Advertisement

Bidar; ಸಂಸದ ಖೂಬಾಗೆ ಟಿಕೆಟ್‌ ಸಿಗುತ್ತದಾ? ಖಂಡ್ರೆ ಕಣಕ್ಕಿಳಿಯುತ್ತಾರಾ?

12:58 AM Jan 09, 2024 | Team Udayavani |

ಬೀದರ್‌: ಐದು ದಶಕಗಳ ಕಾಲ ಮೀಸಲು ಲೋಕಸಭೆ ಕ್ಷೇತ್ರವಾಗಿದ್ದ ಬೀದರ್‌ ಹಲವು ದಾಖಲೆಗಳನ್ನು ಬರೆದ ಕ್ಷೇತ್ರ. ಎರಡು ರಾಜ್ಯಗಳ ಜತೆ ಗಡಿಯನ್ನು ಹಂಚಿಕೊಂಡಿರುವ ಈ ಕ್ಷೇತ್ರ ಒಬ್ಬರನ್ನೇ ಸತತ ಐದು ಸಲ ಗೆಲ್ಲಿಸಿ ರಾಜಕಾರಣದಲ್ಲಿ ಗಮನ ಸೆಳೆದಿದೆ. ಈವರೆಗೆ 17 ಚುನಾವಣೆಗಳನ್ನು ಕಂಡಿದ್ದು, ಹತ್ತು ಬಾರಿ ಕಾಂಗ್ರೆಸ್‌ ಮತ್ತು ಏಳು ಬಾರಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಪೈಕಿ ದಿ| ರಾಮಚಂದ್ರ ವೀರಪ್ಪ ಸತತ ಐದು ಸಲ ಸಹಿತ ಒಟ್ಟು ಏಳು ಬಾರಿ ಸಂಸತ್‌ ಪ್ರವೇಶಿಸಿರುವುದು ವಿಶೇಷ.

Advertisement

ಹಾಲಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಇನ್ನೊಮ್ಮೆ ಕಣಕ್ಕಿಳಿ ಯುವ ಉತ್ಸಾಹದಲ್ಲಿದ್ದಾರೆ. ಇವರಿಗೆ ಮತ್ತೆ ಟಿಕೆಟ್‌ ಸಿಗುತ್ತಾ? ಇಲ್ಲವೇ ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕುತ್ತದಾ? ಕಾಂಗ್ರೆಸ್‌ನ ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರಿಗೆ ಬಿ ಫಾರಂ ಸಿಗುತ್ತದೆ ಮುಂತಾದ ಎಲ್ಲ ಸಂದೇಹಗಳ ನಡುವೆ ಮಹಾಸಮರಕ್ಕೆ ಕ್ಷೇತ್ರ ಅಣಿಯಾಗುತ್ತಿದೆ. ಟಿಕೆಟ್‌ಗೆ ಸಂಬಂಧಿಸಿ ಕಾಂಗ್ರೆಸ್‌ ಮತ್ತು ಬಿಜೆಪಿಯ ವೀಕ್ಷಕರು ಕ್ಷೇತ್ರಕ್ಕೆ ಬಂದು ಅಭಿಪ್ರಾಯ ಸಂಗ್ರಹಿಸಿ ಹೋಗಿದ್ದರೆ, ಆಕಾಂಕ್ಷಿಗಳು ವರಿಷ್ಠರ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ. ಈ ಬಾರಿ ಜೆಡಿಎಸ್‌ ಬೆಂಬಲದೊಂದಿಗೆ ಬಿಜೆಪಿ ಮತ್ತೆ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದರೆ, ಕಾಂಗ್ರೆಸ್‌ ಗತ ವೈಭವ ಮರುಸ್ಥಾಪಿಸಲು ತಂತ್ರ ರೂಪಿಸುತ್ತಿದೆ.

ಬಿಜೆಪಿಯಿಂದ ಯಾರು?
ಟಿಕೆಟ್‌ ಖಚಿತ ಎಂಬ ವಿಶ್ವಾಸದಲ್ಲಿ ಸಂಸದ ಖೂಬಾ ಪ್ರಚಾರವೇನೋ ಶುರು ಮಾಡಿದ್ದಾರೆ. ಆದರೆ ಸ್ವಪಕ್ಷದ ಶಾಸಕರ ಜತೆಗಿನ ಗುದ್ದಾಟ ಮತ್ತು ತಮ್ಮ ಕಾರ್ಯವೈಖರಿ ಬಗ್ಗೆ ಸ್ಥಳೀಯವಾಗಿ ಅಸಮಾಧಾನಕ್ಕೆ ಕಾರಣವಾಗಿದ್ದ ಖೂಬಾಗೆ ಟಿಕೆಟ್‌ ಇನ್ನೂ ನಿಗೂಢ. ಈ ಮಧ್ಯೆ ಹಾಲಿ ಸಂಸದರನ್ನು ಬಿಟ್ಟು ಅರ್ಹರನ್ನು ಪರಿಗಣಿಸುವಂತೆ ಮಾಜಿ ಶಾಸಕ ಸುಭಾಷ ಕಲ್ಲೂರ್‌, ಅಟಲ್‌ ಫೌಂಡೇಶನ್‌ ಅಧ್ಯಕ್ಷ ಗುರುನಾಥ ಕೊಳ್ಳುರ್‌ ಸಹಿತ 10ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಬಹಿರಂಗವಾಗಿ ಲಾಬಿ ನಡೆಸುತ್ತಿದ್ದಾರೆ. ಕೇಸರಿ ಪಡೆಯ ಶಾಸಕರು ತೆರೆಯ ಹಿಂದೆ ಇವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನಲ್ಲೂ ಪೈಪೋಟಿ
ಇನ್ನು ಈ ಬಾರಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ ಸಹ ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆಸಿದೆ. ಆರಂಭದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರ ಹೆಸರು ಮಾತ್ರ ಮುನ್ನೆಲೆಗೆ ಬಂದಿತ್ತು. ಆದರೆ ವಿಧಾನಸಭೆ ಗೆಲುವಿನ ಉತ್ಸಾಹ ಕಾಂಗ್ರೆಸ್‌ ಪಡೆಯಲ್ಲೂ ಆಕಾಂಕ್ಷಿಗಳ ಪಟ್ಟಿ ಬೆಳೆಯುವಂತೆ ಮಾಡಿದೆ.
ಈ ನಡುವೆ ರಾಜ್ಯದ ಕೆಲವು ಕ್ಷೇತ್ರ ಗಳಲ್ಲಿ ಹಾಲಿ ಸಚಿವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ ಚಿಂತನೆ ನಡೆಸಿದ್ದು, ಅದರಲ್ಲಿ ಬೀದರ್‌ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೆಸರೂ ಕೇಳಿಬರುತ್ತಿದೆ. ಆದರೆ ಖಂಡ್ರೆ ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರುವ ಕಿರಿಯ ಪುತ್ರ ಸಾಗರ್‌ ಖಂಡ್ರೆ ಅವರನ್ನು ಚುನಾ ವಣ ರಾಜಕೀಯಕ್ಕೆ ಕರೆತರುವ ಯತ್ನದಲ್ಲಿ ದ್ದಾರೆ. ತಮ್ಮ ತಂದೆ ಡಾ| ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಮತ್ತು ಜನ್ಮದಿನದ ಮೂಲಕ ಮಗನನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಿರುವುದು ಗಮನಾರ್ಹ.

ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿರುವ ರಾಜಶೇಖರ ಪಾಟೀಲ್‌, ವರಿಷ್ಠರು ಸೂಚಿಸಿದರೆ ಹಾಲಿ ಸಂಸದರ ವಿರುದ್ಧ ತೊಡೆ ತಟ್ಟಲು ಸಿದ್ಧ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ನೆಲೆಯನ್ನು ಕಾಯ್ದು ಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ಕೇಂದ್ರ ರಾಜಕಾರಣಕ್ಕೆ ಪ್ರವೇಶಿಸಿದರೆ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳು ವುದು ಕಷ್ಟವಾಗಬಹುದು ಎಂಬ ಸಣ್ಣ ಹಿಂಜರಿಕೆಯೂ ಅವರಲ್ಲಿದೆ.

Advertisement

ಈ ಕ್ಷೇತ್ರದಲ್ಲಿ ಲಿಂಗಾಯತರ ಬಳಿಕ ಮರಾಠ ಸಮುದಾಯವೇ ದೊಡ್ಡ ಸಮಾಜ. ಮರಾಠ ಸಮಾಜದ ಹಿರಿಯ ನಾಯಕರಾಗಿರುವ ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಅವರನ್ನು ಸ್ಪರ್ಧೆಗಿಳಿಸಿದರೆ ಬಿಜೆಪಿಯ ಸಾಂಪ್ರದಾ ಯಿಕ ಮರಾಠ ಮತಗಳನ್ನು ಸೆಳೆಯ ಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್ಸಿನದ್ದಾಗಿದೆ ಎನ್ನಲಾಗುತ್ತಿದೆ. ಇದರ ಜತೆಗೆ ಬೀದರ್‌ ಸಹಿತ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾಕರಿಗೆ ಟಿಕೆಟ್‌ ನೀಡಬೇಕೆಂಬ ಕೂಗು ಹೆಚ್ಚಿದೆ. ಹಾಗಾಗಿ ಟಿಕೆಟ್‌ ಗೊಂದಲಕ್ಕೆ ಕಾಲವೇ ಉತ್ತರಿಸಲಿದೆ.

ಹಾಲಿ ಸಂಸದ (ಬಿಜೆಪಿ) ಭಗವಂತ ಖೂಬಾ
ಬಿಜೆಪಿ ಸಂಭ್ಯಾವರು
ಭಗವಂತ ಖೂಬಾ
ಸುಭಾಷ ಕಲ್ಲೂರ
ಗುರುನಾಥ ಕೊಳ್ಳುರ್‌

ಕಾಂಗ್ರೆಸ್‌ ಸಂಭಾವ್ಯರು
ಈಶ್ವರ ಖಂಡ್ರೆ
ಸಾಗರ ಖಂಡ್ರೆ
ರಾಜಶೇಖರ ಪಾಟೀಲ್‌

– ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next