು ಸೋಂಕಿತರಾದರೆ ಅದು ಮನೆಯಲ್ಲಿನ ಎಲ್ಲರಿಗೂ, ಜತೆಗೆ ಅವರನ್ನು ಸಂಪರ್ಕಿಸಿದವರಿಗೂ ಹರಡಿ ಇಡೀ ಸಮೂಹಕ್ಕೆ ವ್ಯಾಪಿಸಲಿದೆ. ಈ ಗಂಭೀರ ವಿಷಯವನ್ನು ಜಿಲ್ಲೆಯ ಎಲ್ಲ ಜನರೂ ಅರಿಯಬೇಕು. ಜಿಲ್ಲೆಯಲ್ಲಿನ ಯಾವುದೇ ಹಳ್ಳಿಗಳಿಗೆ ಹೊರಗಿನಿಂದ ಯಾದಾದರು ಬಂದರೆ ಮೇಲಧಿಕಾರಿಗಳಿಗೆ ಮಾಹಿತಿ ಕೊಡದೇ ಅವರಿಗೆ ಊರೊಳಗೆ ಪ್ರವೇಶ ನೀಡಕೂಡದು ಎಂದು ಜಿಲ್ಲಾಧಿಕಾರಿಗಳು ಸಭೆ ಮೂಲಕ ಜಿಲ್ಲೆಯ ಎಲ್ಲ ಜನರಲ್ಲಿ ಮನವಿ ಮಾಡಿದರು.
ಹೊರಗಡೆಯಿಂದ ಯಾರೂ ಕೂಡ ಜಿಲ್ಲೆಯನ್ನು ಪ್ರವೇಶಿಸಬಾರದು ಎಂದೇ ಲಾಕ್‌ಡೌನ್ ಆದೇಶ ಜಾರಿ ಮಾಡಿದೆ. ಆದಾಗ್ಯೂ ಹೊರಗಿನವರು ಜಿಲ್ಲೆಯನ್ನು ಪ್ರವೇಶಿಸಿದರೆ ಹೇಗೆ? ಇದಕ್ಕೆ ಕಡಿವಾಣ ಹಾಕಬಾರದೇ? ನೀವು ಏಕೆ ಸುಮ್ಮನಿದ್ದೀರಿ ಎಂದು ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವ ತಹಶೀಲ್ದಾರ್, ತಾಪಂ ಇಒ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ ನೊಟೀಸ್ ಜಾರಿಗೆ ಆದೇಶಿಸಿದರು.
ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲನೆಗೆ ಕ್ರಮ ವಹಿಸಲು ಸಿಎಂ ಎಲ್ಲ ಜಿಲ್ಲಾಧಿಕಾರಿಗಳಿಗೆ ಪ್ರತಿನಿತ್ಯ ಕರೆ ಮಾಡಿ ತಿಳಿಸುತ್ತಿದ್ದಾರೆ. ಮೇಲಿಂದ ಮೇಲೆ ವಿಡಿಯೋ ಸಂವಾದ ನಡೆಸಿ ಕಟ್ಟುನಿಟ್ಟಿನ ಕ್ರಮ ವಹಿಸಲು ತಮಗೆ ತಿಳಿಸಲಾಗಿದೆ. ಪಕ್ಕದ ಮಹಾರಾಷ್ಟ್ರ, ತೆಲಂಗಾಣದಲ್ಲಿ ಪರಿಸ್ಥಿತಿ ಸರಿ ಇಲ್ಲ. ಹೀಗಿರುವಾಗ ಹೊರಗಿನ ಜನರು ಜಿಲ್ಲೆಯೊಳಗಡೆ ಪ್ರವೇಶ ಮಾಡಲೇಬಾರದು. ತಮ್ಮ ತಮ್ಮ ತಾಲೂಕುಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಇನ್ನೂ ಬಿಗಿಗೊಳಿಸಲು ಕ್ರಮ ವಹಿಸಬೇಕು. ಮನೆಮನೆ ಸಮೀಕ್ಷೆ ಕಾರ್ಯವನ್ನು ಸರಿಯಾಗಿ ನಡೆಸುವಂತೆ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರಾಥಮಿಕ ಮತ್ತು ಎರಡನೇ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಕೂಡಲೇ ಪರೀಕ್ಷೆಗೆ ಕಳುಹಿಸಿ ಬಾಕಿ ಇರದಂತೆ ನೋಡಿಕೊಳ್ಳಬೇಕು ಎಂದು ಡಿಸಿ ಬಸವಕಲ್ಯಾಣದ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಒಲ್ಡ್ ಸಿಟಿನಲ್ಲಿ ಕೆಲವರಿಗೆ ಅಗತ್ಯ ವಸ್ತುಗಳು ಲಭ್ಯವಾಗುತ್ತಿಲ್ಲ ಎನ್ನುವ ದೂರುಗಳಿದ್ದು, ಈ ಬಗ್ಗೆ ನೋಡಿಕೊಳ್ಳಲು ಮತ್ತು ಬೇಡಿಕೆ ಬರುವ ಎಲ್ಲ ಕಡೆಗಳಲ್ಲಿ ಸಮರ್ಪಕ ಆಹಾರಧಾನ್ಯಗಳ ಪೂರೈಕೆಗೆ ಎಲ್ಲ ರೀತಿಯ ಸುವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಡಿಸಿ ಅವರು ಇದೆ ವೇಳೆ ಸಿಎಂಸಿ ಆಯುಕ್ತರಿಗೆ ಸೂಚಿಸಿದರು.
ಕಳೆದೆರಡು ದಿನದಲ್ಲಿ ಹೊರಗಡೆಯಿಂದ ಬಸವಕಲ್ಯಾಣಕ್ಕೆ ಮಹಾರಾಷ್ಟ್ರದಿಂದ 42, ತೆಲಂಗಾಣದಿಂದ 37 ಮತ್ತು ಇನ್ನಿತರೆ 12 ಜನರು ಬಂದಿದ್ದಾರೆ. ಔರಾದ ತಾಲೂಕಿಗೆ ಹೊರಗಡೆಯಿಂದ 106 ಜನರು ಬಂದಿದ್ದಾರೆ. ಮುಂಬೈ ಮತ್ತು ಪುಣೆಯಿಂದ ನಾಲ್ಕು ಜನ ಮತ್ತು ಹೈದ್ರಾಬಾದ್ ನಿಂದ 30 ಜನರು ಹುಮಾನಾಬಾದಗೆ ಬಂದಿದ್ದಾರೆ. ಪುಣೆಯಿಂದ ಒಬ್ಬರು ಮತ್ತು ಮುಂಬೈಯಿಂದ ಮೂವರು ಭಾಲ್ಕಿಗೆ ಬಂದಿದ್ದಾರೆ. ಇದು ಆಶಾ ಕಾರ್ಯಕರ್ತೆಯರು ನೀಡಿದ ಮಾಹಿತಿ ಎಂದು ಎಲ್ಲ ತಹಶೀಲ್ದಾರರು ತಿಳಿಸಿದರು.
ವಿಡಿಯೋ ಸಂವಾದದಲ್ಲಿ ಜಿಪಂ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ಡಿ.ಎಲ್. ನಾಗೇಶ, ಎಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ, ಭಂವರಸಿಂಗ್ ಮೀನಾ, ಡಿಎಚ್‌ಒ ಡಾ| ವಿ.ಜಿ. ರೆಡ್ಡಿ, ಬ್ರಿಮ್ಸ್ ನಿರ್ದೇಶ ಶಿವಕುಮಾರ ಇದ್ದರು.